ಸುಸಂಸ್ಕೃತ ರಾಜಕಾರಣಿ- ಶಿಕ್ಷಣ, ಕಲಾ ಪೋಷಕರಾಗಿದ್ದ ವಾಸು

| Published : Mar 10 2024, 01:33 AM IST

ಸಾರಾಂಶ

ವಾಸು ಅವರು ಸಾಕಷ್ಟು ಅನುಕೂಲವಾಗಿದ್ದರು. ಹೀಗಾಗಿ ರಾಜಕಾರಣದಲ್ಲಿದ್ದರೂ ಯಾವುದೇ ಲಂಚ,ರುಷುವತ್ತುಗಳಿಗೆ ಆಸೆ ಪಡದೆ ಪ್ರಾಮಾಣಿಕರಾಗಿದ್ದರು. ಶಾಸಕರಾಗಿದ್ದಾಗ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ನೂರಾರು ಕೋಟಿ ರು.ಗಳ ಕಾಮಗಾರಿಗಳ ಕಮೀಷನ್ ಅನ್ನು ಕೋಟಿ ಕೋಟಿ ಲೆಕ್ಕದಲ್ಲಿ ತಲುಪಿಸಲು ಬಂದ ಅಧಿಕಾರಿಗಳಿಗೆ ಬೈದು, ಬುದ್ಧಿ ಹೇಳಿ, ಇದರ ಬದಲು ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡಿ ಎಂದು ಸಲಹೆ ನೀಡಿ, ಕಳುಹಿಸುತ್ತಿದ್ದರು.

ಅಂಶಿ ಪ್ರಸನ್ನಕುಮಾರ್

ಕನ್ನಡಪ್ರಭ ವಾರ್ತೆ ಮೈಸೂರು

ಶನಿವಾರ ನಿಧನರಾದ ಚಾಮರಾಜ ಕ್ಷೇತ್ರದ ಮಾಜಿ ಶಾಸಕ, ಮೈಸೂರಿನ ಮಾಜಿ ಮೇಯರ್ ವಾಸು ಅವರು ವೇಷಭೂಷಣದಿಂದ ಹಿಡಿದು ಎಲ್ಲದರಲ್ಲೂ ಇತರೆ ರಾಜಕಾರಣಿಗಳಿಗಿಂತ ಭಿನ್ನ. ಸುಸಂಸ್ಕೃತ, ಸುಶಿಕ್ಷಿತ, ಸಭ್ಯ, ಸಜ್ಜನ. ವಿನಯವಂತ ರಾಜಕಾರಣಿ. ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ಕ್ರೀಡಾ ಹಾಗೂ ಶಿಕ್ಷಣದ ಪೋಷಕರಾಗಿದ್ದರು. ಅಪಾರ ಜ್ಞಾನವಿದ್ದ ಅತ್ಯುತ್ತಮ ವಾಗ್ಮಿ. ಯಾವುದೇ ಕಾರ್ಯಕ್ರಮ ಮಾಡಿದರೂ ಅಚ್ಚುಕಟ್ಟು.

ಪಾಲಿಕೆಗೆ 2 ಬಾರಿ ಆಯ್ಕೆ, ಒಮ್ಮೆ ಮೇಯರ್

ವಾಸು ಅವರು ಮೈಸೂರು ನಗರಪಾಲಿಕೆಗೆ ಎರಡು ಅವಧಿಗೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಒಂದು ವರ್ಷ ಮೇಯರ್ ಆಗಿ ಸೇವೆ ಸಲ್ಲಿಸಿದ್ದರು. ಎರಡನೇ ಬಾರಿ ಗೆದ್ದಾಗ ವಾಸು ಹಾಗೂ ಪಿ. ನಾಗರಾಜ್ ಬಣಗಳ ನಡುವೆ ತಿಕ್ಕಾಟ.ಕೊನೆಗೂ ಪಿ. ನಾಗರಾಜ್ ಮೇಯರ್ ಆಗಲು ಸಾಧ್ಯವಾಗಲೇ ಇಲ್ಲ. ಮೂರು ಬಾರಿ ವಾಸು ಗುಂಪಿನ ಚಿಕ್ಕತಮ್ಯಯ್ಯ, ಸಿದ್ದಪ್ಪ, ಎಂ.ವಿ. ವೆಂಕಟರಾಜು, ಮತ್ತೊಮ್ಮೆ ಜನತಾದಳದ ಡಿ. ಧ್ರುವಕುಮಾರ್ ಮೇಯರ್ ಆಗಿದ್ದರು.

