ರೈತರ ಸಮಸ್ಯೆ ಪರಿಹಾರಕ್ಕೆ ಶೃಂಗೇರಿ ಕ್ಷೇತ್ರ ಮಟ್ಟದ ರೈತ ಒಕ್ಕೂಟ ರಚನೆ: ಗದ್ದೇಮನೆ ವಿಶ್ವನಾಥ್

| Published : Nov 17 2025, 12:30 AM IST

ರೈತರ ಸಮಸ್ಯೆ ಪರಿಹಾರಕ್ಕೆ ಶೃಂಗೇರಿ ಕ್ಷೇತ್ರ ಮಟ್ಟದ ರೈತ ಒಕ್ಕೂಟ ರಚನೆ: ಗದ್ದೇಮನೆ ವಿಶ್ವನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ರೈತರ ಸಮಸ್ಯೆ ಪರಿಹಾರಕ್ಕಾಗಿ ಕೊಪ್ಪ, ನರಸಿಂಹರಾಜಪುರ, ಶೃಂಗೇರಿ ತಾಲೂಕು ಸೇರಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ರಚನೆ ಮಾಡಿದ್ದೇವೆ ಎಂದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ನೂತನ ಅಧ್ಯಕ್ಷ ವಕೀಲ ಗದ್ದೇಮನೆ ವಿಶ್ವನಾಥ್ ತಿಳಿಸಿದರು.

- ಶೃಂಗೇರಿ ಕ್ಷೇತ್ರದ ನೂತನ ರೈತ ಒಕ್ಕೂಟ ಅಸ್ತಿತ್ವಕ್ಕೆ । 3 ತಾಲೂಕಿನ 254 ಗ್ರಾಮದಲ್ಲೂ ಒಬ್ಬೊಬ್ಬ ಪ್ರತಿನಿಧಿ ಆಯ್ಕೆ। ಕಾನೂನು ಬದ್ದ ಹೋರಾಟಕ್ಕೆ ವಕೀಲರ ನೇಮಕ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ರೈತರ ಸಮಸ್ಯೆ ಪರಿಹಾರಕ್ಕಾಗಿ ಕೊಪ್ಪ, ನರಸಿಂಹರಾಜಪುರ, ಶೃಂಗೇರಿ ತಾಲೂಕು ಸೇರಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ರಚನೆ ಮಾಡಿದ್ದೇವೆ ಎಂದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ನೂತನ ಅಧ್ಯಕ್ಷ ವಕೀಲ ಗದ್ದೇಮನೆ ವಿಶ್ವನಾಥ್ ತಿಳಿಸಿದರು.

ಭಾನುವಾರ ಗದ್ದೇಮನೆ ತಮ್ಮ ನಿವಾಸದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂದು ಶೃಂಗೇರಿ ಕ್ಷೇತ್ರದ 3 ತಾಲೂಕುಗಳ ರೈತ ಪ್ರತಿನಿಧಿಗಳ ಪೂರ್ವ ಭಾವಿ ಸಭೆ ನಡೆಸಲಾಗಿದೆ. ರೈತರ ಸಮಸ್ಯೆಗಳ ಪರಿಹಾರಕ್ಕೆ ಕಾನೂನು ಬದ್ಧ ಹೋರಾಟ ಮಾಡಬೇಕು ಎಂಬ ಅಭಿಪ್ರಾಯ ಬಂದಿದೆ. ಕ್ಷೇತ್ರ ಮಟ್ಟದ ರೈತರ ಒಕ್ಕೂಟ ಅಗತ್ಯ ಎಂಬ ಅಭಿಪ್ರಾಯದಂತೆ ಇಂದು ನೂತನವಾಗಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಪ್ರಾರಂಭಿಸಿದ್ದೇವೆ. ನಾಳೆಯೇ ಸಂಘ ರಿಜಿಸ್ಟರ್ ಮಾಡುತ್ತೇವೆ. ಶೃಂಗೇರಿ ಕ್ಷೇತ್ರದಲ್ಲಿ 254 ಗ್ರಾಮ ಬರಲಿದ್ದು ಪ್ರತಿ ಗ್ರಾಮದಲ್ಲೂ ಕ್ಷೇತ್ರ ರೈತ ಒಕ್ಕೂಟಕ್ಕೆ ಒಬ್ಬ ಸದಸ್ಯರಿರುತ್ತಾರೆ. 8 ಹೋಬಳಿ ಇದ್ದು ಪ್ರತಿ ಹೋಬಳಿಗೂ ಒಬ್ಬ ಉಪಾಧ್ಯಕ್ಷ, ಒಬ್ಬ ಸಹ ಕಾರ್ಯದರ್ಶಿ ಇರುತ್ತಾರೆ. ಸಮಸ್ಯೆ ನೈಜ ಸ್ವರೂಪದ ಬಗ್ಗೆ ಆಯಾ ಗ್ರಾಮದ ಪ್ರತಿನಿಧಿಗೆ ಹಾಗೂ ಹೋಬಳಿ ಉಪಾಧ್ಯಕ್ಷರಿಗೆ ಗೊತ್ತಿರುತ್ತದೆ. ಬಹುತೇಕ ರೈತರ ಸಮಸ್ಯೆಯಲ್ಲಿ ಇದುವರೆಗೆ ಕಾನೂನು ಬದ್ಧ ಹೋರಾಟ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಮುಂದೆ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದಿಂದ ಒಬ್ಬ ವಕೀಲರನ್ನು ನೇಮಕ ಮಾಡುತ್ತೇವೆ. ಆ ವಕೀಲರಿಗೆ ಒಕ್ಕೂಟವೇ ಫೀಸು ನೀಡಲಿದೆ. ವಕೀಲರ ಓಡಾಟ, ಇತರೆ ಖರ್ಚನ್ನು ಒಕ್ಕೂಟವೇ ನೀಡುತ್ತದೆ ಎಂದರು.

ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಅರಣ್ಯ ಸಮಸ್ಯೆ, ಕಾಡು ಪ್ರಾಣಿ ಉಪಟಳ, ಮೆಸ್ಕಾಂ ಸಮಸ್ಯೆ, ಅಡಕೆ ರೋಗ ಸಮಸ್ಯೆ ಹೆಚ್ಚಾಗಿದೆ. ಇದಕ್ಕೆ ರೈತ ಒಕ್ಕೂಟದ ಪರಿಹಾರ ಕಂಡು ಕೊಳ್ಳುವ ಪ್ರಯತ್ನ ಮಾಡುತ್ತೇವೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆಯಲ್ಲಿ ಕಾಡಾನೆ ತುಳಿತಕ್ಕೆ ಇಬ್ಬರು ಬಲಿಯಾಗಿದ್ದಾರೆ. ನಿನ್ನೆ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ ಎಂದರು.

ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಗೌರವಾಧ್ಯಕ್ಷ ಕೊಪ್ಪ ತಾಲೂಕಿನ ಶೆಟ್ಟಿಗದ್ದೆ ರಾಮಸ್ವಾಮಿ ಮಾತನಾಡಿ, ರೈತರ ಸಮಸ್ಯೆಗಳ ಹೋರಾಟಕ್ಕೆ ಕಾನೂನಿನ ಬಲ ಇರಲಿಲ್ಲ. ಇದಕ್ಕಾಗಿ ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ನೂತನ ಅಧ್ಯಕ್ಷ ಗದ್ದೇಮನೆ ವಿಶ್ವನಾಥ್ ವಕೀಲರಾಗಿರುವುದಿಂದ ಕಾನೂನು ಹೋರಾಟಕ್ಕೆ ಅನುಕೂಲವಾಗಲಿದೆ. ಈಗಾಗಲೇ ಶೃಂಗೇರಿ ಕ್ಷೇತ್ರದಲ್ಲಿ ಬಗರ್ ಹುಕಂ ಜಮೀನಿನ ಸಮಸ್ಯೆ ಇದೆ. ಫಾರಂ ನಂಬರ್ 50, 53, 57 ರಲ್ಲಿ ರೈತರು ಅರ್ಜಿ ಸಲ್ಲಿಸಿದ್ದಾರೆ. ಕಂದಾಯ ಭೂಮಿ ಅರಣ್ಯವಾಗುತ್ತಿದೆ.ಇದಕ್ಕೆ ಕಾನೂನಾತ್ಮಕ ಪರಿಹಾರ ಕಂಡು ಕೊಳ್ಳಲು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ರಚಿಸಲಾಗಿದೆ. ಕೆರೆಕಟ್ಟೆಯಲ್ಲಿ ಕಾಡಾನೆ ತುಳಿತದಿಂದ ಇಬ್ಬರು ರೈತರು ಮೃತಪಟ್ಟಾಗ ಶಾಸಕರು ಶೀಘ್ರದಲ್ಲೇ ಜನ ಸಂಪರ್ಕ ಸಭೆ ಕರೆದು ಚರ್ಚೆ ನಡೆಸುತ್ತೇವೆ ಎಂದು ಭರವಸೆ ನೀಡಿದ್ದರು. ಇದುವರೆಗೂ ಸಭೆ ಕರೆಯಲಿಲ್ಲ. ಅಡಕೆಗೆ ಎಲೆ ಚುಕ್ಕಿ ರೋಗ ಕಾಡುತ್ತಿದೆ. ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದೆ. ಅಧಿವೇಶನದಲ್ಲಿ ಶಾಸಕರು ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು.

