ಮಾಜಿ ಸಿಎಂ ಮಕ್ಕಳೇ ಅಧಿಕಾರದಲ್ಲಿರಬೇಕಾ?: ಗೋಪಾಲಕೃಷ್ಣ ಬೇಳೂರು ಪ್ರಶ್ನೆ

| Published : Oct 31 2023, 01:15 AM IST

ಮಾಜಿ ಸಿಎಂ ಮಕ್ಕಳೇ ಅಧಿಕಾರದಲ್ಲಿರಬೇಕಾ?: ಗೋಪಾಲಕೃಷ್ಣ ಬೇಳೂರು ಪ್ರಶ್ನೆ
Share this Article
  • FB
  • TW
  • Linkdin
  • Email

ಸಾರಾಂಶ

ನಾನೂ ಎಂಪಿ ಟಿಕೆಟ್‌ ಆಕಾಂಕ್ಷಿ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ರಾಜ್ಯ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ. ಸ್ವಪಕ್ಷದ ವಿರುದ್ಧ ಶಾಸಕರು ಅಸಮಾಧಾನ ಹೊರಹಾಕುತ್ತಿದ್ದಾರೆ ಎಂಬ ಆರೋಪ ಬೆನ್ನೆಲ್ಲೇ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಕೇವಲ ಮಾಜಿ ಮುಖ್ಯಮಂತ್ರಿ ಮಕ್ಕಳಿಗೆ ಅಧಿಕಾರ ಕೊಟ್ಬಿಟ್ಟರೆ ನಾವು ಏನು ಮಾಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೂರು ಸಲ ಶಾಸಕನಾಗಿದ್ದೇನೆ. ಕೇವಲ ಮುಖ್ಯಮಂತ್ರಿಗಳಾದವರ ಮಕ್ಕಳಿಗೇ ಯಾಕೆ ಅಧಿಕಾರ ಕೊಡಬೇಕು ಎಂದು ಪ್ರಶ್ನಿಸಿದರು. ಮಧು ಬಂಗಾರಪ್ಪ ವಿರುದ್ಧವೂ ಹರಿಹಾಯ್ದರು: ಮಧು ಬಂಗಾರಪ್ಪ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೋ, ಇಲ್ವೋ ನನಗೆ ಗೊತ್ತಿಲ್ಲ. ನನಗೆ ಜಿಲ್ಲಾ ಉಸ್ತುವಾರಿಗಳು ಎಲ್ಲೂ ಕರೆಯುತ್ತಿಲ್ಲ. ನನ್ನನ್ನು ಕೇವಲ ತಾಲೂಕಿಗೆ ಸೀಮಿತ ಮಾಡಿದ್ದಾರೆ ಅನಿಸುತ್ತೆ. ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೋ, ಇಲ್ವೋ ಗೊತ್ತಿಲ್ಲ. ಅವರು ಬಂದ್ರೆ ಭೀಮಣ್ಣ ನಾಯ್ಕರನ್ನು ಕರ್ಕೊಂಡು ಬರ್ತಾರೆ. ಅವರು ನಮಗೆ ಕರೆಯಲ್ಲ, ನಾವು ಹೋಗಲ್ಲ. ನಾನು ಸಾಮಾನ್ಯ ವ್ಯಕ್ತಿ. ನನ್ನ ಸಾಮರ್ಥ್ಯ ಕಸಿದುಕೊಳ್ಳಲು ಯಾರಿಂದಲೂ ಸಾಧ್ಯ ಇಲ್ಲ ಎಂದು ಹರಿಹಾಯ್ದರು. ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿದ್ದಾರೆ. ನನ್ನ ಜೊತೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇದ್ದಾರೆ. ನಾನು ಕೇವಲ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ನಾನು ಕೂಡ ನಾಯಕನಿದ್ದೇನೆ, ನನಗೆ ಸರ್ಕಾರ ಮತ್ತು ಯಾವುದೇ ಮಂತ್ರಿಗಳ ಮೇಲೆ ಅಸಮಾಧಾನ ಇಲ್ಲ ಎಂದು ಹೇಳಿದರು. ನಾನೂ ಎಂಪಿ ಟಿಕೆಟ್‌ ಆಕಾಂಕ್ಷಿ: ಸದ್ಯದಲ್ಲೇ ಲೋಕಸಭಾ ಚುನಾವಣೆ ಬರುತ್ತಿದೆ. ಜಿಲ್ಲೆಯಿಂದ ಯಾರಿಗೆ ಟಿಕೆಟ್‌ ಕೊಡುತ್ತಾರೋ ಗೊತ್ತಿಲ್ಲ. ನಾನೂ ಕೂಡ ಟಿಕೆಟ್‌ ಆಕಾಂಕ್ಷಿಯೇ. ಯಡಿಯೂರಪ್ಪ ಮಗ ರಾಘವೇಂದ್ರ ಅವರನ್ನು ಎದುರಿಸುವ ಶಕ್ತಿ ನನಗೆ ಇದೆ. ನಾನ್ಯಾಕೆ ಸಂಸದ ಆಗಬಾರದು. ಗೀತಾ ಶಿವರಾಜ್ ಕುಮಾರ್ ಟಿಕೆಟ್‌ ಕೊಡುವ ಬಗ್ಗೆ ನನಗೆ ಗೊತ್ತಿಲ್ಲ. ಅವರೇನು ನನಗೆ ಬಂದು ಹೇಳಿಲ್ಲ. ಅವರು ಜಿಲ್ಲೆಯಲ್ಲಿ ಬಂದು ಎಲ್ಲೂ ಓಡಾಡಿದ್ದು ಕಂಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಆಪರೇಷನ್ ಕಮಲ ಹುಚ್ಚು ಕನಸು: ಆಪರೇಷನ್ ಕಮಲ ಮಾಡುವುದು ಬಿಜೆಪಿ ಅವರ ಹುಚ್ಚುಕನಸು. ಕರ್ನಾಟಕದ ಜನತೆ ನಮಗೆ 136 ಸೀಟು ಕೊಟ್ಟು ಬಹುಮತ ನೀಡಿದ್ದಾರೆ. ಬಿಜೆಪಿ ಹಾಗೆ ನಮಗೆ ಕಡಿಮೆ ಸೀಟುಗಳು ಬಂದಿಲ್ಲ. ಕಳೆದ ಬಾರಿ ಬಿಜೆಪಿ ಅಧಿಕಾರ ಮಾಡಿದರೂ 104 ಸೀಟು ಮಾತ್ರ ಬಂದಿದ್ದವು. ಅದಕ್ಕಿಂತ ಮೇಲೆ ಇವರು ಏಳಲಿಲ್ಲ. ಆದರೆ, ಈ ಬಾರಿ ಕರ್ನಾಟಕ ಜನ ಕಾಂಗ್ರೆಸ್?