ರಾಮನಗರ: ಜಿಲ್ಲೆಯಲ್ಲಿ ದಾಖಲೆಗಳಿಲ್ಲದ ಜನವಸತಿ ಪ್ರದೇಶಗಳನ್ನು ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿಸಿ ಸುಮಾರು 425 ಹೊಸ ಉಪಗ್ರಾಮಗಳನ್ನು ರಚಿಸುವ ಕಾರ್ಯ ನಡೆದಿದೆ.
ರಾಮನಗರ: ಜಿಲ್ಲೆಯಲ್ಲಿ ದಾಖಲೆಗಳಿಲ್ಲದ ಜನವಸತಿ ಪ್ರದೇಶಗಳನ್ನು ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿಸಿ ಸುಮಾರು 425 ಹೊಸ ಉಪಗ್ರಾಮಗಳನ್ನು ರಚಿಸುವ ಕಾರ್ಯ ನಡೆದಿದೆ.
ಅತಿ ಹೆಚ್ಚು ಮಾಗಡಿ ತಾಲೂಕಿನಲ್ಲಿ 148 ಹಾಗೂ ಅತಿ ಕಡಿಮೆ ಚನ್ನಪಟ್ಟಣ ತಾಲೂಕಿನಲ್ಲಿ 42 ಉಪ ಗ್ರಾಮಗಳು ರಚನೆಯಾಗುತ್ತಿವೆ. ಉಳಿದಂತೆ ರಾಮನಗರ ತಾಲೂಕಿನಲ್ಲಿ 69, ಕನಕಪುರ ತಾಲೂಕಿನಲ್ಲಿ 121 ಹಾಗೂ ಹಾರೋಹಳ್ಳಿ ತಾಲೂಕಿನಲ್ಲಿ 45 ಉಪ ಗ್ರಾಮಗಳ ರಚಿಸಲು ಉದ್ದೇಶಿಸಲಾಗಿದೆ.ಈ 425 ಉಪಗ್ರಾಮಗಳ ಪೈಕಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ 346 ಜನವಸತಿ ಪ್ರದೇಶಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದರಲ್ಲಿ 116ರ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, 230 ಬಾಕಿ ಇವೆ. ಅಂತಿಮ ಅಧಿಸೂಚನೆ ಹೊರಡಿಸಲು ಸಲ್ಲಿಸಲಾದ 115 ಜನವಸತಿಪ್ರದೇಶಗಳ ಪ್ರಸ್ತಾವನೆಗಳ ಪೈಕಿ 103ರ ಅಂತಿಮ ಅಧಿಸೂಚನೆಯಾಗಿದ್ದು, 12 ವಸತಿ ಪ್ರದೇಶಗಳು ಬಾಕಿ ಉಳಿದಿವೆ.
ಈಗ ಏನಾಗಿದೆ ?ಗ್ರಾಮಗಳಲ್ಲಿ ವಾಸ ಮಾಡುತ್ತಿದ್ದರೂ ಗ್ರಾಮಠಾಣಾ ವ್ಯಾಪ್ತಿಗೆ ಸೇರದ ಕಾರಣ ಸೂಕ್ತ ದಾಖಲೆಗಳು ಇಲ್ಲದೆ ಬಹುತೇಕ ಜನರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ 2019ರ ಅಕ್ಟೋಬರ್ 15ರಂದು ಉಪಗ್ರಾಮಗಳ ರಚನೆಗೆ ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ ಜಿಲ್ಲೆಯ 425 ಗ್ರಾಮಗಳು ಉಪಗ್ರಾಮಗಳಾಗಿ ಗ್ರಾಮಠಾಣಾ ವ್ಯಾಪ್ತಿಗೆ ಸೇರ್ಪಡೆಯಾಗಲಿವೆ.
ಹಲವಾರು ವರ್ಷಗಳಿಂದಲೂ ಜನರು ಗ್ರಾಮ ಠಾಣೆಗೆ ಹೊಂದಿರುವ ಸರ್ವೆ ನಂಬರ್, ಖಾಸಗಿ ಜಮೀನುಗಳು ಸೇರಿ ಇತರ ಕಡೆಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. ಆದರೆ, ಈ ಮನೆಗಳು ಗ್ರಾಮಠಾಣಾ ವ್ಯಾಪ್ತಿಗೆ ಸೇರದ ಕಾರಣ ಗ್ರಾಮ ಪಂಚಾಯಿತಿಗಳು ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ.ಜೊತೆಗೆ ತಮ್ಮದೇ ಮನೆ ಹಾಗೂ ನಿವೇಶನಗಳಿಗೆ ನಮೂನೆ 11, ಇ-ಖಾತೆ ಪಡೆಯಲು ಆಗುತ್ತಿರಲಿಲ್ಲ. ಇದರಿಂದ ಜನರಿಗೆ ಮೂಲಸೌಲಭ್ಯ ದೊರೆಯುತ್ತಿರಲಿಲ್ಲ. ಇದನ್ನು ಮನಗಂಡು ಇಂತಹ ನಿವಾಸಿಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಉಪಗ್ರಾಮಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಉಪಗ್ರಾಮಗಳ ಘೋಷಣೆ ಹೇಗೆ?ಯಾವುದೇ ಒಂದು ದಾಖಲೆರಹಿತ ಜನವಸತಿ ಪ್ರದೇಶ ಮೂಲ ಗ್ರಾಮಠಾಣಾದಿಂದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಇದ್ದರೆ ಇದನ್ನು ಮೂಲ ಗ್ರಾಮದ ಭಾಗವೆಂದು ಪರಿಗಣಿಸಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 5ರಂತೆ ಉಪಗ್ರಾಮ ಎಂದು ಘೋಷಣೆ ಮಾಡಲಾಗುತ್ತದೆ. ಇದಕ್ಕೆ ಅಗತ್ಯವಾಗಿ ಬೇಕಾದ ನಕ್ಷೆ ಸಿದ್ಧಪಡಿಸಲಾಗುತ್ತದೆ. ಈ ವೇಳೆ ಜನವಸತಿ ಪ್ರದೇಶ, ರಸ್ತೆ, ಸರ್ಕಾರಿ ಶಾಲೆಗಳು, ಖಾಸಗಿ ಸ್ವತ್ತು ಇದ್ದರೂ ಇದನ್ನು ಗ್ರಾಮಠಾಣಾ ಎಂದು ಪರಿಗಣಿಸಿ, ಉಪಗ್ರಾಮವೆಂದು ಘೋಷಣೆ ಮಾಡಲಾಗುತ್ತದೆ.