ಸಿಎಂ ರಾಜಕೀಯ ಕಾರ್ಯದರ್ಶಿ

ಎಂ. ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ವಾಸು ಅವರು ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ವಿಧಾನಸಭೆಗೆ ನಾಲ್ಕು ಬಾರಿ ಸ್ಪರ್ಧೆ- ಒಮ್ಮೆ ಮಾತ್ರ ಗೆಲವು

ವಾಸು 1999 ರಲ್ಲಿ ಮೊದಲ ಬಾರಿಗೆ ಚಾಮರಾಜ ಕ್ಷೇತ್ರದಿಂದ ವಿಧಾನಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, 26,412 ಮತಗಳನ್ನು ಪಡೆದು, 48,733 ಮತಗಳನ್ನು ಪಡೆದ ಬಿಜೆಪಿಯ ಎಚ್.ಎಸ್. ಶಂಕರಲಿಂಗೇಗೌಡರ ಎದುರು ಸೋತರು. 2004 ರ ಚುನಾವಣೆಯಲ್ಲಿ ಅವರ ಬದಲು ಸಂದೇಶ್ ನಾಗರಾಜ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಯಿತು. ಅವರು 23,416 ಪಡೆದು, 38,193 ಮತಗಳನ್ನು ಪಡೆದ ಶಂಕರಲಿಂಗೇಗೌಡರ ಎದುರು ಸೋತರು.

2008 ರಲ್ಲಿ ವಾಸು ಅವರು ಎರಡನೇ ಬಾರಿಗೆ ಚಾಮರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ 34,844 ಮತಗಳನ್ನು ಪಡೆದು, 44,243 ಮತಗಳನ್ನು ಪಡೆದ ಶಂಕರಲಿಂಗೇಗೌಡರ ಎದುರು ಸೋತರು.

2013 ರಲ್ಲಿ ಮೂರನೇ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ 41,930 ಮತಗಳನ್ನು ಪಡೆದು ಗೆದ್ದರು.ಆ ಚುನಾವಣೆಯಲ್ಲಿ ಜೆಡಿಎಸ್ನಿಂದ ಕಣದಲ್ಲಿದ್ದ ಶಂಕರಲಿಂಗೇಗೌಡರಿಗೆ 29,015, ಬಿಜೆಪಿಯಿಂದ ಕಣದಲ್ಲಿದ್ದ ಎಲ್. ನಾಗೇಂದ್ರ ಅವರಿಗೆ 26,168 ಮತಗಳು ದೊರೆತಿದ್ದವು.

2018 ರಲ್ಲಿ ನಾಲ್ಕನೇ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾದ ವಾಸು ಅವರು 36,747 ಮತಗಳನ್ನು ಪಡೆದು, 51,683 ಮತಗಳನ್ನು ಪಡೆದ ಬಿಜೆಪಿಯ ಎಲ್. ನಾಗೇಂದ್ರ ಅವರ ಎದುರು ಸೋತರು. ಈ ಚುನಾವಣೆಯಲ್ಲಿ ಜೆಡಿಸ್‌ ನಿಂದ ಪ್ರೊ.ಕೆ.ಎಸ್. ರಂಗಪ್ಪ, ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಕೆ. ಹರೀಶ್ ಗೌಡ ಕಣದಲ್ಲಿದ್ದರು.

2023ರ ಚುನಾವಣೆಯಲ್ಲಿ ವಾಸು ಅವರಿಗೆ ಟಿಕೆಚ್ ಸಿಗಲಿಲ್ಲ, ಜೆಡಿಎಸ್‌ ನಿಂದ ಬಂದಿದ್ದ ಕೆ. ಹರೀಶ್ ಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಜೆಪಿಯ ಎಲ್. ನಾಗೇಂದ್ರ ವಿರುದ್ಧ ಗೆದ್ದರು.

