ವಿಧಾನಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್‌ ನಿಧನ

| Published : Jun 18 2024, 12:47 AM IST

ಸಾರಾಂಶ

ಶಿವಮೊಗ್ಗ ಸಮೀಪದ ಮತ್ತೂರಿನಲ್ಲಿ ದಿ. ಭಾನುಪ್ರಕಾಶ್ ಅವರ ಅಂತಿಮ ದರ್ಶನವನ್ನು ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್‌. ಈಶ್ವರಪ್ಪ, ಸಂಸದ ರಾಘವೇಂದ್ರ ಮತ್ತಿತರರು ಮಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಿಧಾನಪರಿಷತ್ ನ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್[69] ಸರ್ಕಾರದ ವಿರುದ್ಧ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ವಾಪಸ್ಸು ಹೊರಡುತ್ತಿದ್ದ ವೇಳೆ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು. ಪತ್ನಿ ಮತ್ತು ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಜಿಪಂ ಸದಸ್ಯರಾಗಿ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ, ಬಿಜೆಪಿ ವಿವಿಧ ಪ್ರಕೋಷ್ಠಗಳ ರಾಜ್ಯ ಸಂಚಾಲಕರಾಗಿ, ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಎಂ.ಬಿ.ಭಾನುಪ್ರಕಾಶ್ ಜಿಲ್ಲೆ ಪ್ರಬಲ ಬಿಜೆಪಿ ನಾಯಕರಾಗಿ ಗುರುತಿಸಿಕೊಂಡಿದ್ದರು.

ಶಿವಮೊಗ್ಗ ನಗರಕ್ಕೆ ಸಮೀಪದ ಸಂಸ್ಕೃತ ಗ್ರಾಮ ಎಂದೇ ಹೆಸರಾಗಿರುವ ಮತ್ತೂರು ಗ್ರಾಮದವರಾಗಿದ್ದ ಭಾನುಪ್ರಕಾಶ್ ಬಿಜೆಪಿ ಹಿರಿಯ ನಾಯಕರಾಗಿದ್ದು, ಸಂಘ ಪರಿವಾರದ ಮೂಲಕ ಬೆಳೆದು ಸಂಘಟನೆಯಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದರು.ಘಟನೆ ಹೇಗಾಯ್ತು?:

ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿಸಿದ್ದನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಟಿ.ಶೀನಪ್ಪ ಶೆಟ್ಟಿ[ಗೋಪಿ ವೃತ್ತ] ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಶಾಸಕ ಚನ್ನಬಸಪ್ಪ ಸೇರಿ ಜಿಲ್ಲಾ ಮಟ್ಟದ ಹಿರಿಯ ಬಿಜೆಪಿ ನಾಯಕರು ಮತ್ತು ಮುಖಂಡರು ಪಾಲ್ಗೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಭಾನುಪ್ರಕಾಶ್ ಮಾತನಾಡಿ, ರಾಜ್ಯ ಸರ್ಕಾರದ ನೀತಿ ಖಂಡಿಸಿದ್ದರು. ಪ್ರತಿಭಟನೆಯ ಕೊನೆಯಲ್ಲಿ ವಂದನಾರ್ಪಣೆ ಬಳಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ಮಹಾತ್ಮಾ ಗಾಂಧೀಜಿಯವರಿಗೆ ಅಚ್ಚುಮೆಚ್ಚಿನ ಗೀತೆಯಾಗಿದ್ದ ‘ರಘುಪತಿ ರಾಘವ ರಾಜಾರಾಮ್…’ ಭಜನೆ ಹೇಳಿಕೊಟ್ಟರು. ನಂತರ ಗೋವಿಂದ.. ಗೋವಿಂದ ಎನ್ನಲಾರಂಭಿಸಿದರು. ಈ ವೇಳೆಯಲ್ಲಿ ತೀವ್ರ ಸುಸ್ತಾದಂತಾದ ಭಾನುಪ್ರಕಾಶ್ ಹತ್ತಿರದಲ್ಲಿಯೇ ಇದ್ದ ಕಾರಿನಲ್ಲಿ ಕೂರುವ ಪ್ರಯತ್ನದ ಭಾಗವಾಗಿ ಅತ್ತ ನಡೆದು ಕಾರಿನ ಬಾಗಿಲಿಗೆ ಕೈ ಹಾಕಿದರು. ಆಗಲೇ ಅವರು ಕುಸಿದು ಬಿದ್ದರು.

ತಕ್ಷಣವೇ ಅಲ್ಲಿದ್ದವರು ಭಾನುಪ್ರಕಾಶ್ ಅವರನ್ನು ಸಮೀಪದ ಖಾಸಗಿ ಮ್ಯಾಕ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋದರು. ಆದರೆ ಪರೀಕ್ಷಿಸಿದ ವೈದ್ಯರು ಚಿಕಿತ್ಸೆ ನೀಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ತೀವ್ರ ಹೃದಯಾಘಾತದಿಂದ ಭಾನುಪ್ರಕಾಶ್ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.ಮತ್ತೂರಿಗೆ ಮೃತದೇಹ:

