ಸಾರಾಂಶ
ಮಂಗಳೂರು: 1971ರ ಭಾರತ - ಪಾಕ್ ಯುದ್ಧದಲ್ಲಿ ಹೆಲಿಕಾಪ್ಟರ್ ನಿಂದ ಬಿದ್ದು ಜೀವನ್ಮರಣ ಹೋರಾಟದಲ್ಲಿ ಬದುಕಿ ಬಂದಿದ್ದ ಮಾಜಿ ಯೋಧ ಜಿ.ಟಿ. ಆಳ್ವ ನಿಧನರಾಗಿದ್ದಾರೆ. ಯುದ್ಧ ವೀರ ಗರೋಡಿ ತಿಮ್ಮಪ್ಪ ಆಳ್ವ(85) ಗುರುವಾರ ಸಂಜೆ ನಗರದ ಕುಂಟಿಕಾನ ಬಳಿಯ ಲೋಹಿತ್ ನಗರದ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು.
ಮೃತರ ದೇಹವನ್ನು ಅವರ ಇಚ್ಛೆಯಂತೆ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾನ ಮಾಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅವರ ಪುತ್ರ ಮೃತರಾಗಿದ್ದು ಪತ್ನಿ, ಒಬ್ಬರು ಪುತ್ರಿ ಆಯುರ್ವೇದಿಕ್ ವೈದ್ಯರಾಗಿದ್ದು ಮತ್ತು ಮೊಮ್ಮಕ್ಕಳು ಇದ್ದಾರೆ. ಜಿಟಿ ಆಳ್ವರು ಭಾರತೀಯ ಭೂಸೇನೆಯಲ್ಲಿ ಸೇವೆ ನಿರ್ವಹಿಸಿದ್ದು 1971ರ ಯುದ್ಧದಲ್ಲಿ ತೀವ್ರ ಗಾಯಗೊಂಡು ಚೇತರಿಕೆ ಕಂಡ ಬಳಿಕವೂ 10 ವರ್ಷ ಕಾಲ ದೇಶ ಸೇವೆಯಲ್ಲಿ ತೊಡಗಿದ್ದರು. 1982ರಲ್ಲಿ ಸೇನೆಯಿಂದ ಸ್ವಯಂ ನಿವೃತ್ತರಾಗಿ ಬಳಿಕ ಮಂಗಳೂರಿಗೆ ಬಂದು ಫುಡ್ ಇನ್ಸ್ ಪೆಕ್ಟರ್ ಆಗಿದ್ದರು. ಬೆಳ್ತಂಗಡಿ, ಬಂಟ್ವಾಳದಲ್ಲಿ ಕರ್ತವ್ಯ ನಿರ್ವಹಿಸಿ 2000ನೇ ಇಸವಿಯಲ್ಲಿ ನಿವೃತ್ತರಾಗಿದ್ದರು.ಇತ್ತೀಚೆಗೆ ಅವರ ಅನುಭವ ಕಥನ ‘ಗರೋಡಿ ಮನೆಯಿಂದ ಸೇನಾ ಗರಡಿಗೆ’ ಪ್ರಕಟವಾಗಿತ್ತು. ತುಳುನಾಡಿನ ಸಾಮಾನ್ಯ ಕೃಷಿ ಕುಟುಂಬ ಒಂದರಲ್ಲಿ ಜನಿಸಿದ ಯುವಕ ದೇಶ ಕಾಯುವ ಸೈನಿಕನಾಗಿದ್ದಲ್ಲದೆ, 1971ರ ಪಾಕಿಸ್ತಾನ ಜೊತೆಗಿನ ಯುದ್ಧದಲ್ಲಿ ಪಾಲ್ಗೊಂಡು ಜೀವನ್ಮರಣ ಸ್ಥಿತಿಗೆ ಒಳಗಾಗಿದ್ದರು. ಹೆಲಿಕಾಪ್ಟರ್ ನಲ್ಲಿ ಯುದ್ಧ ಶಿಬಿರಕ್ಕೆ ಪ್ರಯಾಣಿಸುವ ವೇಳೆ ಪಾಕ್ ಸೈನಿಕರ ಫಿರಂಗಿ ದಾಳಿಗೆ ತುತ್ತಾಗಿ ಚಿತ್ತಗಾಂಗ್ ಪ್ರದೇಶದ ಕಾಡಿನಲ್ಲಿ ಬಿದ್ದು ಜೀವನ್ಮರಣ ಹೋರಾಟ ನಡೆಸಿ ಬದುಕಿ ಉಳಿದಿದ್ದರು. ಇವೆಲ್ಲದರ ಅನುಭವ ಕಥನ ಕಿರು ಪುಸ್ತಕವಾಗಿ ಪ್ರಕಟವಾಗಿದೆ.1971ರ ಭಾರತ -ಪಾಕ್ ಯುದ್ಧದಲ್ಲಿ ಭಾರತ ಜಗತ್ತು ಬೆರಗಾಗುವ ರೀತಿಯಲ್ಲಿ ಜಯ ಗಳಿಸಿತ್ತು. ಸೇನಾ ದಂಡನಾಯಕ ಮಾಣೆಕ್ ಶಾ ರೂಪಿಸಿದ ಯುದ್ಧ ತಂತ್ರ ಬೆರಗಿನದ್ದು. ಪಾಕ್ ವಿರುದ್ಧದ ಮೂರೂ ಯುದ್ಧದಲ್ಲಿ ಭಾಗವಹಿಸಿದ್ದ ಹಿರಿಮೆ ಜಿ.ಟಿ. ಆಳ್ವ ಅವರದ್ದು. ಡೆಹ್ರಾಡೂನ್, ನಾಗಾಲ್ಯಾಂಡ್, ಉತ್ತರ ಪ್ರದೇಶ, ಅಸ್ಸಾಂ ಇನ್ನಿತರ ಕಡೆಗಳಲ್ಲಿ ಅವರು ಸೇವೆ ಸಲ್ಲಿಸಿದ್ದರು.