ಶಾಸಕರಾಗಿದ್ದಾಗ ಸಿಎಂ ಸಿದ್ದರಾಮಯ್ಯ ಸಹಕಾರ- ಅಭಿವೃದ್ಧಿಯ ಹರಿಕಾರ

2013-18 ರ ಅವಧಿಯಲ್ಲಿ ವಾಸು ಅವರು ಶಾಸಕರಾಗಿದ್ದರು. ಜಿಲ್ಲೆಯವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಸಂಪೂರ್ಣ ಸಹಕಾರ ನೀಡಿದರು. ಇದರಿಂದಾಗಿ ಹತ್ತು ಹಲವು ಯೋಜನೆಗಳನ್ನು ಕ್ಷೇತ್ರಕ್ಕೆ ತಂದು ಅಭಿವೃದ್ಧಿಯ ಹರಿಕಾರ ಎನಿಸಿಕೊಂಡರು. ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಕಟ್ಟಡ, ಜಯದೇವ ಹೃದ್ರೋಗ ಸಂಸ್ಥೆ, ಜಿಲ್ಲಾ ಆಸ್ಪತ್ರೆ. ಟ್ರಾಮಾ ಸೆಂಟರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆ - ಇವು ಪ್ರಮುಖವಾದವು.

ಸಿದ್ದರಾಮಯ್ಯ ಜೊತೆ ಭಿನ್ನಾಭಿಪ್ರಾಯದಿಂದ ಟಿಕೆಟ್ ಮಿಸ್

ಕಳೆದ ನಾಲ್ಕು ದಶಕಗಳಿಂದಲೂ ಕಾಂಗ್ರೆಸ್‌ನಲ್ಲಿಯೇ ಇದ್ದ ವಾಸು ಅವರು ಎಂ. ವೀರಪ್ಪ ಮೊಯ್ಲಿ ಅವರ ನಿಕಟವರ್ತಿಗಳಾಗಿದ್ದರು. ಮಾತ್ರವಲ್ಲದೇ ಎಸ್. ಬಂಗಾರಪ್ಪ, ಎಂ.ವಿ. ರಾಜಶೇಖರನ್, ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ಆರ್.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ್. ಟಿ.ಬಿ. ಜಯಚಂದ್ರ ಸೇರಿದಂತೆ ಬಹುತೇಕ ನಾಯಕರೊಂದಿಗೆ ಆಪ್ತರಾಗಿದ್ದರು.

ಆದರೆ ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರಿಗೂ ವಾಸು ಅವರಿಗೂ ಮೊದಲಿನಿಂದಲೂ ಅಷ್ಟಕಷ್ಟೇ. ಜನತಾ ಪರಿವಾರದಿಂದ ಕಾಂಗ್ರೆಸ್‌ಗೆ ಬಂದ ಅವರೊಂದಿಗೆ ಅಂತರ ಕಾಯ್ದುಕೊಂಡಿದ್ದರು. ಇದರ ಪರಿಣಾಮ 2018ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಕ್ಕರೂ ಸೋತರು. 2023ರ ಚುನಾವಣೆಯಲ್ಲಿ ಟಿಕೆಟ್ ಕೂಡ ಸಿಗಲಿಲ್ಲ.

ಹಿಂಬಾಗಿಲ ರಾಜಕಾರಣದ ವಿರೋಧಿ, ಮಂತ್ರಿಗಿರಿ ಬಯಸಲಿಲ್ಲ

ವಾಸು ಅವರು ನೇರ ರಾಜಕಾರಣದ ಪರವಾಗಿದ್ದರು.ಇಲ್ಲದಿದ್ದರೇ ಮೊದಲ ಬಾರಿ ಶಾಸಕರಾಗಲು 2013 ರವರೆಗೆ ಕಾಯುವ ಅವಶ್ಯಕತೆ ಇರಲಿಲ್ಲ. ಮನಸ್ಸು ಮಾಡಿದ್ದರೆ ವಿಧಾನ ಪರಿಷತ್ ಸದಸ್ಯರಾಗುವುದು ಅವರಿಗೆ ಕಷ್ಟವಿರಲಿಲ್ಲ. ಆದರೆ ಅವರು ಹಿಂಬಾಗಿಲ ರಾಜಕಾರಣದ ವಿರೋಧಿಯಾಗಿದ್ದರು. ಮಂತ್ರಿಗಿರಿಗೂ ಲಾಬಿ ಮಾಡಲು ಬಯಸಲಿಲ್ಲ. ಸಿಕ್ಕಾಗ ಸಿಗಲಿ, ಇಲ್ಲದಿದ್ದರೆ ಇಲ್ಲ ಎಂಬ ನಿರ್ಲಿಪ್ತತೆ ಅವರಲ್ಲಿತ್ತು.

