ಕಸಾಪ ಬೈಲಾ ತಿದ್ದುಪಡಿಗಾಗಿ ಸಲಹೆಗೆ ಉಪ ಸಮಿತಿ ರಚನೆ

| N/A | Published : May 16 2025, 01:46 AM IST / Updated: May 16 2025, 10:22 AM IST

Kannada Sahitya Parishat

ಸಾರಾಂಶ

ಹಾಲಿ ನಿಬಂಧನೆಗಳಿಗೆ (ಬೈಲಾ) ತಿದ್ದುಪಡಿ ಅಗತ್ಯವಿದ್ದು, ಅವುಗಳ ಕುರಿತು ಕಾನೂನಾತ್ಮಕ ಸಲಹೆ ಪಡೆಯಲು ಹೈಕೋರ್ಟ್‌ ವಿಶ್ರಾಂತ ನ್ಯಾ.ಎ.ಎಸ್‌. ಪಾಚ್ಚಾಪುರೆ ಅಧ್ಯಕ್ಷತೆಯಲ್ಲಿ ನಿಬಂಧನೆ ತಿದ್ದುಪಡಿ ಸಲಹಾ ಉಪಸಮಿತಿ ರಚನೆ ಮಾಡಲಾಗಿದೆ.

  ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ, ಗೌರವ ಎತ್ತಿ ಹಿಡಿಯುವ ಜೊತೆಗೆ ಸಮಕಾಲೀನ ಸವಾಲುಗಳಿಗೆ ಸ್ಪಂದಿಸುವ ಉದ್ದೇಶದೊಂದಿಗೆ ಹಾಲಿ ನಿಬಂಧನೆಗಳಿಗೆ (ಬೈಲಾ) ತಿದ್ದುಪಡಿ ಅಗತ್ಯವಿದ್ದು, ಅವುಗಳ ಕುರಿತು ಕಾನೂನಾತ್ಮಕ ಸಲಹೆ ಪಡೆಯಲು ಹೈಕೋರ್ಟ್‌ ವಿಶ್ರಾಂತ ನ್ಯಾ.ಎ.ಎಸ್‌. ಪಾಚ್ಚಾಪುರೆ ಅಧ್ಯಕ್ಷತೆಯಲ್ಲಿ ನಿಬಂಧನೆ ತಿದ್ದುಪಡಿ ಸಲಹಾ ಉಪಸಮಿತಿ ರಚನೆ ಮಾಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್‌ ಜೋಶಿ, ಪರಿಷತ್ತಿನ ಮುಂದಿನ ಚುನಾವಣೆಗಳು 2026-27ನೇ ಸಾಲಿನಲ್ಲಿ ನಡೆಯಲಿದೆ. ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಇತರೆ ವಿಷಯಗಳ ಬಗ್ಗೆ ನಿಬಂಧನೆಗಳಿಗೆ ತಿದ್ದುಪಡಿಗಳನ್ನು ತರುವ ಅವಶ್ಯಕತೆ ಇದೆ. ಆದ್ದರಿಂದ ವಿಶ್ರಾಂತ ನ್ಯಾ.ಎ.ಎಸ್‌.ಪಾಚ್ಚಾಪುರೆ ಅಧ್ಯಕ್ಷತೆಯಲ್ಲಿ 12 ಸದಸ್ಯರು, 4 ವಿಶೇಷ ಆಹ್ವಾನಿತರನ್ನು ಒಳಗೊಂಡು ನಿಬಂಧನೆ ತಿದ್ದುಪಡಿ ಸಲಹಾ ಉಪಸಮಿತಿ ರಚನೆ ಮಾಡಲಾಗಿದೆ ಎಂದು ಹೇಳಿದರು.