ಗೆ ಬಹುಮತ ನೀಡಿದ್ದಾರೆ. ಆಪರೇಷನ್ ಕಮಲ ಬಿಜೆಪಿ ಕೈಯಲ್ಲಿ ಆಗಲ್ಲ. ಆಪರೇಷನ್ ಕಮಲ ಮಾಡುವ ನಾಯಕರು ಬಿಜೆಪಿಯಲ್ಲಿ ಇಲ್ಲ. ಇವರಿಗೆ ಇನ್ನೂ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಿಕೊಳ್ಳಲು ಆಗಿಲ್ಲ. ಇನ್ನು ಅವರು ಅಪರೇಷನ್ ಕಮಲ ಮಾಡುತ್ತಾರೆಯೇ ಎಂದು ಕಿಡಿಕಾರಿದರು. ನಮ್ಮ ಸರ್ಕಾರ ಬೀಳಲ್ಲ: ಕಾಂಗ್ರೆಸ್ ವಿರುದ್ಧ ಒಂದು ಸಣ್ಣ ಷಡ್ಯಂತ್ರ ನಡೆಯುತ್ತಿದೆ. ಈಗ ಕೆಲವು ಶಾಸಕರ ಜೊತೆ ಮಾತನಾಡುತ್ತಿದ್ದಾರೆ. ನಮ್ಮ ಶಾಸಕರು ಯಾರೂ ಪಕ್ಷ ತೊರೆಯಲ್ಲ. ಈಗಾಗಲೇ 17 ಜನ ಪಕ್ಷ ಬಿಟ್ಟು ಬಿಜೆಪಿಗೆ ಹೋದವರು ಅನುಭವಿಸಿದ್ದಾರೆ. ಈಗ ಅವರೆಲ್ಲಾ ನಮ್ಮ ಪಕ್ಷಕ್ಕೆ ಬರ್ತಾರಂತೆ. ಆದರೆ, ಅವರನ್ನು ಸೇರಿಸಲ್ಲ ಅಂತ ಹೇಳುತ್ತಿದ್ದಾರೆ. ಅವರಲ್ಲಿ ಅರ್ಧ ಜನರನ್ನು ಸೇರಿಸಿಕೊಳ್ಳಬಹುದು. ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಉತ್ತಮ ಆಡಳಿತ ನೀಡುತ್ತಿದೆ. ರಕ್ತದಲ್ಲಿ ಬರೆದುಕೊಡುತ್ತೇನೆ ನಮ್ಮ ಸರ್ಕಾರ ಬೀಳಲ್ಲ. ಬಿಜೆಪಿಯವರ ಆಪರೇಷನ್ ಕಮಲ ಈ ಬಾರಿ ಯಶಸ್ವಿ ಆಗಲ್ಲ ಎಂದು ಹೇಳಿದರು. ರಮೇಶ್ ಜಾರಕಿಹೊಳಿ, ಯೋಗೇಶ್ವರ್ ಇವರಿಗೆಲ್ಲ ಅಸ್ಥಿತ್ವನೇ ಇಲ್ಲ. ಇನ್ನೂ ಕೆಲವರು ಇದ್ದಾರೆ. ಇವರು ಹೊರಗೆ ಬರೋದಿಲ್ಲ. ಇವರೆಲ್ಲ ಸೇರಿ ಏನಾದ್ರೂ ಪಿತೂರಿ ಮಾಡಬೇಕೆಂದು ಹೊರಟಿದ್ದಾರೆ. ಬಿಜೆಪಿಯಲ್ಲಿ ಆಪರೇಷನ್ ಕಮಲದ ಬಗ್ಗೆ ಯಾವುದೇ ಚಿಂತನೆ ಇಲ್ಲ. ಆದರೆ, ಕುಮಾರಸ್ವಾಮಿಗೆ ಇದೆ. ಅವರು ಮೋದಿ ಹಾಗೂ ಅಮಿತ್ ಶಾರನ್ನು ಭೇಟಿ ಮಾಡಿ ಏನಾದ್ರೂ ಕರ್ನಾಟಕದಲ್ಲಿ ಚೇಂಜ್‌ ಮಾಡೋಣ ಸಾರ್ ಅಂತ ಹೇಳಿ ಬಂದಿದ್ದಾರೆ. ಕುಮಾರಸ್ವಾಮಿ ಅವರು ಒಂದೂವರೆ ವರ್ಷ ಕಾಂಗ್ರೆಸ್‌ನಿಂದ ಡಿ.ಕೆ.ಶಿವಕುಮಾರ್ ಅವರಿಂದ ಅಧಿಕಾರ ಪಡೆದುಕೊಂಡಿದ್ದರು. ಈಗ ಅವರು ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು. - - - -30ಎಸ್‌ಎಂಜಿಕೆಪಿ01: ಬೇಳೂರು ಗೋಪಾಲಕೃಷ್ಣ