ಸಾರಾಂಶ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ತಮ್ಮ ಇಡೀ ರಾಜಕೀಯ ಜೀವನದಲ್ಲಿ ಕುಟುಂಬ ರಾಜಕೀಯಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದು, ಕೊನೆಯ ಹಂತದಲ್ಲಿಯೂ ಸಹ ತಮ್ಮ ಕುಟುಂಬ ರಾಜಕಾರಣ ಮುಂದುವರೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ತಮ್ಮ ಇಡೀ ರಾಜಕೀಯ ಜೀವನದಲ್ಲಿ ಕುಟುಂಬ ರಾಜಕೀಯಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದು, ಕೊನೆಯ ಹಂತದಲ್ಲಿಯೂ ಸಹ ತಮ್ಮ ಕುಟುಂಬ ರಾಜಕಾರಣ ಮುಂದುವರೆಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯ ದೊರೆಯಲಾರದೆಂದು ಆ ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದಾಗಿ ಮಾಜಿ ಸಚಿವ ಹಾಗೂ ಅಖಿಲ ಭಾರತ ಬಂಜಾರಾ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಬಾಬುರಾವ್ ಚವ್ಹಾಣ್ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರ ನೇತೃತ್ವದಲ್ಲಿ, ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಷ್ಟ್ರೀಯ ಮುಖಂಡ ಸಿಟಿ ರವಿ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದ್ದಾಗಿ ಹೇಳಿದರು.
ತಮ್ಮ ಪುತ್ರ ಪ್ರಿಯಾಂಕ್ ಖರ್ಗೆಗೆ ಸಚಿವ ಸ್ಥಾನ ಕೊಟ್ಟಿದ್ದಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಕೊಟ್ಟಿದ್ದಾರೆ. ಪ್ರಿಯಾಂಕ್ ಸ್ಥಾನಮಾನಗಳಿಗೆ ಕುತ್ತು ಬರುವುದನ್ನು ತಡೆಯಲು ಸೋಲುವ ಬಂಜಾರಾ ಸಮಾಜದ ನಾಯಕರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟು ಗೆಲ್ಲದಂತೆ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿನ ಬಂಜಾರಾ ಸಮಾಜದ ನಾಯಕರ ಪರಿಸ್ಥಿತಿ ಬಹಳ ಚಿಂತಾಜನಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮೀಣ ಮತಕ್ಷೇತ್ರದಿಂದ ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಹಾಗೂ ಚಿಂಚೋಳಿ ಮೀಸಲು ಕ್ಷೇತ್ರದಿಂದ ಸುಭಾಷ್ ರಾಠೋಡ್ ಗೆಲ್ಲುವುದಿಲ್ಲ ಎಂದು ಗೊತ್ತಿದ್ದರೂ ಸಹ ಅವರಿಗೆ ಟಿಕೆಟ್ ಕೊಟ್ಟರು. ನಿರೀಕ್ಷೆಯಂತೆಯೇ ಅವರಿಬ್ಬರೂ ಪರಾಭವಗೊಂಡಿದ್ದು, ಪರಿಣಾಮ ಪುತ್ರ ಪ್ರಿಯಾಂಕ್ ಖರ್ಗೆಯವರಿಗೆ ಮಾತ್ರ ಗೆಲುವು ಸಾಧಿಸಲು ಅನುಕೂಲ ಮಾಡಿಕೊಂಡರು, ಹೀಗಾಗಿ ಬಂಜಾರಾ ಸಮಾಜವು ಕಾಂಗ್ರೆಸ್ ಪಕ್ಷದಲ್ಲಿ ಬಲಿಪಶುಗಳಾಗುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಲೋಕಸಭಾ ಚುನಾವಣೆಯಲ್ಲಿಯೂ ಸಹ ಕಲಬುರ್ಗಿ ಮೀಸಲು ಕ್ಷೇತ್ರದಲ್ಲಿ ತಮ್ಮ ಅಳಿಯನಿಗೆ ಖರ್ಗೆಯವರು ಟಿಕೆಟ್ ಕೊಡುವ ಮೂಲಕ ಬಂಜಾರಾ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿರುವ ಬಂಜಾರಾ ಸಮುದಾಯದವರಿಗೆ ಯಾವುದೇ ರೀತಿಯಲ್ಲಿ ಬೆಂಬಲ, ಸಹಕಾರ ಕೊಡದೇ ನಿರಂತರವಾಗಿ ಕಡೆಗಣಿಸಲಾಗುತ್ತಿದೆ. ಬಂಜಾರಾ ಸಮಾಜಕ್ಕೆ ಕಾಂಗ್ರೆಸ್‌ನಿಂದ ಉಪಯೋಗ ಇಲ್ಲ. ಬಿಜೆಪಿಯಲ್ಲಿಯೇ ಸೂಕ್ತ ಸ್ಥಾನಮಾನ ಲಭಿಸುತ್ತಿವೆ ಎಂದರು. ಡಾ. ಇಂದಿರಾ ಶಕ್ತಿ, ಬಸವರಾಜ್ ಸಪ್ಪನಗೋಳ್, ಶಂಕರ್ ಚವ್ಹಾಣ್, ರಾಜಶೇಖರ್ ಡೊಂಗರಗಾಂವ್ ಇದ್ದರು.