ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ

| Published : Aug 17 2024, 12:47 AM IST

ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಆ. 20 ರಂದು ಬೆಳಗ್ಗೆ ಅರಸು ಹುಟ್ಟೂರು ಕಲ್ಲಹಳ್ಳಿಯಲ್ಲಿನ ಅವರ ಸಮಾಧಿಗೆ ಪೂಜೆ ಸಲ್ಲಿಸಿದ ನಂತರ ಪಟ್ಟಣದ ಎಪಿಎಂಸಿ ಬಳಿಯಿರುವ ಅರಸು ಪುತ್ಥಳಿಯಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗುವುದು. ಕಾರ್ಯಕ್ರಮದಲ್ಲಿ ಅರಸರೊಂದಿಗೆ ಒಡನಾಡಿಗಳಾಗಿ ಈಗಲೂ ನಮ್ಮೊಂದಿಗಿರುವ ಹಿರಿಯರನ್ನು ಗುರುತಿಸಿ ಸನ್ಮಾನಿಸಲಾಗುವುದು.

ಕನ್ನಡಪ್ರಭ ವಾರ್ತೆ ಹುಣಸೂರು

ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ 109ನೇ ಜನ್ಮಜಯಂತಿ ಸಮಾರಂಭವನ್ನು ಅರಸು ಒಡನಾಡಿಗಳು ಮತ್ತು ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು.

ಪಟ್ಟಣದ ನಗರಸಭೆ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜಿ.ಡಿ. ಹರೀಶ್‌ ಗೌಡ, ಆ. 20 ರಂದು ಬೆಳಗ್ಗೆ ಅರಸು ಹುಟ್ಟೂರು ಕಲ್ಲಹಳ್ಳಿಯಲ್ಲಿನ ಅವರ ಸಮಾಧಿಗೆ ಪೂಜೆ ಸಲ್ಲಿಸಿದ ನಂತರ ಪಟ್ಟಣದ ಎಪಿಎಂಸಿ ಬಳಿಯಿರುವ ಅರಸು ಪುತ್ಥಳಿಯಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗುವುದು. ಕಾರ್ಯಕ್ರಮದಲ್ಲಿ ಅರಸರೊಂದಿಗೆ ಒಡನಾಡಿಗಳಾಗಿ ಈಗಲೂ ನಮ್ಮೊಂದಿಗಿರುವ ಹಿರಿಯರನ್ನು ಗುರುತಿಸಿ ಸನ್ಮಾನಿಸಲಾಗುವುದು. ಅಲ್ಲದೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಇಲಾಖೆಯ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ನೀಡಲಾಗುವುದು ಎಂದರು.

ಸಭೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಮಾತನಾಡಿ, ದೇವರಾಜ ಅರಸು ಹುಟ್ಟಿದ ಕಲ್ಲಹಳ್ಳಿಯ ಮನೆ ಶಿಥಿಲಾವಸ್ಥೆ ತಲುಪಿದೆ. ಈ ಮನೆಯನ್ನು ಸ್ಮಾರಕವನ್ನಾಗಿ ಮಾಡಬೇಕೆನ್ನವುದು ನಮ್ಮೆಲ್ಲರ ಆಶಯವಾಗಿದೆ. ಶಿಥಿಲಾವಸ್ಥೆಯಲ್ಲಿರುವ ಮನೆಯನ್ನು ಕನಿಷ್ಟ ಪಕ್ಷ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲವು ದುರಸ್ತಿ ಕಾರ್ಯಗಳನ್ನಾದರೂ ಕೈಗೊಳ್ಳುವ ಕುರಿತು ಕ್ರಮವಹಿಸಬೇಕು ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಕೋಟ್ಯಾಂತರ ರು. ವೆಚ್ಚದಡಿ ನಿರ್ಮಾಣಗೊಂಡಿರುವ ಅರಸು ಭವನ ಸಂಪೂರ್ಣಗೊಳ್ಳದೇ ಹಾಳು ಭವನವಾಗಿ ಮಾರ್ಪಡುತ್ತಿದೆ. ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಉಂಟಾಗುತ್ತಿದ್ದರೆ ಅದನ್ನು ಬಹಿರಂಗಪಡಿಸಿರಿ. ಅಭಿವೃದ್ಧಿಯ ವಿಷಯದಲ್ಲಿ ನಾವು ಅನ್ಯಾಯ ಸಹಿಸುವುದಿಲ್ಲ ಎಂದು ಬೇಸರಿಸಿದರು.

ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಸಾರ್ವಜನಿಕ ಆಸ್ಪತ್ರೆ ಕುರಿತು ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ನಾನು ಸರ್ಕಾರವನ್ನು ಪ್ರಶ್ನಿಸಿದ್ದೆ. ಅದರ ಫಲವಾಗಿ ಇದೀಗ 9.5 ಕೋಟಿ ರು.ಗಳ ಹೆಚ್ಚುವರಿ ಅನುದಾನ ಮಂಜೂರಾಗಿದೆ. ಕ್ರಿಯಾ ಯೋಜನೆ ಸಲ್ಲಿಕೆಯಾಗಿ ಟೆಂಡರ್ ಪ್ರಕ್ರಿಯೆ ಹಂತದಲ್ಲಿದ್ದು ಶೀಘ್ರ ಕಾಮಗಾರಿ ಚಾಲನೆಗೊಳ್ಳಲಿದೆ. ಅರಸು ಭವನಕ್ಕೆ ಹೆಚ್ಚುವರಿ ಅನುದಾನದ ಕೊರತೆ ಇದು ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇನೆ. ಈ ಎರಡು ಅಭಿವೃದ್ಧಿ ಕಾಮಗಾರಿಗಳ ಕುರಿತು ಯಾರ ಅಡ್ಡಿಯೂ ಇಲ್ಲವೆಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಮಂಜುನಾಥ್, ತಾಲೂಕು ಪಂಚಾಯಿತಿ ಇಒ ಕೆ.ಹೊಂಗಯ್ಯ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸುಜೇಂದ್ರ ಕುಮಾರ್, ಮುಖಂಡರಾದ ಡಿ.ಕುಮಾರ್, ಫಜಲ್ ಮಹಮದ್, ನಗರಸಭ ಸದಸ್ಯರಾದ ಕೃಷ್ಣರಾಜ ಗುಪ್ತ, ಶರವಣ, ಸತೀಶ್‌ ಕುಮಾರ್, ಹರೀಶ್, ವಕೀಲ ಪುಟ್ಟರಾಜು ಇದ್ದರು.