ಪುತ್ರ ಬಿಜೆಪಿ ಅಭ್ಯರ್ಥಿಯಾಗಿದ್ದರು

ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಾಸು ಅವರಿಗೆ ಟಿಕೆಟ್ ನಿರಾಕರಿಸಲಾಗುತ್ತದೆ ಎಂಬುದನ್ನು ತಿಳಿದು ಅವರ ಇಬ್ಬರು ಮಕ್ಕಳು ಬಿಜೆಪಿ ಸೇರಿದ್ದರು. ಈ ಪೈಕಿ ಹಿರಿಯ ಪುತ್ರ ವಿ. ಕವೀಶ್ ಗೌಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು. ಕೆಲವೆ ಕೆಲವು ದಿನಗಳಲ್ಲಿ ಸುಮಾರು 51,318 ಮತಗಳನ್ನು ಪಡೆಯುವ ಮೂಲಕ ಗಮನ ಸೆಳೆದಿದ್ದರು.

ಪ್ರಾಮಾಣಿಕ ರಾಜಕಾರಣಿ

ವಾಸು ಅವರು ಸಾಕಷ್ಟು ಅನುಕೂಲವಾಗಿದ್ದರು. ಹೀಗಾಗಿ ರಾಜಕಾರಣದಲ್ಲಿದ್ದರೂ ಯಾವುದೇ ಲಂಚ,ರುಷುವತ್ತುಗಳಿಗೆ ಆಸೆ ಪಡದೆ ಪ್ರಾಮಾಣಿಕರಾಗಿದ್ದರು. ಶಾಸಕರಾಗಿದ್ದಾಗ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ನೂರಾರು ಕೋಟಿ ರು.ಗಳ ಕಾಮಗಾರಿಗಳ ಕಮೀಷನ್ ಅನ್ನು ಕೋಟಿ ಕೋಟಿ ಲೆಕ್ಕದಲ್ಲಿ ತಲುಪಿಸಲು ಬಂದ ಅಧಿಕಾರಿಗಳಿಗೆ ಬೈದು, ಬುದ್ಧಿ ಹೇಳಿ, ಇದರ ಬದಲು ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡಿ ಎಂದು ಸಲಹೆ ನೀಡಿ, ಕಳುಹಿಸುತ್ತಿದ್ದರು.

ಸಾಹಿತ್ಯ ಸಮ್ಮೇಳನದ ಯಶಸ್ಸು

1990 ರಲ್ಲಿ ಮೈಸೂರಿನಲ್ಲಿ 60ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮೈಸೂರು ಮಲ್ಲಿಗೆ ಖ್ಯಾತಿಯ ಕೆ.ಎಸ್. ನರಸಿಂಹಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದಾಗ ವಾಸು ಮೇಯರ್ ಆಗಿದ್ದರು. ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಸಮ್ಮೇಳನದ ಅಭೂತಪೂರ್ತ ಯಶಸ್ಸಿಗೆ ಅವರು ಶ್ರಮಿಸಿದ್ದರು.

ಮೈಸೂರಿನ ಎಲ್ಲಾ ಸಾಹಿತಿಗಳು, ಕಲಾವಿದರು, ಶಿಕ್ಷಣ ತಜ್ಞರು, ಜೊತೆ ಅವರಿಗೆ ನಿಕಟ ಸಂಪರ್ಕವಿತ್ತು.

ಸಹಕಾರ- ಕೈಗಾರಿಕಾ ಕ್ಷೇತ್ರ

ವಾಸು ಅವರು ಸಹಕಾರ ಕ್ಷೇತ್ರದಲ್ಲೂ ಗಣನೀಯ ಸೇವೆ ಸಲ್ಲಿಸಿದ್ದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾಗಿದ್ದರು. ರಾಜ್ಯ ಕೈಗಾರಿಕಾ ಸಹಕಾರ ಬ್ಯಾಂಕಿನ ಅಧ್ಯಕ್ಷರೂ ಆಗಿದ್ದರು. ಮೈಸೂರು ಕೈಗಾರಿಕಾ ಸಂಘದ ಅಧ್ಯಕ್ಷರಾಗಿದ್ದರು. ಆ ಮೂಲಕ ನಗರದ ಉದ್ಯಮದ ಬೆಳವಣಿಗೆಗೂ ಕೂಡ ಶ್ರಮಿಸಿದ್ದರು.

ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು

ಶಿಕ್ಷಣದ ಮಹತ್ವ ಅರಿತಿದ್ದ ವಾಸು ಅವರು ಸುಮಾರು ಮೂರು ದಶಕಗಳ ಹಿಂದೆಯೇ ವಿದ್ಯಾವಿಕಾಸ ಎಜುಕೇಷನ್ ಟ್ರಸ್ಟ್ ಆರಂಭಿಸಿದ್ದರು. ಅಲ್ಲಿ ಎಲ್ಕೆಜೆಯಿಂದ ಹಿಡಿದು ಇಂಜಿನಿಯರಿಂಗ್ ವರೆಗೆ ಸುಮಾರು ಐದು ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರಾಥಮಿಕ, ಪ್ರೌಢ, ಪಿಯು, ಪದವಿ, ಕಾನೂನು, ಶಿಕ್ಷಣ- ಹೀಗೆ ಎಲ್ಲವನ್ನು ಕಲಿಯುವ ಅವಕಾಶವಿತ್ತು.

ಆಗಾಗ್ಗೆ ಖ್ಯಾತನಾಮರನ್ನು ಕರೆಸಿ, ವಿಚಾರ ಸಂಕಿರಣಗಳನ್ನು ಏರ್ಪಡಿಸುತ್ತಿದ್ದರು. ಕೆಲ ತಿಂಗಳ ಹಿಂದೆ ಹೈಕೋರ್ಟಿನ ನ್ಯಾಯಮೂರ್ತಿಗಳನ್ನು ಕರೆಸಿ,ಕಾನೂನು ವಿಷಯದ ವಿಚಾರ ಸಂಕಿರಣ ಏರ್ಪಡಿಸಿದ್ದರು. ಅಲ್ಲದೇ ಡಾ. ವಸುಂಧರಾ ದೊರೆಸ್ವಾಮಿ ಮತ್ತಿತರರ ನೃತ್ಯ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಿದ್ದರು.

ಕ್ರೀಡಾ ಪೋಷಕರು

ವಾಸು ಅವರು ಮೈಸೂರು ಅಥ್ಲೆಟಿಕ್ ಕ್ಲಬ್ ಅಧ್ಯಕ್ಷರಾಗಿದ್ದರು. ಆ ಮೂಲಕ ಪ್ರತಿ ವರ್ಷ ಕ್ರೀಡಾಕೂಟ ನಡೆಸಿ, ಯುವಕ- ಯುವತಿಯರನ್ನು ಉತ್ತೇಜಿಸುತ್ತಿದ್ದರು. ಇದಲ್ಲದೇ ಬೇರೆ ಬೇರೆ ಕ್ರೀಡಾಕೂಟಗಳಿಗೂ ಕೂಡ ನೆರವು ನೀಡುತ್ತಿದ್ದರು.

ಪತ್ರಿಕೆಯ ಮಾಲೀಕರು

ವಾಸು ಅವರು ಡಾ.ಬಿ.ಎಸ್. ಅಜಯಕುಮಾರ್ ಅವರು ಆರಂಭಿಸಿದ್ದ ಕನ್ನಡಿಗರ ಪ್ರಜಾನುಡಿ ಹಾಗೂ ಮೈಸೂರು ಮೇಲ್ ಪತ್ರಿಕೆಗಳನ್ನು 2002 ರಲ್ಲಿ ಖರೀದಿಸಿದ್ದರು. ಈ ಪತ್ರಿಕೆಯ ಮಾಲೀಕರು ಹಾಗೂ ಪ್ರಕಾಶಕರಾಗಿದ್ದರು. ಹಿರಿಯ ಪತ್ರಕರ್ತರಾಗಿದ್ದ ಕೃಷ್ಣವಟ್ಟಂ, ಬಿ.ಎಸ್. ಹರೀಶ್ ಅವರು ಇವುಗಳನ್ನು ಮುನ್ನಡೆಸಿದ್ದರು. ನಂತರ ಮೈಸೂರು ಮೇಲ್ ಪತ್ರಿಕೆ ಮುಚ್ಚಿತು. ಪ್ರಜಾನುಡಿ ಪತ್ರಿಕೆಯನ್ನು ಮಾತ್ರ ನಡೆಸುತ್ತಿದ್ದರು. ಸಿ.ಕೆ. ಮಹೇಂದ್ರ,ಡಿ. ಮಹದೇವಪ್ಪ, ಎಂ.ಆರ್. ಸತ್ಯನಾರಾಯಣ ಸಂಪಾದಕರಾಗಿದ್ದರು. ಪ್ರಸ್ತುತ ವೀರಭದ್ರಪ್ಪ ಬಿಸ್ಲಳ್ಳಿ ಸಂಪಾದಕರು.