ಇಷ್ಟರಲ್ಲಿಯೇ ಸುದ್ದಿ ಹರಡಿ ನೂರಾರು ಕಾರ್ಯಕರ್ತರು ಆಸ್ಪತ್ರೆ ಎದುರು ಜಮಾಯಿಸಿದ್ದರು. ಸಾವಿನ ಸುದ್ದಿ ಖಚಿತವಾದ ಬಳಿಕ ಮೃತದೇಹವನ್ನು ಅವರ ಸ್ವಂತ ಊರಾದ ಮತ್ತೂರಿಗೆ ಕರೆದೊಯ್ಯಲಾಯಿತು. ಮತ್ತೂರಿನ ಅವರ ಮನೆಯಲ್ಲಿ ಕೆಲ ಕಾಲ ಸಾರ್ವಜನಿಕ ದರ್ಶನಕ್ಕಾಗಿ ಮೃತದೇಹ ಇಡಲಾಗಿತ್ತು. ಗ್ರಾಮದ, ಸುತ್ತಮುತ್ತಲಿನ ಗ್ರಾಮದ ಹಾಗೂ ಶಿವಮೊಗ್ಗ ನಗರದ ಸಾವಿರಾರು ಜನರು ಗ್ರಾಮಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದರು.ಸಂತಾಪ ಸಭೆ:

ಸಂಜೆ 4 ಗಂಟೆಗೆ ಮತ್ತೂರಿನ ಭಾನುಪ್ರಕಾಶ್ ಅವರ ಮನೆಯಲ್ಲಿ ಸಂತಾಪ ಸಭೆ ನಡೆಯಿತು. ಬಹುತೇಕ ಎಲ್ಲ ಹಿರಿಯ ಬಿಜೆಪಿ ನಾಯಕರಾದ ಬಿ. ವೈ. ರಾಘವೇಂದ್ರ, ಕೆ.ಎಸ್. ಈಶ್ವರಪ್ಪ, ಡಿ. ಎಸ್. ಅರುಣ್, ಎಸ್. ರುದ್ರೇಗೌಡ, ಡಾ. ಧನಂಜಯ ಸರ್ಜಿ, ಮಾಜಿ ಶಾಸಕ ಡಿ. ಎನ್. ಜೀವರಾಜ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಹಾಗೂ ಮತ್ತೂರು ಗ್ರಾಮದ ಹಿರಿಯರು ಭಾಗಿಯಾಗಿದ್ದರು.ಅಂತಿಮ ಸಂಸ್ಕಾರ:

ಭಾನುಪ್ರಕಾಶ್ ಅವರಿಗೆ ಮೂವರು ಪುತ್ರರಿದ್ದು, ಹರಿಕೃಷ್ಣ, ಯಾದವ್ ಕೃಷ್ಣ ಶಿವಮೊಗ್ಗದಲ್ಲಿಯೇ ವೃತ್ತಿಯಲ್ಲಿದ್ದರೆ, ಮೂರನೇ ಪುತ್ರ ಚಿನ್ಮಯ್‌ ಪ್ರಸನ್ನ ಕೃಷ್ಣ ಚೆನ್ನೈನಲ್ಲಿ ಇಂಜಿನಿಯರಿಂಗ್‌ ಕಲಿಯುತ್ತಿದ್ದಾರೆ. ಅವರು ಸಂಜೆ 8.30 ಸ ಸುಮಾರಿಗೆ ಆಗಮಿಸಿದ್ದು, ಆ ಬಳಿಕ ಮತ್ತೂರಿನ ತುಂಗಾನದಿ ದಂಡೆಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಸಲಾಯಿತು.ಸ್ಥಳದಲ್ಲಿ ಆರ್ ಎಸ್ ಎಸ್ ನ ದಕ್ಷಿಣ ಪ್ರಾಂತ್ಯದ ಮುಖಂಡ ಪಟ್ಟಾಭಿರಾಮ್, ರಾಘವುಈಂದ್ರ, ಸಿದ್ದರಾಮಣ್ಣ, ಅರುಣ್ಶಾಸಕ ಚೆನ್ನಬಸಪ್ಪ ಮತ್ತಿತರ ಹಿರಿಯ ಮುಖಂಡರು ಇದ್ದರು.

ಸಂತಾಪ:

ಹಿರಿಯ ಬಿಜೆಪಿ ನಾಯಕ ಎಂ. ಬಿ. ಭಾನುಪ್ರಕಾಶ್ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ, ಸಂಸದ ಬಿ. ವೈ. ರಾಘವೇಂದ್ರ, ಶಾಸಕ ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯರಾದ ಡಿ. ಎಸ್. ಅರುಣ್, ಡಾ. ಧನಂಜಯ ಸರ್ಜಿ, ಮಾಜಿ ಶಾಸಕ ಡಿ. ಎನ್. ಜೀವರಾಜ್, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ. ಸಿ. ನಟರಾಜ್ ಭಾಗವತ್, ಎಂ. ಶಂಕರ್, ಗಿರೀಶ್ ಪಟೇಲ್, ಮಾಧ್ಯಮ ಪ್ರಮುಖ್ ಕೆ. ವಿ. ಅಣ್ಣಪ್ಪ ಮತ್ತಿತರು ಸಂತಾಪ ವ್ಯಕ್ತಪಡಿಸಿದ್ದಾರೆ.

ಭಾನುಪ್ರಕಾಶ್ ನಿಧನದಿಂದ ಬಿಜೆಪಿ ಸಂಘಟನೆಯ ಆಧಾರ ಸ್ತಂಭವೊಂದು ಕಳಚಿ ಬಿದ್ದಂತಾಗಿದೆ. ಲಕ್ಷಾಂತರ ಕಾರ್ಯಕರ್ತರಿಗೆ ಸ್ಪೂರ್ತಿಯ ಸೆಲೆಯಾಗಿದ್ದ ಇವರು ಇಲ್ಲ ಎನ್ನುವುದನ್ನು ಅರಗಿಸಿಕೊಳ್ಳುವುದು ಕಷ್ಟಕರವಾಗಿದೆ ಎಂದು ಸಂತಾಪದಲ್ಲಿ ತಿಳಿಸಿದ್ದಾರೆ.