ಸಾರಾಂಶ
ನರೇಗಲ್ಲ: ಉಳಿದೆಲ್ಲ ದೇವರು ಅಲಂಕಾರ, ಪೂಜೆ ಮತ್ತಿತರ ಸಂಗತಿಗಳನ್ನು ಬಯಸಿದರೆ ಶಿವನು ಮಾತ್ರ ಧ್ಯಾನದಿಂದ ಪ್ರಸನನ್ನನಾಗುವ ದೇವರಾಗಿದ್ದಾನೆ. ಒಂದು ದಳ ಬಿಲ್ವಪತ್ರೆಯನ್ನು ಓಂ ನಮಃ ಶಿವಾಯ ಮಂತ್ರದೊಂದಿಗೆ ಭಕ್ತಿಯಿಂದ ಏರಿಸಿದರೆ ಸಾಕು ಅವನು ಎಲ್ಲ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಎಂದು ಸಾಹಿತಿ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಹೇಳಿದರು.ಅವರು ಸ್ಥಳೀಯ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಶಿವರಾತ್ರಿಯ ನಿಮಿತ್ತ ಸಂಜೆ ಏರ್ಪಡಿಸಿದ್ದ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಷ್ಟೋ ಜನ ದೇವರೆಲ್ಲಿದ್ದಾನೆ? ಎಂದು ಪ್ರಶ್ನಿಸುತ್ತಾರೆ. ದೇವರು ಈ ಜಗತ್ತಿನ ಚರಾಚರ ವಸ್ತುಗಳಲ್ಲಿ ಇದ್ದಾನೆ. ಅವನನ್ನು ನೋಡುವ ದೃಷ್ಟಿ ಬೇಕಷ್ಟೆ. ಈ ಜಗತ್ತಿಗೆ ಕಾಲಕಾಲಕ್ಕೆ ಮಳೆ ಸುರಿಸುವ, ಎಲ್ಲರಿಗೂ ಉಸಿರಾಡಲು ಗಾಳಿ ನೀಡುವ ಸೃಷ್ಟಿಯೆ ನಮ್ಮ ಕಣ್ಣಿಗೆ ಕಾಣುವ ದೇವರಾಗಿದೆ. ಆದ್ದರಿಂದ ಸೃಷ್ಟಿಯ ಪೂಜೆಯನ್ನೇ ನಾವು ದೇವ ಪೂಜೆ ಎಂದು ಕರೆಯುತ್ತಿದ್ದು, ನಮಗೆ ಬೇಕಾದ ರೂಪ, ಆಕಾರವನ್ನು ನೀಡಿ ಪೂಜಿಸುತ್ತಿದ್ದೇವೆ ಎಂದು ಕುಲಕರ್ಣಿ ಹೇಳಿದರು.ಲಿಂಗ ರೂಪದಲ್ಲಿ ಶಿವನನ್ನು ಮಾತ್ರ ಪೂಜಿಸುತ್ತಿದ್ದು, ಉಳಿದೆಲ್ಲ ದೇವಾನುದೇವತೆಗಳಿಗೆ ರೂಪವನ್ನು ನೀಡಿದ್ದೇವೆ. ಈ ಭಾವಚಿತ್ರಗಳು ನಮ್ಮ ಭಾವನೆಯಿಂದ ಬಂದ ಮೂರ್ತ ರೂಪಗಳೆ ಹೊರತು ದೇವರು ಹೀಗೇ ಇದ್ದಾನೆ, ಇರಬೇಕು ಎನ್ನುವ ಕಲ್ಪನೆ ಯಾರಿಗೂ ಇಲ್ಲ ಎಂದು ಕುಲಕರ್ಣಿ ಹೇಳಿದರು. ಎಲ್ಲ ಹಬ್ಬಗಳಿಂದ ಮಹಾಶಿವರಾತ್ರಿ ಅತ್ಯಂತ ಪೂಜ್ಯನೀಯ ಹಬ್ಬವಾಗಿದ್ದು, ಈ ಹಬ್ಬವನ್ನು ಇಡೀ ದೇಶಾದ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತಿದೆ ಎಂದು ತಿಳಿಸಿದ ಕುಲಕರ್ಣಿಯವರು, ಎಲ್ಲ ಜ್ಯೋತಿರ್ಲಿಂಗಗಳ ದರುಶನಕ್ಕೆ ವ್ಯವಸ್ಥೆ ಮಾಡಿರುವ ಸಂಚಾಲಕಿ ಬ್ರ. ಕು. ಸವಿತಕ್ಕ ಮತ್ತು ಎಲ್ಲ ಕಾರ್ಯಕರ್ತರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಸಂಚಾಲಕಿ ಸವಿತಕ್ಕ ಮಾತನಾಡಿ, ಶಿವ ಮತ್ತು ಶಂಕರರು ಹೇಗೆ ಬೇರೆ ಬೇರೆ ಎಂಬುದನ್ನು ವಿವರಿಸಿದರು. ಶಿವರಾತ್ರಿ ಹಬ್ಬವು ಏಕಿಷ್ಟು ಮಹತ್ವವನ್ನು ಪಡೆದುಕೊಂಡಿದೆ, ಅದರ ಹಿನ್ನೆಲೆ ಮತ್ತು ಮುನ್ನೆಲೆಗಳನ್ನು ತಿಳಿಸಿ, ಭಾರತ ದೇಶದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು.ಮುಖ್ಯ ಶಿಕ್ಷಕ ಬಿ. ಬಿ. ಕುರಿ ಮತ್ತು ಶಿಕ್ಷಕ ವಿ. ಎ. ಕುಂಬಾರ ಶಿವರಾತ್ರಿಯ ಮಹತ್ವ ಮತ್ತು ಪಟ್ಟಣದ ಜನತೆಗೆ ಈಶ್ವರೀಯ ವಿಶ್ವವಿದ್ಯಾಲಯವು ನೀಡುತ್ತಿರುವ ಆಧ್ಯಾತ್ಮಿಕ ಸೇವೆಯ ಬಗ್ಗೆ ಮಾತನಾಡಿದರು. ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಿಸಲಾದ ಜ್ಯೋತಿರ್ಲಿಂಗಗಳ ಉದ್ಘಾಟನೆಯನ್ನು ದಂಪತಿಗಳಿಂದ ಮಾಡಿಸಿದ್ದು ವಿಶೇಷವೆನ್ನಿಸಿತು.
ಮಹಾಶಿವರಾತ್ರಿ ನಿಮಿತ್ತ ಮಕ್ಕಳಿಗಾಗಿ ಏರ್ಪಡಿಸಿದ್ದ ಅನೇಕ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ನೀಡಿ ಪುರಸ್ಕರಿಸಲಾಯಿತು.