ಸಾರಾಂಶ
----
ಕನ್ನಡಪ್ರಭ ವಾರ್ತೆ ಮೈಸೂರುಜನತಾ ಪರಿವಾರದೊಂದಿಗೆ ಕಳೆದ ನಾಲ್ಕು ದಶಕಗಳಿಂದ ಹೊಂದಿದ್ದ ರಾಜಕೀಯ ನಂಟನ್ನು, ಕರುಳ ಸಂಬಂಧವನ್ನು ಕಡಿದುಕೊಳ್ಳುವ ಸಂದರ್ಭ ಬಂದಿದೆ. ಅತ್ಯಂತ ಬೇಸರ, ವಿಷಾದದಿಂದ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಮೈಸೂರು ಮಹಾ ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್ ತಿಳಿಸಿದ್ದಾರೆ.
ಪಕ್ಷ ನನಗೆ ಅನೇಕ ಜವಾಬ್ದಾರಿಗಳನ್ನು ನೀಡಿತ್ತು. 2 ಬಾರಿ ನಗರ ಪಾಲಿಕೆ ಸದಸ್ಯನಾಗುವ ಮತ್ತು 2 ಬಾರಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವ ಅವಕಾಶವನ್ನು ಕಲ್ಪಿಸಿತ್ತು. ಅದಕ್ಕೆ ಕಾರಣರಾದ ಪಕ್ಷದ ಎಲ್ಲಾ ಹಿರಿಯರಿಗೆ, ಕ್ಷೇತ್ರದ ಮತದಾರರಿಗೆ, ರಾಜಕೀಯ ಹಿತೈಷಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.ದೊರಕಿದ ಅಧಿಕಾರ, ಅವಕಾಶಗಳನ್ನು ಜನರ ಒಳಿತಿನ ಕೆಲಸಗಳಿಗೆ ಬಳಸಿಕೊಂಡಿದ್ದೇನೆ ಎನ್ನುವ ಸಮಾಧಾನ ನನಗಿದೆ. ಹಣ, ಆಸ್ತಿ ಕೂಡಿಡುವುದಕ್ಕಿಂತ ಜನರ ನೋವು- ನಲಿವುಗಳ ಜೊತೆಗಿದ್ದು, ತತ್ವ, ಸಿದ್ಧಾಂತ ಬದ್ಧ ರಾಜಕಾರಣ ಮಾಡಬೇಕೆಂದು ನಂಬಿದವನು ನಾನು. ಇದೇ ಕಾರಣಕ್ಕೆ ಹಣ, ಅಧಿಕಾರ ಮತ್ತಿತರ ಆಮಿಷಗಳಿಗೆ ಬಲಿ ಬೀಳುವ ಹಲವು ಸಾಧ್ಯತೆಗಳಿಂದ ತಪ್ಪಿಸಿಕೊಂಡು ಜೆಡಿಎಸ್ ಪಕ್ಷಕ್ಕೆ ನಿಷ್ಠನಾಗಿದ್ದೆ ಎಂದಿದ್ದಾರೆ.
ಆದರೆ, ಕಳೆದೆರಡು ವಿಧಾನಸಭಾ ಚುನಾವಣೆಗಳಲ್ಲಿ ಟಿಕೆಟ್ ನೀಡಿ, ಕೈ ತೊಳೆದುಕೊಂಡ ಪಕ್ಷದ ಉನ್ನತ ಮತ್ತು ಸ್ಥಳೀಯ ಮಟ್ಟದ ನಾಯಕರು, ರಾಜಕೀಯ ಒಳ ಒಪ್ಪಂದ ಮಾಡಿಕೊಂಡು ನನ್ನನ್ನು ಅನೇಕ ಸಂಕಷ್ಟಗಳಿಗೆ ಈಡು ಮಾಡಿದರು. ಯಾರದೋ ಲಾಭಕ್ಕೆ, ಚಿತಾವಣೆಗೆ ನಾನು ದಾಳವಾದೆನಲ್ಲ ಎಂದು ನನಗೆ ನಾನೇ ಹಳಿದುಕೊಳ್ಳುವಂತ ಸ್ಥಿತಿಯನ್ನು ಸೃಷ್ಟಿಸಿದ್ದರು ಎಂದು ಅವರು ಆರೋಪಿಸಿದ್ದಾರೆ.ಇಲ್ಲಿಯವರೆಗೆ ಪಕ್ಷದ ನಾಯಕರು ಉರುಳಿಸುತ್ತಿದ್ದ ಒಳ ಒಪ್ಪಂದದ ದಾಳಗಳು, ಈಗ ನೇರ ನೇರಾ ಒಡಂಬಡಿಕೆಯ ಹಂತವನ್ನು ತಲುಪಿವೆ. ಬಿಜೆಪಿ ಜೊತೆ ಒಂದಾಗಿರುವುದರಿಂದ ಮುಂದೆ ನಿಮಗೆ ಲಾಭವಾಗುತ್ತೆ. ಪಕ್ಷ ಬಿಡಬೇಡಿ ಎಂದು ಅನೇಕ ಹಿತೈಷಿಗಳು ಸಲಹೆ ನೀಡುತ್ತಿದ್ದಾರೆ. ಪಕ್ಷದ ನಾಯಕರು ಕೂಡ ವಿಧಾನಸಭಾ ಚುನಾವಣೆಗೆ ಟಿಕೆಟ್ ಘೋಷಿಸುವ ಮೊದಲು ಇಂಥದೇ ಲಾಭದ ಅಭಯ ನೀಡಿದ್ದರು. ಆದರೆ, ವಾಸ್ತವದಲ್ಲಿ ಆಗಿದ್ದೇ ಬೇರೆ. ಮತ್ತೆ ಮತ್ತೆ ನಂಬಿಕೆ ಇಡುವಷ್ಟು ವ್ಯವದಾನ, ರಾಜಕೀಯ ಚಾಣಾಕ್ಷತನ ನನಗಿಲ್ಲ. ಹೀಗಾಗಿ, ಅನಿವಾರ್ಯವಾಗಿ ಪಕ್ಷವನ್ನು ತೊರೆಯುತ್ತಿದ್ದೇನೆ. ನಾನು ಯಾರನ್ನೂ ದ್ವೇಷಿಸುವುದೂ ಇಲ್ಲ, ದೂಷಿಸುವುದೂ ಇಲ್ಲ. ಈವರೆಗೆ ಸಹಕಾರ ನೀಡಿದ ಎಲ್ಲರಿಗೂ ಅವರು ಧನ್ಯವಾದ ತಿಳಿಸಿದ್ದಾರೆ.