ಬುಧವಾರ ನಡೆದ ಕೇಂದ್ರ ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ಕೆಲ ನಿಯಮಾವಳಿಗಳ ತಿದ್ದುಪಡಿಯನ್ನು ವಿಶೇಷ ಸರ್ವಸದಸ್ಯರ ಸಭೆಯ ಅನುಮೋದನೆಗಾಗಿ ಮಂಡಿಸಲು ಶಿಫಾರಸು ಮಾಡಿದ ಪ್ರಸ್ತಾವನೆಗಳನ್ನು ಈ ಸಮಿತಿ ಪರಿಶೀಲಿಸಿ ಕಾನೂನಾತ್ಮಕ ಸಲಹೆಗಳನ್ನು ನೀಡಲಿದೆ ಎಂದರು. ಪರಿಷತ್ತಿನ ಯಾವುದೇ ಸದಸ್ಯನ ಸದಸ್ಯತ್ವ ಅಮಾನತುಗೊಂಡರೆ, ಅವರು ಪರಿಷತ್ತಿನ ಯಾವುದೇ ಸ್ಥಾನದಲ್ಲಿದ್ದರೆ ಆ ಸ್ಥಾನ ಸ್ವಯಂ ಅಮಾನತಿಲ್ಲಿರಲಿದೆ. ಸದಸ್ಯನ ಅಮಾನತು ರದ್ದಾದರೆ ಪರಿಷತ್ತಿನಲ್ಲಿ ಅವರು ಹೊಂದಿರುವ ಸ್ಥಾನ ಮುಂದುವರೆಯಲಿದೆ. ಕೇಂದ್ರ ಪರಿಷತ್ತಿನ ಅಧ್ಯಕ್ಷರಿಂದ ನಾಮನಿರ್ದೇಶನಗೊಂಡ ಸದಸ್ಯರಿಗೆ ನಿಗದಿತ ಅವಧಿ ಇರುವುದಿಲ್ಲ. ಅವರನ್ನು ಅಧ್ಯಕ್ಷರ ಇಚ್ಛೆಗೆ ಒಳಪಟ್ಟು ‘ಆನಂದದ ಸಿದ್ಧಾಂತ’ ಅನ್ವಯ ಮುಂದಿನ ಆದೇಶದವರೆಗೆ ಬದಲಿಸುವ ಅಧಿಕಾರ ಕೇಂದ್ರ ಪರಿಷತ್ತಿನ ಅಧ್ಯಕ್ಷರಿಗೆ ಇರಲಿದೆ. ನಾಮನಿರ್ದೇಶಿತರನ್ನು ಯಾವುದೇ ಕಾರಣ ನೀಡದೆ ಬದಲಿಸುವ ಆಧಿಕಾರ ಕೇಂದ್ರ ಪರಿಷತ್ತಿನ ಅಧ್ಯಕ್ಷರಿಗೆ ಇರಲಿದೆ ಎಂದು ವಿವರಿಸಿದರು.

ಯಾವುದೇ ಘಟಕದ ಅಧ್ಯಕ್ಷರು, ನಾಮನಿರ್ದೇಶನಗೊಂಡ ಸದಸ್ಯರು ಕೇಂದ್ರ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಗಳಿಗೆ ಲಿಖಿತವಾಗಿ ಕೇಂದ್ರ ಅಧ್ಯಕ್ಷರ ಪೂರ್ವಾನುಮತಿ ಪಡೆಯದೆ ಯಾವುದೇ ಕಾರಣದಿಂದ ಒಂದು ವರ್ಷದಲ್ಲಿ ನಡೆಯುವ 4 ಸಭೆಗಳಲ್ಲಿ ಮೂರು ಸಭೆಗಳಿಗೆ ಗೈರಾದರೆ ಅಂತಹ ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನ ರದ್ದಾಗಲಿದೆ. ಈ ನಿಯಮ ಜಿಲ್ಲಾ ಘಟಕದ ಅಧ್ಯಕ್ಷರಿಗೂ ಅನ್ವಯವಾಗಲಿದೆ ಎಂದು ಹೇಳಿದರು.

ಪರಿಷತ್ತಿನ ವಿರುದ್ಧ ದೂರು-ಆರೋಪಗಳಿಗೆ ಕಾನೂನು ಹೋರಾಟದ ಬದಲು ಒಂದು ಪ್ರತ್ಯೇಕ ಸಮಿತಿ ರಚಿಸಬೇಕು. ಸಮಿತಿಯಲ್ಲಿ ಚರ್ಚಿಸಿ, ದೂರುದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮಕ್ಕೆ ಕೈಗೊಳ್ಳಬೇಕೆಂದು ಸಭೆಯಲ್ಲಿ ಚರ್ಚಿಸಲಾಗಿದೆ. ಈಗಾಗಲೇ ನಿಯಮ ಉಲ್ಲಂಘಿಸಿರುವ ಪ್ರಕರಣಗಳಲ್ಲಿ ಸದಸ್ಯರಿಗೆ ಮತ್ತೊಂದು ಅವಕಾಶ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಕಸಾಪದ ಗೌರವ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗಶೆಟ್ಟಿ, ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು, ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಮಲ್ಲೇಶಗೌಡ, ಡಾ.ಎಚ್.ಎಸ್.ಮುದ್ದೇಗೌಡ, ಸುನೀಲ್ ಯಳವಾರ ಉಪಸ್ಥಿತರಿದ್ದರು.