ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹುಟ್ಟೂರು ಬೂಕನಕೆರೆ ಗ್ರಾಮಕ್ಕೆ ಆಗಮಿಸಿ ಗೋಗಾಲಮ್ಮ ದೇವಿ ಹಾಗೂ ಮನೆದೇವರು ಕಾಪನಹಳ್ಳಿ ಗವಿಮಠದಲ್ಲಿ ಕುಟುಂಬಸ್ಥರೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು.ಅಮಾವಾಸ್ಯೆ ಅಂಗವಾಗಿ ಮಾಜಿ ಸಿಎಂ ಯಡಿಯೂರಪ್ಪ ಅವರು ಪುತ್ರಿಯರಾದ ಉಮಾದೇವಿ, ಅರುಣಾದೇವಿ ಹಾಗೂ ಪುತ್ರ ವಿಜಯೇಂದ್ರ ಧರ್ಮಪತ್ನಿ ಪ್ರೇಮ ಅವರೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕಾಪನಹಳ್ಳಿ ಗವಿಮಠದ ಪೀಠಾಧ್ಯಕ್ಷ ಸ್ವತಂತ್ರ ಚನ್ನವೀರ ಮಹಾಸ್ವಾಮೀಜಿ ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟರು.
ಗೋಗಾಲಮ್ಮ ದೇವಾಲಯಕ್ಕೆ ಆಗಮಿಸಿದ ಯಡಿಯೂರಪ್ಪ ಅವರಿಗೆ ಪೂರ್ಣಕುಂಭದೊಂದಿಗೆ ಗ್ರಾಮಸ್ಥರು ಹಾಗೂ ಯಡಿಯೂರಪ್ಪ ಅಭಿಮಾನಿಗಳು ಸ್ವಾಗತ ನೀಡಿದರು. ಕ್ಷೇತ್ರದ ಜೆಡಿಎಸ್ ಶಾಸಕ ಎಚ್.ಟಿ.ಮಂಜು ಕೂಡಾ ಹಾಜರಿದ್ದು, ತಾಲೂಕಿನ ಜನರ ಪರವಾಗಿ ಯಡಿಯೂರಪ್ಪ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.ಈ ವೇಳೆ ಕೆ.ಆರ್.ಪೇಟೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ದೂರುಗಳನ್ನು ಕೇಳಿ ತಿಳಿದುಕೊಂಡಿದ್ದೇನೆ. ಶಾಸಕ ಮಂಜು ಅವರು ಎದೆಗುಂದಬಾರದು. ಮುಖ್ಯಮಂತ್ರಿಗಳ ಜೊತೆ ಚರ್ಚಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಇಂದು ನನ್ನ ಮನೆದೇವರು ಹಾಗೂ ಗ್ರಾಮದೇವತೆಯ ಆಶೀರ್ವಾದವನ್ನು ಪಡೆದಿದ್ದೇನೆ. ರಾಜ್ಯದ ಜನರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.ಈ ವೇಳೆ ಬೂಕನಕೆರೆ ಗ್ರಾಪಂ ಅಧ್ಯಕ್ಷ ಶ್ಯಾಂಪ್ರಸಾದ್, ಮೈಮುಲ್ ನಿರ್ದೇಶಕ ಸಿಂದಘಟ್ಟ ಅಶೋಕ್, ತಾಪಂ ಮಾಜಿ ಅಧ್ಯಕ್ಷ ಜವರಾಯಿಗೌಡ, ಮಾಜಿ ಸದಸ್ಯರಾದ ಹುಲ್ಲೇಗೌಡ, ಮೀನಾಕ್ಷಿ ಪುಟ್ಟರಾಜು, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ತೋಂಟಪ್ಪಶೆಟ್ಟಿ, ಯಡಿಯೂರಪ್ಪ ಅಭಿಮಾನಿ ಬಳಗದ ಅಧ್ಯಕ್ಷ ಮಧುಸೂದನ್ ಸೇರಿದಂತೆ ಗ್ರಾಮದ ನೂರಾರು ಜನರು ಭಾಗಿಯಾಗಿದ್ದರು.
-------------ಸಿದ್ದರಾಮಯ್ಯರಿಂದ ಓಲೈಕೆ ರಾಜಕಾರಣ: ಯಡಿಯೂರಪ್ಪ ಟೀಕೆ
ಕೆ.ಆರ್.ಪೇಟೆ: ಕರ್ನಾಟಕ ರಾಜಕಾರಣವು ಹಳಿತಪ್ಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನೀಡದೆ ಓಲೈಕೆ ರಾಜಕಾರಣ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟೀಕಿಸಿದರು.ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಆಂತರಿಕ ಕಿತ್ತಾಟದ ಬಗೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಇದ್ದು, ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನರು ಬುದ್ಧಿ ಕಲಿಸಲಿದ್ದಾರೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ರಾಜ್ಯದ ಜನರಿಗೆ ಆಡಳಿತ ಪಕ್ಷದ ವೈಫಲ್ಯಗಳನ್ನು ಮುಂದಿಟ್ಟು ಹೋರಾಟ ಮಾಡುತ್ತಿದ್ದಾರೆ. ಮುಂದೆ ಅವರಿಗೆ ಒಳ್ಳೆಯ ಭವಿಷ್ಯವಿದೆ ಎಂದರು.ಬಿಹಾರ ರಾಜ್ಯದ ಚುನಾವಣೆ ದೇಶದ ರಾಜಕಾರಣದಲ್ಲಿ ದಿಕ್ಸೂಚಿ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ಜನರು ನೀಡಿರುವ ಉತ್ತರವಾಗಿದೆ. ವಿರೋಧ ಪಕ್ಷಗಳು ಕೆಸರೆರಚುವ ರಾಜಕಾರಣವನ್ನು ಬದಿಗೊತ್ತಿ ಅಭಿವೃದ್ಧಿ ರಾಜಕಾರಣಕ್ಕೆ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.
ದೇಶದಲ್ಲಿ ಇಂದು ಭದ್ರತೆ ಬಗೆಗೆ ಯಾವುದೇ ರಾಜಿ ಮಾಡಿಕೊಳ್ಳದ ಪ್ರಧಾನಿ ನಮ್ಮೊಂದಿಗಿದ್ದಾರೆ. ಇದು ನಮ್ಮೆಲ್ಲರ ಅದೃಷ್ಟ. ಕಾಂಗ್ರೆಸ್ ರಾಜಕಾರಣದ ಬಗೆಗೆ ಜನರೆ ನಿರ್ಧರಿಸಿಯಾಗಿದೆ. ಆದರೂ ಕೂಡಾ ಬುದ್ಧಿ ಕಲಿತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))