ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ ನಿವೃತ್ತ ಐಎಎಸ್ ಅಧಿಕಾರಿ ದಿವಂಗತ ಕೆ.ಶಿವರಾಂ ಅವರ ಪತ್ನಿ ವಾಣಿ ಕೆ. ಶಿವರಾಂ ಅವರಿಗೆ ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದಿಂದ ಬಿಜೆಪಿ ವರಿಷ್ಠರು ಟಿಕೆಟ್ ನೀಡಬೇಕೆಂದು ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ಅಣಗಳ್ಳಿ ಬಸವರಾಜು ಒತ್ತಾಯಿಸಿದರು.
ನಗರದ ಜಿಲ್ಲಾಕಾರ್ಯನಿರತ ಪತ್ರಕರ್ತರ ಭವನದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆ. ಶಿವರಾಂ ನಿವೃತ್ತಿ ನಂತರ ಕಳೆದ 10 ವರ್ಷಗಳಿಂದ ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿ ಪಕ್ಷದ ಎಲ್ಲಾ ಚುನಾವಣೆಗಳಲ್ಲಿ ಕೆಲಸ ಮಾಡಿದ್ದಾರೆ. ಕಳೆದ ಬಾರಿ ಅವರಿಗೆ ಕೊನೆಯ ಹಂತದವರಿಗೆ ಅವರು ಚಾಲ್ತಿಯಲ್ಲಿದ್ದು, ನಾನಾ ಕಾರಣಗಳಿಂದ ಟಿಕೆಟ್ ವಂಚಿತರಾಗಿದ್ದು, ಈ ಭಾರಿ ಟಿಕೆಟ್ ಪಡೆಯುವ ಉತ್ಸಾಹದಲ್ಲಿದ್ದರು ಆದರೆ ವಿಧಿ ಅವರನ್ನು ಬಿಡಲಿಲ್ಲ ಎಂದರು.ಬಿಜೆಪಿ ವರಿಷ್ಠ ಯಡಿಯೂರಪ್ಪ ಹಾಗೂ ಅನೇಕ ಮುಖಂಡರು ಸಹ ಕೆ. ಶಿವರಾಂ ಅವರಿಗೆ ಅವಕಾಶ ಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಶಿವರಾಂ ಕ್ಷೇತ್ರದ ವ್ಯಾಪ್ತಿಯ 500 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರವಾಸ ಕೈಗೊಂಡು ಸಂಘಟನೆ ಮಾಡಿದ್ದರು ಎಂದರು. ಫೆ.29 ರಂದು ಹೃದಯಘಾತದಿಂದ ಅಕಾಲಿಕ ಮರಣ ಹೊಂದಿದರು. ಇದರಿಂದ ರಾಜ್ಯ ಹಾಗೂ ಛಲವಾದಿ ಮಹಾಸಭಾಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದರು.ಈಗ ಅವರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಛಲವಾದಿ ಮಹಾಸಭಾದಿಂದ ಅವರ ಕುಟುಂಬದ ನೋವಿನ ಮಧ್ಯೆಯು ಅವರ ಪತ್ನಿ ವಾಣಿ ಶಿವರಾಂ ಅವರನ್ನು ಭೇಟಿಯಾಗಿ, ಕೆ. ಶಿವರಾಂ ಅಣ್ಣ ಅವರ ಸ್ಥಾನವನ್ನು ನೀವು ತುಂಬಬೇಕು. ಈ ನಿಟ್ಟಿನಲ್ಲಿ ಸಕ್ರಿಯ ರಾಜಕಾರಣ ಹಾಗೂ ಸಮಾಜಸೇವೆಗೆ ಬರುವಂತೆ ಅವರನ್ನು ಒಪ್ಪಿಸಿದ್ದೇವೆ ಎಂದರು.
