ಅಪಘಾತ, ಅವಗಡಗಳು ಸಂಭವಿಸಿದ ಸಂದರ್ಭದಲ್ಲಿ ತಕ್ಷಣ ಅವರಿಗೆ ಪ್ರಥಮ ಚಿಕಿತ್ಸೆ ನೀಡಬೇಕು, ಹೃದಯಾಘಾತವಾದ ತಕ್ಷಣ ಎದೆಭಾಗದಲ್ಲಿ ತಮ್ಮ ಎರಡು ಕೈಗಳಿಂದ ಒತ್ತಬೇಕು. ಸುಮಾರು ಎರಡುವರೆ ಇಂಚು ಒಳಗಡೆ ಹೋಗುವ ರೀತಿ ಎದೆಯನ್ನು ಒತ್ತಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಚಿನಕುರಳಿ ಗ್ರಾಮದ ಸೊಸೈಟಿ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಪತ್ನಿ ನಾಗಮ್ಮ ಚಾಲನೆ ನೀಡಿದರು.

ಎಸ್‌ಟಿಜಿ ಗ್ರೂಪ್ಸ್ ಹಾಗೂ ಸ್ಪಂದನ ಆಸ್ಪತ್ರೆಯಿಂದ ಡಾ.ನಿಶಾಂತ್ ಸ್ಮರಣಾರ್ಥವಾಗಿ ನಡೆದ ಆರೋಗ್ಯ ಶಿಬಿರದಲ್ಲಿ ಬಿಪಿ, ಶುಗರ್, ಹೃದಯ ಸಂಬಂಧಿ ಕಾಯಿಲೆ, ಇಸಿಜಿ, ಫಲ್ಮನರಿ ಪರೀಕ್ಷೆ, ಕಣ್ಣು, ಮೂಳೆ ತಪಾಸಣೆ, ಸಿಪಿಆರ್, ದಂತ ಚಿಕಿತ್ಸೆ, ಸಾಮಾನ್ಯ ಚಿಕಿತ್ಸೆ ತಪಾಸಣೆ ಮಾಡಲಾಯಿತು.

ಉಚಿತ ರಕ್ತದಾನ ಶಿಬಿರ ನಡೆಸಿ 30ಕ್ಕೂ ಅಧಿಕ ಯೂನಿಟ್ ರಕ್ತ ಸಂಗ್ರಹ ಮಾಡಿ ಜಿಲ್ಲಾ ಆಸ್ಪತ್ರೆ ರಕ್ತನಿಧಿ ಕೇಂದ್ರಕ್ಕೆ ಕಳುಹಿಸಲಾಯಿತು. ವಿಶೇಷವಾಗಿ ಅಪಘಾತ, ಹೃದಯಾಘಾತ ಹಾಗೂ ಹಾವು ಕಚ್ಚಿದ ವೇಳೆ ಮೊದಲು ಮಾಡಬೇಕಾದ ಪ್ರಥಮ ಚಿಕಿತ್ಸೆ ಬಗ್ಗೆ ಡಾ.ಸುಷ್ಮ ಅವರು ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ನೀಡಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಆರೋಗ್ಯ ಪ್ರತಿಯೊಬ್ಬರಿಗೂ ಬಹಳ ಮುಖ್ಯ. ಹಾಗಾಗಿ ಎಲ್ಲರು ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಚಿಕಿತ್ಸೆಪಡೆದುಕೊಳ್ಳಬೇಕು ಎಂದರು.

ಡಾ.ಸುಷ್ಮ ಮಾತನಾಡಿ, ಅಪಘಾತ, ಅವಗಡಗಳು ಸಂಭವಿಸಿದ ಸಂದರ್ಭದಲ್ಲಿ ತಕ್ಷಣ ಅವರಿಗೆ ಪ್ರಥಮ ಚಿಕಿತ್ಸೆ ನೀಡಬೇಕು, ಹೃದಯಾಘಾತವಾದ ತಕ್ಷಣ ಎದೆಭಾಗದಲ್ಲಿ ತಮ್ಮ ಎರಡು ಕೈಗಳಿಂದ ಒತ್ತಬೇಕು. ಸುಮಾರು ಎರಡುವರೆ ಇಂಚು ಒಳಗಡೆ ಹೋಗುವ ರೀತಿ ಎದೆಯನ್ನು ಒತ್ತಬೇಕು ಎಂದರು.

ಹಾವು ಕಚ್ಚಿದಾಗ ಯಾವುದೇ ಕಾರಣಕ್ಕೂ ಕೈ ಹಾಗೂ ಕಾಲುಗಳನ್ನು ಎದೆ ಭಾಗಕ್ಕಿಂತ ಮೇಲೆ ಎತ್ತಬಾರದು. ಬಾಯಿಯಿಂದ ವಿಷ ತೆಗೆಯುವುದು, ಹಗ್ಗದಿಂದ ಕೈ ಅಥವ ಕಾಲು ಕಟ್ಟುವುದು ಮಾಡಬಾರದು. ತಕ್ಷಣವೇ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಕೊಡಿಸಬೇಕು ಎಂಬಾಗಿ ಸಲಹೆ ನೀಡಿದರು.

ಶಿಬಿರದಲ್ಲಿ ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಸೊಸೈಟಿ ಅಧ್ಯಕ್ಷ ಸಿ.ಎಸ್.ಗೋಪಾಲಗೌಡ, ಜಿಲ್ಲಾ ಯೂನಿಯನ್ ನಿರ್ದೇಶಕ ರಾಮಕೃಷ್ಣೇಗೌಡ, ವೈದ್ಯರಾದ ಡಾ.ಸುಷ್ಮ, ಡಾ.ಮಹೇಶ್, ಡಾ.ಸಂಜೀವ್, ಡಾ.ಸೌಮ್ಯ, ಡಾ.ಶಿವರಂಜಿನಿ, ಡಾ.ಅಮರ್ ನಾಥ್, ಡಾ.ಚಂದನ್, ಡಾ.ಅನುಷ ಸೇರಿದಂತೆ ಹಲವರು ಹಾಜರಿದ್ದರು.