ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ನಾಡಿನಲ್ಲಿ ನೊಂದವರ ಧ್ವನಿಯಾಗಿ, ನಿರಾಶ್ರಿತರಿಗೆ ಆಶ್ರಯ, ಕೆಳವರ್ಗದವರ ಬಾಳಿಗೆ ಬೆಳಕಾಗಿದ್ದ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರು ನಾಡಿಗೆ ನೀಡಿದ ಕೊಡುಗೆಗಳು ಮಾದರಿಯಾಗಿವೆ ಎಂದು ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.ಪಟ್ಟಣದ ಗಂಗಾಧರ ಲೇಔಟ್‌ನಲ್ಲಿರುವ ಡಿ.ದೇವರಾಜ ಅರಸು ಭವನದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾಜಿ ಸಿಎಂ ದಿ.ಡಿ.ದೇವರಾಜ ಅರಸು ಅವರ ೧೦೯ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಭೂ ಸುಧಾರಣೆ ಕಾನೂನು ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಗೆ ತರುವ ಮೂಲಕ ಉಳುವನೇ ಭೂಮಿಯ ಒಡೆಯನನ್ನಾಗಿ ಮಾಡಿದರು. ಎಲ್ಲರಿಗೂ ಸಮಾನ ಹಕ್ಕು ದೊರೆಯುವಂತೆ ಮಾಡಿದರು. ಹಿಂದುಳಿದ ವರ್ಗಗಳಿಗೆ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಿ ಅವರ ವಿದ್ಯಾಭ್ಯಾಸಕ್ಕೆ ನೆರವು ನೀಡಿದ್ದು ಸ್ಮರಣೀಯ ಕಾರ್ಯ. ಅವರ ಆಶಯದಂತೆ ಹಿಂದುಳಿದ ವರ್ಗಗಳ ವಿದ್ಯಾರ್ಥಿ ಸಮುದಾಯಕ್ಕೆ ಎಲ್ಲ ರೀತಿಯ ಸೌಲಭ್ಯ ನೀಡುವ ಮೂಲಕ ಅವರು ವಿದ್ಯಾವಂತರಾಗಿ ನಾಡಿನ ಸೇವೆ ಸಲ್ಲಿಸುವಂತಾಗಬೇಕು ಎಂದರು.
ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ, ಡಿ.ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಆಶಾಕಿರಣವಾಗಿದ್ದಾರೆ. ಹಿಂದುಳಿದ ವರ್ಗಗಳ ಏಳ್ಗೆಗಾಗಿ ಮುಖ್ಯಮಂತ್ರಿಗಳಿದ್ದಾಗ ರಾಜ್ಯದಲ್ಲಿ ಕ್ರಾಂತಿಕಾರ ಹೆಜ್ಜೆಯಿಟ್ಟ ಧೀಮಂತ ನಾಯಕರಾಗಿದ್ದಾರೆ ಎಂದರು.ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ ಮಾತನಾಡಿ, ದಿನಾಚರಣೆಯಲ್ಲಿ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಉಪಸ್ಥಿತರಿದೇ ಈ ಜನ್ಮ ದಿನಾಚರಣೆಯನ್ನು ಕಾಟಾಚರಕ್ಕೆ ಎಂಬಂತೆ ಆಚರಿಸುತ್ತಿರುವುದು ಸರಿಯಲ್ಲ. ಕಾರ್ಯಕ್ರಮದಲ್ಲಿ ಹಾಜರಾಗದೇ ಇರುವ ಅಧಿಕಾರಿಗಳ ಮೇಲೆ ತಾಲೂಕಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದರು.
ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಉಪನ್ಯಾಸಕಿ ವಿಜಯಲಕ್ಷ್ಮೀ ಅವರು ಡಿ.ದೇವರಾಜ ಅರಸು ಕುರಿತು ಉಪನ್ಯಾಸ ನೀಡಿ ಮಾತನಾಡಿದರು.ಡಿಎಸ್‌ಎಸ್ ಮುಖಂಡ ಅಶೋಕ ಚಲವಾದಿ ಮಾತನಾಡಿದರು.
ತಹಸೀಲ್ದಾರ್ ವೈ.ಎಸ್.ಸೋಮನಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಕಾರ್ಯಕ್ರಮಕ್ಕೆ ಕೆಲ ಅಧಿಕಾರಿಗಳು ಅನುಮತಿ ಪಡೆದುಕೊಂಡು ಬೇರೆ ಕಾರ್ಯಕ್ಕೆ ತೆರಳಿದ್ದಾರೆ. ಯಾರು ಅನುಮತಿ ಪಡೆಯದೇ ಗೈರು ಇದ್ದ ಅಧಿಕಾರಿಗಳಿಗೆ ತಾಲೂಕಾಡಳಿತದಿಂದ ನೊಟೀಸ್ ನೀಡಲಾಗುವುದು ಎಂದರು.ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿಂದುಳಿ ವರ್ಗಗಳ ಕಲ್ಯಾಧಿಕಾರಿ ಎಸ್.ವಿ.ನಿಂಬಾಳ, ಸಿಡಿಪಿಓ ನಿರ್ಮಲಾ ಸುರಪೂರ, ಪಿಡಿಒ ಆರ್.ಎಂ.ಆಸಂಗಿ, ಜಿಲ್ಲಾ ದೌರ್ಜನ್ಯ ಸಮಿತಿ ಸದಸ್ಯ ಮಹಾಂತೇಶ ಸಾಸಾಬಾಳ, ಡಿಎಸ್‌ಎಸ್ ಮುಖಂಡ ಅರವಿಂದ ಸಾಲವಾಡಗಿ ಇದ್ದರು. ಸಿ.ಜಿ.ಬಿರಾದಾರ ಸ್ವಾಗತಿಸಿದರು. ಎಸ್.ಸಿ.ಕುಂಟೋಜಿ ನಿರೂಪಿಸಿದರು. ಆರ್.ಎಂ.ರಾಜರತ್ನ ವಂದಿಸಿದರು. ಇದೇ ಸಂದರ್ಭದಲ್ಲಿ ೨೦೨೩-೨೪ನೇ ಸಾಲಿನಲ್ಲಿ ವಿದ್ಯಾರ್ಥಿ ನಿಲಯದಲ್ಲಿದ್ದು ವ್ಯಾಸಂಗ ಮಾಡಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.