ವಾಣಿ ಶಿವರಾಂಗೆ ಚಾ.ನಗರ ಕ್ಷೇತ್ರದಿಂದ ಟಿಕೆಟ್ ನೀಡಿದರೆ ಗೆಲುವು ಖಚಿತ. ಶಿವರಾಂ ಮಾಡಿರುವ ಜನಪರ ಕೆಲಸಗಳು ಹಾಗೂ ಅವರ ವರ್ಚಸ್ಸು ಕ್ಷೇತ್ರದಲ್ಲಿ ಅನುಕಂಪದ ಆಲೆಯಲ್ಲಿ ವಾಣಿ ಶಿವರಾಂ ಗೆಲುವು ಸಾಧಿಸಲಿದ್ದಾರೆ. ಶಿವರಾಂ ಅವರು ಕಳೆದ 10 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯವಾಗಿದ್ದರು. ಹೀಗಾಗಿ ಬಿಜೆಪಿಯಿಂದ ಟಿಕೆಟ್‌ಗೆ ಪ್ರಥಮ ಅದ್ಯತೆ ನೀಡಿದ್ದೇವೆ. ಇಲ್ಲವೇ ಇತರೇ ಪಕ್ಷಗಳು ಟಿಕೆಟ್ ನೀಡಿದರೆ, ಅವರನ್ನುಗೆಲ್ಲಿಸುವ ಜವಾಬ್ದಾರಿ ನಮ್ಮದಾಗಿರುತ್ತದೆ ಎಂದರು.ಕ್ಷೇತ್ರದಲ್ಲಿ ಈ ಹಿಂದೆ ಮಾಜಿ ಸಚಿವ ದಿ.ಎಚ್.ಎಸ್. ಮಹದೇವಪ್ರಸಾದ್ ಅವರ ನಿಧನದ ಬಳಿಕ ಗೀತಾ ಮಹದೇವಪ್ರಸಾದ್, ಹಾಗೂ ದಿ.ಆರ್.ಧ್ರುವನಾರಾಯಣ್ ನಂತರ ಅವರ ಪುತ್ರ ದರ್ಶನ್‌ಧ್ರುವನಾರಾಯನ್ ಅವರು ಅನುಕಂಪದ ಅಲೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅದೇ, ಮಾದರಿಯಲ್ಲಿ ಕೆ.ಶಿವರಾಂ ಅವರ ಜನಪ್ರಿಯತೆಯಲ್ಲಿ ಅವರ ಪತ್ನಿ ವಾಣಿ ಶಿವರಾಂ ಜಯಗಳಿಸಲಿದ್ದಾರೆ ಎಂದರು.
ಜಿಲ್ಲಾ ಛಲವಾದಿ ಮಹಾಸಭಾದಿಂದ ಕೆ.ಶಿವರಾಂ ನಿಧನದ ಗೌರವಾರ್ಥ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಗರದ ಡಾ.ರಾಜ್‌ಕುಮಾರ್ ಕಲಾ ಮಂದಿರದಲ್ಲಿ ನಡೆಯವ ಈ ಕಾರ್ಯಕ್ರಮಕ್ಕೆ ಅನೇಕ ಗಣ್ಯರು, ಶಿವರಾಂ ಅವರ ಅಭಿಮಾನಿಗಳು ಸೇರಿದಂತೆ ಅವರ ಅಭಿಮಾನಿಗಳು ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕೆ. ಶಿವರಾಂ ಅಭಿಮಾನಿಗಳು ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹಂಸರಾಜ್, ಜಿಲ್ಲಾ ಅಧ್ಯಕ್ಷ ರಮೇಶ್, ಮಾಜಿ ಅಧ್ಯಕ್ಷ ನಾರಾಯಣ್, ಉತ್ತುವಳ್ಳಿ ಬಸವಣ್ಣ, ಮಂಟೇಸ್ವಾಮಿ, ಮುಖಂಡರಾದ ಚಾಮರಾಜು, ಶುಭೋದಯ ಸಿದ್ದರಾಜು ಇದ್ದರು.