ಹೊಸ ವರ್ಷಾಚರಣೆ ನಗರಾದ್ಯಂತ ಬಂದೋಬಸ್ತ್ ವ್ಯವಸ್ಥೆ

| Published : Dec 31 2024, 01:03 AM IST

ಸಾರಾಂಶ

ಸಾರ್ವಜನಿಕರಿಗೆ ಶುಭ ಕೋರುವ ನೆಪದಲ್ಲಿ ಕೀಟಲೆ/ ಅಸಭ್ಯವಾಗಿ ವರ್ತಿಸುವುದನ್ನು ತಡೆಯಲು ಇನ್ಸ್ ಪೆಕ್ಟರ್ ಗಳ ನೇತೃತ್ವದಲ್ಲಿ ಠಾಣಾವಾರು ವಿಶೇಷ ಕಾರ್ಯಪಡೆ ತಂಡಗಳನ್ನು ರಚಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು2025ರ ಹೊಸ ವರ್ಷದ ಆಚರಣೆಯ ಸಂಬಂಧ ಮೈಸೂರು ನಗರದಲ್ಲಿ ಸಾರ್ವಜನಿಕರು ಹೊಸ ವರ್ಷಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಲಿದ್ದು, ಈ ವೇಳೆ ಸಾರ್ವಜನಿಕರು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಆದ್ಯತೆಯನ್ನಾಗಿ ಪರಿಗಣಿಸಿ ನಗರಾದ್ಯಂತ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.ನಗರದಲ್ಲಿ ಬಂದೋಬಸ್ತ್ ಕರ್ತವ್ಯಕ್ಕಾಗಿ 4 ಡಿಸಿಪಿ, 12 ಎಸಿಪಿ, 32 ಇನ್ಸ್ ಪೆಕ್ಟರ್ ಗಳು, 53 ಎಸ್ಐ, 112 ಎಎಸ್ಐ, 895 ಮುಖ್ಯಪೇದೆ/ ಪೇದೆ, 79 ಮಹಿಳಾ ಸಿಬ್ಬಂದಿ, 8 ತುಕಡಿ ಸಿಎಆರ್, 4 ತುಕಡಿಕೆ.ಎಸ್.ಆರ್.ಪಿ, 2 ಕಮಾಂಡೋ ಪಡೆ ತಂಡ, 1 ಶ್ವಾನದಳ ತಂಡ, 2 ಎ.ಎಸ್.ಸಿ ತಂಡವನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಸಾರ್ವಜನಿಕರಿಗೆ ಶುಭ ಕೋರುವ ನೆಪದಲ್ಲಿ ಕೀಟಲೆ/ ಅಸಭ್ಯವಾಗಿ ವರ್ತಿಸುವುದನ್ನು ತಡೆಯಲು ಇನ್ಸ್ ಪೆಕ್ಟರ್ ಗಳ ನೇತೃತ್ವದಲ್ಲಿ ಠಾಣಾವಾರು ವಿಶೇಷ ಕಾರ್ಯಪಡೆ ತಂಡಗಳನ್ನು ರಚಿಸಲಾಗಿದೆ. ಮಹಿಳೆಯರ ರಕ್ಷಣೆಯ ಹಿತದೃಷ್ಠಿಯಿಂದ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ ಸುರಕ್ಷತಾ ಪಿಂಕ್ ಗರುಡಾ ( ಚಾಮುಂಡಿ) ಪಡೆಗಳು ಗಸ್ತಿನಲ್ಲಿರುತ್ತದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶ್ವಾನದಳ ಮತ್ತು ವಿಧ್ವಂಸಕ ಕೃತ್ಯ ತಡೆ ತಂಡದಿಂದ ತಪಾಸಣೆ ನಡೆಸಲಾಗುವುದು. ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ಕಣ್ಗಾವಲು ನಿರ್ವಹಿಸಲಾಗುತ್ತದೆ.