-- ಬಾಕ್ಸ್--

ರೈತರ ಹೋರಾಟಕ್ಕೆ ಇನ್ನಷ್ಟು ಬಲ

ಈ ಹಿಂದೆಯೇ ರೈತರ ಹೋರಾಟಕ್ಕಾಗಿ ಶೃಂಗೇರಿ ಕ್ಷೇತ್ರ ಮಟ್ಟದ ಮಲೆನಾಡು ರೈತ ನಾಗರಿಕ ಹಿತ ರಕ್ಷಣಾ ಸಮಿತಿ ರಚಿಸಲಾಗಿತ್ತು ಎಂದು ಮಲೆನಾಡು ರೈತ ನಾಗರಿಕ ಹಿತ ರಕ್ಷಣಾ ಸಮಿತಿ ಹಿರಿಯ ಸದಸ್ಯ ತುಪ್ಪೂರು ಮಂಜುನಾಥ್ ತಿಳಿಸಿದರು.

ಈಗ ವಕೀಲ ಗದ್ದೇಮನೆ ವಿಶ್ವನಾಥ್ ನೇತೃತ್ವದ ಕ್ಷೇತ್ರ ರೈತ ಒಕ್ಕೂಟ ಅಸ್ತಿತ್ವಕ್ಕೆ ಬಂದಿದ್ದರಿಂದ ರೈತರ ಹೋರಾಟಕ್ಕೆ ಇನ್ನಷ್ಟು ಬಲ ಬರಲಿದೆ. ಮುಂದಿನ ದಿನಗಳಲ್ಲಿ ಮಲೆನಾಡು ರೈತ ನಾಗರಿ ಹಿತ ರಕ್ಷಣಾ ಸಮಿತಿ ಹಾಗೂ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಜಂಟಿಯಾಗಿ ಹೋರಾಟ ಮಾಡಲಿದೆ ಎಂದರು.

-- ಬಾಕ್ಸ್--

ರಾಜಕೀಯದಿಂದ ಹೊರತಾದ ಸಂಘಟನೆ

ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ರಾಜಕೀಯದಿಂದ ಹೊರತಾದ ಸಂಘಟನೆ ಎಂದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ನೂತನ ಅಧ್ಯಕ್ಷ ಗದ್ದೇಮನೆ ವಿಶ್ವನಾಥ್ ಸೃಷ್ಟಪಡಿಸಿದರು.

ಯಾವುದೇ ಸಂದರ್ಭದಲ್ಲೂ ಒಕ್ಕೂಟದ ಒಳಗೆ ರಾಜಕೀಯ ಇರುವುದಿಲ್ಲ. ನಮ್ಮ ಒಕ್ಕೂಟದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರು ಸಹ ಇರುತ್ತಾರೆ. ರೈತರ ಸಮಸ್ಯೆ ಬಂದಾಗ ಅಧಿಕಾರದಲ್ಲಿರುವ ಪಕ್ಷದ ಸದಸ್ಯರು ಸಹ ದ್ವನಿ ಎತ್ತುತ್ತಾರೆ. ಆದರೆ, ರೈತರ ವೈಯ್ಯಕ್ತಿಕ ಜಗಳ ಇದ್ದರೆ ರೈತ ಒಕ್ಕೂಟ ಮಧ್ಯೆ ಪ್ರವೇಶ ಮಾಡುವುದಿಲ್ಲ. ರೈತರ ಸಮಸ್ಯೆಗಳಿಗೆ ಮಾತ್ರ ಸ್ಪಂದಿಸುತ್ತೇವೆ ಎಂದರು.