ಮೈಮೇಲೆ ಡೀಸೆಲ್‌ ಸುರಿದುಕೊಂಡು ಪ್ರತಿಭಟಿಸಿದ ಮಾಜಿ ಗುತ್ತಿಗೆ ನೌಕರ

| Published : Oct 09 2025, 02:01 AM IST

ಮೈಮೇಲೆ ಡೀಸೆಲ್‌ ಸುರಿದುಕೊಂಡು ಪ್ರತಿಭಟಿಸಿದ ಮಾಜಿ ಗುತ್ತಿಗೆ ನೌಕರ
Share this Article
  • FB
  • TW
  • Linkdin
  • Email

ಸಾರಾಂಶ

ಕೆಎಂಸಿಆರ್‌ಐನಲ್ಲಿ ಏಜನ್ಸಿಯೊಂದರಿಂದ ಹನುಮಂತ ಎಂಬುವನು ಗುತ್ತಿಗೆ ಆಧಾರದಲ್ಲಿ ನೇಮಕವಾಗಿ ಆಸ್ಪತ್ರೆಯ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದನು. ಕೆಲ ಕಾರಣದಿಂದ ಈಚೆಗೆ ಇವನನ್ನು ತೆಗೆದು ಹಾಕಲಾಗಿತ್ತು.

ಹುಬ್ಬಳ್ಳಿ:

ಕೆಎಂಸಿಆರ್‌ಐನಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ತನ್ನನ್ನು ಕೆಲಸದಿಂದ ತೆಗೆದು ಹಾಕಿರುವುದನ್ನು ಖಂಡಿಸಿ ಹಾಗೂ ಮರು ನೇಮಕಾತಿಗೆ ಒತ್ತಾಯಿಸಿ ಮಾಜಿ ಗುತ್ತಿಗೆ ನೌಕರನೋರ್ವ ಮೈಮೇಲೆ ಡೀಸೆಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕಿ ಹೈಡ್ರಾಮಾ ನಡೆಸಿದ ಘಟನೆ ಬುಧವಾರ ನಡೆದಿದೆ.

ಕೆಎಂಸಿಆರ್‌ಐನಲ್ಲಿ ಏಜನ್ಸಿಯೊಂದರಿಂದ ಹನುಮಂತ ಎಂಬುವನು ಗುತ್ತಿಗೆ ಆಧಾರದಲ್ಲಿ ನೇಮಕವಾಗಿ ಆಸ್ಪತ್ರೆಯ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದನು. ಕೆಲ ಕಾರಣದಿಂದ ಈಚೆಗೆ ಇವನನ್ನು ತೆಗೆದು ಹಾಕಲಾಗಿತ್ತು. ಇದರಿಂದ ಮನನೊಂದಿದ್ದ ಹನುಮಂತ, ಬುಧವಾರ ಬೆಳಗ್ಗೆ ಕೈಯಲ್ಲಿ ಬೆಂಕಿ ಪೊಟ್ಟಣ, ಡೀಸೆಲ್‌ ಹಿಡಿದುಕೊಂಡು ಆಸ್ಪತ್ರೆ ಮುಂದೆ ಕೆಲಕಾಲ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದನು. ಬಳಿಕ ಮೈಮೇಲೆ ಡೀಸೆಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದನು. ಅಲ್ಲಿಯೇ ಇದ್ದ ಪೊಲೀಸರು ಆತನ ಕೈಯಲ್ಲಿದ್ದ ಡೀಸೆಲ್‌ ಕ್ಯಾನ್‌ ಕಸಿದುಕೊಂಡರು. ಈ ಘಟನೆಯಿಂದಾಗಿ ಆಸ್ಪತ್ರೆ ಎದುರು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.

ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ, ಹನುಮಂತನ ಅಹವಾಲು ಆಲಿಸಿ, ಆತನನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು. ಆದರೂ ಆತ, ತನ್ನ ಹಟವನ್ನು ಮುಂದುವರಿಸಿದ. ನೇಮಕ ಮಾಡಿಕೊಂಡಿರುವ ಏಜೆನ್ಸಿಯಿಂದ ಮಾಹಿತಿ ಪಡೆಯಲಾಗುವುದು. ಪರಿಶೀಲಿಸಿದ ಬಳಿಕ ಮರು ನೇಮಕದ ಕುರಿತು ನಿರ್ಧರಿಸಲಾಗುವುದು ಎಂದು ಹನುಮಂತನನ್ನು ಅಧೀಕ್ಷಕರು ಸಮಾಧಾನ ಪಡಿಸಿದರು. ಇದರಿಂದ ಸಮಾಧಾನಗೊಂಡ ಹನುಮಂತ, ಪ್ರತಿಭಟನೆ ಕೈಬಿಟ್ಟನು.