ವಾಹನಗಳನ್ನು ವೀಲಿಂಗ್ ಮತ್ತು ಡ್ರಾಗ್ ರೇಸ್ ಮಾಡುವುದನ್ನು ಹಾಗೂ ಕರ್ಕಶ ಶಬ್ಧ ಮಾಡುವುದನ್ನು ತಡೆಗಟ್ಟಲು ಸಂಚಾರ ಪೊಲೀಸರು ಒಳಗೊಂಡ ಕ್ಷಿಪ್ರ ಕಾರ್ಯಪಡೆಗಳನ್ನು ರಚಿಸಲಾಗಿದೆ. ನಗರದ ಎಲ್ಲಾ ಪ್ರದೇಶಗಳಲ್ಲಿ ಚಾಲನೆಯಲ್ಲಿರುತ್ತದೆ, ಕಾನೂನು ಉಲ್ಲಂಘಿಸುವ ಪ್ರಕರಣಗಳು ಕಂಡು ಬಂದಲ್ಲಿ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವವರ ಮತ್ತು ಕಿಡಿಗೇಡಿಗಳ ಬಗ್ಗೆ ನಿಗಾ ವಹಿಸಲು ಚೆಕ್ ಪೋಸ್ಟ್ ಗಳನ್ನು ತೆರೆಯುವದರ ಜೊತೆಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ 112 ವಾಹನ, ಹೈವೇ ಪೆಟ್ರೋಲ್ ವಾಹನಗಳನ್ನು ನಿಯೋಜಿಸಲಾಗುವುದು. ಹೊಸ ವರ್ಷಾಚರಣೆ- ನಿಯಮ ಪಾಲಿಸಲು ಸೂಚನೆಸಾರ್ವಜನಿಕ ನೆಮ್ಮದಿಗೆ ಭಂಗ ಉಂಟಾಗದಂತೆ ಕ್ರಮ ವಹಿಸಲು ಸಾರ್ವಜನಿಕರಿಗೆ, ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್, ಹೋಂ ಸ್ಟೇ, ಸರ್ವಿಸ್ ಅಪಾರ್ಟ್ಮೆಂಟ್, ಅಪಾರ್ಟ್ ಮೆಂಟ್ ಅಸೋಸಿಯೇಷನ್, ಮಾಲ್ಸ್ ಮತ್ತು ಸಂಘ ಸಂಸ್ಥೆಗಳಿಗೆ ಈ ಕೆಳಕಂಡ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸೂಚಿಸಿದ್ದಾರೆ.ಡಿ.31ರ ರಾತ್ರಿ ಹೊಸ ವರ್ಷ ಆಚರಿಸುವ ನಗರದ ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಹೋಂ ಸ್ಟೇ, ಸರ್ವಿಸ್ ಅಪಾರ್ಟ್ ಮೆಂಟ್, ಅಪಾರ್ಟ್ ಮೆಂಟ್ ಅಸೋಸಿಯೇಷನ್, ಮಾಲ್ಸ್ ಮತ್ತು ಸಂಘ ಸಂಸ್ಥೆಗಳು ಪೊಲೀಸ್ ಆಯುಕ್ತರ ಕಚೇರಿಯಿಂದ ಅನುಮತಿ ಪಡೆದು ಮಧ್ಯರಾತ್ರಿ 1 ಗಂಟೆಯೊಳಗೆ ಕಡ್ಡಾಯವಾಗಿ ಮುಕ್ತಾಯಗೊಳಿಸುವುದು. ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸುವುದು.ಯಾವುದೇ ಪ್ರಕರಣಗಳು ಸಂಭವಿಸಿದ್ದಲ್ಲಿ ಪತ್ತೆ ಹಚ್ಚಲು ಸಹಕಾರಿಯಾಗುವಂತೆ ಸಾರ್ವಜನಿಕರು ತಮ್ಮ ಅಂಗಡಿ, ಮನೆ ಇತ್ಯಾದಿ ಸ್ಥಳಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದು. ತಮ್ಮ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವಂತೆ ಧ್ವನಿವರ್ಧಕವನ್ನು ಅಳವಡಿಸಿಕೊಂಡು ಶಬ್ಧವು ಕಾನೂನಿನ ಅಡಿಯಲ್ಲಿ ನಿರ್ಧಿಷ್ಟ ಪಡಿಸಿರುವ ಡೆಸಿಬಲ್ ಗಳನ್ನು ಮೀರದಂತೆ ಕಡಿಮೆ ಧ್ವನಿಯಲ್ಲಿ ಕಾರ್ಯಕ್ರಮ ನಡೆಸಬೇಕು.ಸಾಂಸ್ಕೃತಿಕ ಕಾರ್ಯಕ್ರಮದ ನೆಪದಲ್ಲಿ ಅಶ್ಲೀಲ, ಅರೆಬೆತ್ತಲೆ, ಮಾದಕ ವಸ್ತುಗಳ ಸೇವನೆ, ಜೂಜಾಟ ನಡೆಸುವುದನ್ನು ನಿಷೇಧಿಸಿದ್ದು, ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ಬಲವಂತವಾಗಿ ನಿಲ್ಲಿಸಿ, ಅವರ ಇಚ್ಚೆಗೆ ವಿರುದ್ದವಾಗಿ ಶುಭ ಕೋರುವ ನೆಪದಲ್ಲಿ ಕಿರಿಕಿರಿ ಉಂಟುಮಾಡಿದ್ದಲ್ಲಿ ಕಾನೂನು ಕ್ರಮ ವಹಿಸಲಾಗುವುದು.