ಅಧಿಕೃತ ದಾಖಲೆಗಳು ಲಭ್ಯ:ದಾಖಲೆರಹಿತ ಜನವಸತಿ ಪ್ರದೇಶಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದರೂ ಸೂಕ್ತ ರಸ್ತೆ ಇಲ್ಲದೆ, ಮನೆಗಳಿಗೆ ಇ-ಖಾತೆ, ನಮೂನೆ 11 ಸೇರಿ ಯಾವುದೇ ದಾಖಲೆಗಳು ಇಲ್ಲದೆ ಕಷ್ಟದಲ್ಲಿಯೇ ಜೀವನ ನಡೆಸುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಒಂದು ವೇಳೆ ಮನೆ /ಆಸ್ತಿ ಮಾರಾಟ ಮಾಡಬೇಕಾದರೂ ಸರ್ವೆ ನಂಬರ್ ಲೆಕ್ಕದಲ್ಲಿಯೇ ಮಾರಾಟ ಮಾಡಬೇಕಾದ ಪರಿಸ್ಥಿತಿ ಇತ್ತು. ಸರ್ಕಾರ ಸಹ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮುಂದೆ ಬರುತ್ತಿರಲಿಲ್ಲ. ಆದರೀಗ ಉಪಗ್ರಾಮಗಳೆಂದು ಘೋಷಣೆ ಮಾಡುವುದರಿಂದ ಇದು ಗ್ರಾಮಠಾಣಾ ವ್ಯಾಪ್ತಿಗೆ ಒಳಪಡಲಿದ್ದು, ಅಧಿಕೃತ ದಾಖಲೆಗಳು ದೊರೆಯುವ ಜತೆಗೆ, ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ದೊರೆಯಲಿದೆ.
ಬಾಕ್ಸ್ .................ದಾಖಲೆ ರಹಿತ ಜನವಸತಿಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡುವ ಸಂಬಂಧ ರಾಮನಗರ ಉಪವಿಭಾಗಾಧಿಕಾರಿ ಬಿನೋಯ್ ಮತ್ತು ತಹಸೀಲ್ದಾರ್ ತೇಜಸ್ವಿನಿ ನೇತೃತ್ವದಲ್ಲಿ ಅಧಿಕಾರಿಗಳು ಶುಕ್ರವಾರ ಮತ್ತು ಶನಿವಾರ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ನಗರದ ತಾಲೂಕು ಆಡಳಿತ ಸೌಧದಲ್ಲಿ ಅರ್ಜಿದಾರರ ದಾಖಲೆಗಳ ಪರಿಶೀಲನೆ ಕಾರ್ಯ ನಡೆದ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವೆಡೆಯಿಂದ ನೂರಾರು ಜನರು ಆಗಮಿಸಿ ಜಮಾಯಿಸಿದ್ದರು.ಜಿಲ್ಲೆಯ ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ಹಾಗೂ ಹಾರೋಹಳ್ಳಿ ತಾಲೂಕುಗಳ ವ್ಯಾಪ್ತಿಯಲ್ಲಿ ದಾಖಲೆ ರಹಿತ ಜನವಸತಿ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ದಾಖಲೆಗಳ ಪರಿಶೀಲನೆ ಕಾರ್ಯ ಬಿರುಸಿನಿಂದ ನಡೆಯಿತು.
3ಕೆಆರ್ ಎಂಎನ್ .ಜೆಪಿಜಿರಾಮನಗರದ ತಾಲೂಕು ಆಡಳಿತ ಸೌಧದಲ್ಲಿ ಉಪವಿಭಾಗಾಧಿಕಾರಿ ಬಿನೋಯ್ ಮತ್ತು ತಹಸೀಲ್ದಾರ್ ತೇಜಸ್ವಿನಿ ದಾಖಲೆ ರಹಿತ ಜನವಸತಿಗಳ ನಿವಾಸಿಗಳ ದಾಖಲೆಗಳನ್ನು ಪರಿಶೀಲಿಸಿದರು.