ಒಡೆಯರ್ ನಿಕಟವರ್ತಿ

ವಾಸು ಅವರು ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಕಟವರ್ತಿಯಾಗಿದ್ದರು. ಆವರ ಆಪ್ತ ಕಾರ್ಯದರ್ಶಿಯಾಗಿದ್ದ ಲಕ್ಷ್ಮೀನಾರಾಯಣ ಹಾಗೂ ವಾಸು ಎಂದರೇ ಒಡೆಯರ್ ಅವರಿಗೆ ಅಚ್ಚುಮೆಚ್ಚು. ಪ್ರಮೋದಾದೇವಿ ಒಡೆಯರ್ ಅವರು ಕೂಡ ವಾಸು ಅವರ ಬಗ್ಗೆ ಅದೇ ರೀತಿ ಗೌರವ ಭಾವನೆ ಹೊಂದಿದ್ದರು.

ಮಠಮಾನ್ಯಗಳ ಜೊತೆ ಸಂಪರ್ಕ

ವಾಸು ಅವರು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಎಲ್ಲಾ ಮಠಮಾನ್ಯಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಈ ಕ್ಷೇತ್ರಗಳಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ನಡೆದರೂ ವಾಸು ಅವರು ಭಾಗಿಯಾಗುತ್ತಿದ್ದರು.

-----------

ಆತಿಥ್ಯದಲ್ಲೂ ಎತ್ತಿದ ಕೈ

ವಾಸು ಅವರ ಮನೆ ಒಂದು ರೀತಿ ಅನುಭವ ಮಂಟಪದಂತಿತ್ತು. ಅವರ ಆತಿಥ್ಯದಲ್ಲೂ ಎತ್ತಿದ ಕೈ, ಯಾವುದಾದರೂ ನೆಪ ಮಾಡಿಕೊಂಡು ಮೈಸೂರಿನ ರಾಜಕಾರಣಿಗಳು, ಸಾಹಿತಿಗಳು, ಅಧಿಕಾರಿಗಳು ಸೇರಿದಂತೆ ಎಲ್ಲಾ ವರ್ಗದ ಗಣ್ಯರನ್ನು ತಮ್ಮ ಮನೆಗೆ ಕರೆಸಿ, ಸಾಧಕರನ್ನು ಗೌರವಿಸುತ್ತಿದ್ದರು. ಎಲ್ಲರಿಗೂ ಉಪಾಹಾರ- ಊಟ ಕೊಡಿಸುತ್ತಿದ್ದರು.

ಕಳೆದ ಬಾರಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಸಿ. ನಾಗಣ್ಣ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರನ್ನು ಅಭಿನಂದಿಸುವ ನೆಪದಲ್ಲಿ ಕಳೆದ ಡಿ.13 ರಂದು ನಡೆದ ಉಪಾಹಾರ ಕೂಟವೇ ಕೊನೆ. ಇದಾದ ನಂತರ ಅವರ ಆರೋಗ್ಯ ಕ್ಷೀಣಿಸತೊಡಗಿತು. ಸದಾ ಚಟುವಟಿಕೆಯಿಂದ ಪಾದರಸದಂತೆ ಓಡಾಡುತ್ತಿದ್ದ ವಾಸು ಅವರು ಗಾಲಿ ಕುರ್ಚಿಯನ್ನು ಆಶ್ರಯಿಸಬೇಕಾಯಿತು. ಇದಾದ ನಂತರ ಅವರು ಚೇತರಿಸಿಕೊಳ್ಳಲೇ ಇಲ್ಲ. ಈಗ ಮರಳಿ ಬಾರದ ಊರಿಗೆ ಪ್ರಯಾಣಿಸಿದ್ದಾರೆ. ಇನ್ನೂ ಅವರು ನೆನಪು ಮಾತ್ರ...