ರಸ್ತೆಗಳಲ್ಲಿ, ಪಾರ್ಕ್ ಗಳಲ್ಲಿ, ವಾಹನಗಳಲ್ಲಿ ಕುಳಿತು ಮದ್ಯಪಾನ ಮಾಡುವವರ ವಿರುದ್ಧ, ಸೋಷಿಯಲ್ ಮೀಡಿಯಾ ಮೂಲಕ ಹೊಸ ವರ್ಷಾಚರಣೆ ಸಂಬಂಧ ಅಪಪ್ರಚಾರ ಪೋಸ್ಟ್ ಗಳನ್ನು ಹಾಕಿದ್ದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.ಸಾಮಾಜಿಕ ಜಾಲಾತಾಣಗಳ ಮೂಲಕ ಉಡುಗೊರೆ ನೀಡುವ/ ಉಡುಗೊರೆ ಬಂದಿರುವ ನೆಪದಲ್ಲಿ ಕಳುಹಿಸುವ ಯಾವುದೇ ಅಪರಿಚಿತ ಲಿಂಕ್ ಗಳಿಗೆ ಮರುಳಾಗಿ ಡಿಜಿಟಲ್ ಮೋಸಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸುವುದು.ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಆಸ್ಪದ ಕೂಡದೆ ಇತರರಿಗೆ ತೊಂದರೆಯಾಗದಂತೆ ಹೊಸ ವರ್ಷವನ್ನು ಆಚರಿಸಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರೊಂದಿಗೆ ಸಹಕರಿಸುವಂತೆ ಪೊಲೀಸ್ ಆಯುಕ್ತರು ಕೋರಿದ್ದಾರೆ.ಇಂದು ಸಂಜೆಯಿಂದಲೇ ಚಾಮುಂಡಿಬೆಟ್ಟಕ್ಕೆ ನಿರ್ಬಂಧಹೊಸ ವರ್ಷಾಚರಣೆಯ ಹಿನ್ನಲೆಯಲ್ಲಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಡಿ.31ರ ಸಂಜೆ 7ರ ನಂತರ ಉತ್ತನಹಳ್ಳಿ ಕ್ರಾಸ್ ಗೇಟ್, ದೇವಿವನ ಗೇಟ್, ಚಾಮುಂಡಿಬೆಟ್ಟ ಪಾದದ ಗೇಟ್, ಲಲಿತಮಹಲ್ ಗೇಟ್ ಮೂಲಕ ಪ್ರವೇಶವನ್ನು ನಿರ್ಭಂದಿಸಲಾಗಿದೆ. ತಾವರೆಕಟ್ಟೆ ಗೇಟ್ ಮುಖಾಂತರ ಡಿ.31ರ ರಾತ್ರಿ 8 ರಿಂದ ಜ.1ರ ಬೆಳಗ್ಗೆ 6 ಗಂಟೆಯವರೆಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.ಚಾಮುಂಡಿಬೆಟ್ಟಕ್ಕೆ ಯಾವುದೇ ರೀತಿಯ ಊಟ, ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ರಾತ್ರಿ 9ರ ನಂತರ ಸಾರ್ವಜನಿಕರು ಚಾಮುಂಡಿಬೆಟ್ಟದಿಂದ ವಾಪಸ್ ಬರುವಂತೆ ಸೂಚಿಸಲಾಗಿದೆ. ಇದು ಚಾಮುಂಡಿಬೆಟ್ಟದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಹಾಗೂ ಚಾಮುಂಡಿಬೆಟ್ಟದಲ್ಲಿ ವಾಸಿಸುವವರಿಗೆ ಅನ್ವಯಿಸುವುದಿಲ್ಲ. ಚಾಮುಂಡಿಬೆಟ್ಟದಿಂದ ರಾತ್ರಿ 9 ಗಂಟೆ ನಂತರ ವಾಪಸ್ ಬರುವವರು ತಾವರೆಕಟ್ಟೆ ದ್ವಾರದ ಮುಖಾಂತರ ಬರುವಂತೆ ಅವರು ಸೂಚಿಸಿದ್ದಾರೆ.