ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಮೇಲುಕೋಟೆ ಕ್ಷೇತ್ರದ ಮಾಜಿ ಶಾಸಕ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ 62ನೇ ವರ್ಷದ ಹುಟ್ಟುಹಬ್ಬವನ್ನು ಜೆಡಿಎಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಭಾನುವಾರ ವಿಜೃಂಭಣೆಯಿಂದ ಆಚರಿಸಿದರು.ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡುವಂತೆ ಸಿ.ಎಸ್.ಪುಟ್ಟರಾಜು ಅವರು ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಪಟ್ಟಣದ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ, ಅಭಿಷೇಕ ಸಲ್ಲಿಸಿದರು. ಬಳಿಕ ಪ್ರಸಾದ ವಿತರಿಸಿದರು. ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತೆರಳಿದ ಕಾರ್ಯಕರ್ತರು ಆಸ್ಪತ್ರೆಯ ಒಳ ಹಾಗೂ ಹೊರ ರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಿದರು.
ಪುರಸಭೆ ಸದಸ್ಯ ಆರ್.ಸೋಮಶೇಖರ್ ಮಾತನಾಡಿ, ನಮ್ಮ ನಾಯಕರಾದ ಸಿ.ಎಸ್.ಪುಟ್ಟರಾಜು ಅವರ ಹುಟ್ಟುಹಬ್ಬವನ್ನು ಪಟ್ಟಣದ ಎಲ್ಲಾ ವಾರ್ಡ್‌ಗಳಲ್ಲೂ ವಿಜೃಂಭಣೆಯಿಂದ ಆಚರಣೆ ಮಾಡಬೇಕು ಎಂಬುದಾಗಿ ಅವರ ಎಲ್ಲಾ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ತೀರ್ಮಾನಿಸಿದ್ದೆವು. ಅವರ ಮನೆಯಲ್ಲೊಂದು ನಡೆದ ದುರ್ಘಟನೆಯಿಂದ ಹುಟ್ಟಹಬ್ಬ ಆಚರಣೆ ಮಾಡಿಕೊಳ್ಳದಂತೆ ಸೂಚನೆ ನೀಡಿದರು ಎಂದರು.ಈ ಹಿನ್ನೆಲೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಸರಳವಾಗಿ ದೇವರಿಗೆ ಪೂಜೆ ಸಲ್ಲಿಸಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿ ಆಚರಿಸಿದ್ದೇವೆ. ಸಿ.ಎಸ್.ಪುಟ್ಟರಾಜು ಅವರು ಕ್ಷೇತ್ರದಲ್ಲಿ ಮೂರು ಬಾರಿ ಶಾಸಕ, ಸಚಿವರಾಗಿ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯಾಗಿ ಅಭಿವೃದ್ಧಿ ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು ರಾಜ್ಯದ ಸಚಿವರಾಗಿ ರಾಜ್ಯದ ಉದ್ದಗಲಕ್ಕೂ ಕೆಲಸ ಮಾಡುವಂತೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಮಾಡಲಿ ಎಂದರು.
ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್ ಮಾತನಾಡಿ, ಸಿ.ಎಸ್.ಪುಟ್ಟರಾಜು ಅವರು ಶಾಸಕ, ಸಚಿವರಾಗಿ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸುವ ಮೂಲಕ ಭಗೀರಥ ಎಂಬುದಾಗಿ ಬಿರುದು ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಕ್ಷೇತ್ರದ ಸೇವೆ ಮಾಡುವ ಮತ್ತಷ್ಟು ಅವಕಾಶ ಕಲ್ಪಿಸಲಿ ಎಂದು ಹಾರೈಸಿದರು.ಪುರಸಭೆ ಅಧ್ಯಕ್ಷೆ ಜ್ಯೋತಿ ಲಕ್ಷ್ಮಿ, ಸದಸ್ಯರಾದ ಎಂ.ಗಿರೀಶ್, ಚಂದ್ರ ಮಾತನಾಡಿ, ಸಿ.ಎಸ್.ಪುಟ್ಟರಾಜು ಅವರ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿ ಎರಡು ಸಾವಿರ ಜನರಿಗೆ ಓಳಿಗೆ ಊಟ ಹಾಕಿಸಬೇಕೆಂಬುದಾಗಿ ತೀರ್ಮಾನಿಸಿದ್ದೆವು. ಆದರೆ, ಸರಳವಾಗಿ ಆಚರಣೆಗೆ ಸೂಚಿಸಿದರು. ಅದರಂತೆ ಆಚರಣೆ ಮಾಡಿದ್ದೇವೆ. ಸಿಎಸ್ಪಿ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸುವ ಶಕ್ತಿ ಅವರಿಗೆ ಭಗವಂತ ಕರುಣಿಸಲೆಂದು ಹಾರೈಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಚಿಕ್ಕಾಡೆ ಚೇತನ್, ಗಿರೀಶ್, ಮಾಣಿಕ್ಯನಹಳ್ಳಿ ಅಶೋಕ್, ಪುರಸಭೆ ಸದಸ್ಯ ಹಾರೋಹಳ್ಳಿ ಎ.ಕೃಷ್ಣ, ಶಿವಕುಮಾರ್, ಟೌನ್‌ಚಂದ್ರು, ಇಮ್ರಾನ್, ಆದರ್ಶ, ಶಾಂತಿನಗರ ರಾಜೇಶ್, ಬಿ.ಎಸ್.ಜಯರಾಮ್, ಬೊಮ್ಮರಾಜು, ಹಾರೋಹಳ್ಳಿ ಮಹೇಶ್, ಕೃಷ್ಣ, ಹಿರೇಮರಳಿ ರಮೇಶ್, ಕುಮಾರ್, ಶಶಿಕುಮಾರ್, ಎಸ್ಸಿ/ಎಸ್‌ಟಿ ಟೌನ್ ಘಟಕದ ಅಧ್ಯಕ್ಷ ಗುರು, ಆರುಮುಗಂ, ಸಗಾಯಂ, ಮಹಮದ್‌ಗೌಸ್ ಸೇರಿದಂತೆ ಹಲವರು ಹಾಜರಿದ್ದರು.ರಾರಾಜಿಸಿದ ಕಟೌಟ್, ಬ್ಯಾನರ್‌ಗಳು:
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದಲ್ಲಿ ಸಿಎಸ್ಪಿ ಅವರಿಗೆ ಶುಭಾಶಯಗಳನ್ನು ಕೋರಿದ ಕಟೌಟ್, ಬ್ಯಾನರ್‌ಗಳು ರಾರಾಜಿಸಿದವು. ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು ತಮ್ಮ ನೆಚ್ಚಿನ ನಾಯಕರಾದ ಸಿ.ಎಸ್.ಪುಟ್ಟರಾಜು ಅವರಿಗೆ ಶುಭಾ ಕೋರಿ ಕಟೌಟ್‌ಗಳು, ಬ್ಯಾನರ್‌ಗಳನ್ನು ಹಾಕಿದ್ದರು.ಪಟ್ಟಣದ ಸಿ.ಎಸ್.ಪುಟ್ಟರಾಜು ಅವರ ನಿವಾಸ, ಮಂಡ್ಯ ಸರ್ಕಲ್, ಐದುದೀಪದ ವೃತ್ತ, ಮೈಸೂರ, ನಾಗಮಂಗಲ, ಕೆಆರ್‌ಎಸ್ ರಸ್ತೆಗಳು ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಕಟೌಟ್ ಗಳು ರಾರಾಜಿಸಿದವು. ಪಟ್ಟಣದ ಐದು ದೀಪವೃತ್ತದ ವೃತ್ತದಲ್ಲಿ ಸಿಎಸ್ಪಿ ಹುಟ್ಟಹಬ್ಬದ ಅಂಗವಾಗಿ ಮುಖಂಡ ಮಾಣಿಕ್ಯನಹಳ್ಳಿ ಅಶೋಕ್ 62 ಅಡಿ ಎತ್ತರ ಕಟೌಟ್ ಹಾಕಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಮತ್ತೊಬ್ಬ ಜೆಡಿಎಸ್ ಮುಖಂಡ ಶ್ಯಾದನಹಳ್ಳಿ ಅಕ್ಷಯ್ ಅವರ ಬ್ಯಾನರ್‌ಗಳು ಸಹ ಪಟ್ಟಣದ ಬೀದಿಬೀದಿಗಳಲ್ಲಿ ರಾರಾಜಿಸಿದವು. ಸಿ.ಎಸ್.ಪುಟ್ಟರಾಜು ಅವರ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಿದರೂ ಸಹ ಅಭಿಮಾನಿಗಳು, ಕಾರ್ಯಕರ್ತರು ಮಾತ್ರ ಕಟೌಟ್, ಬ್ಯಾನರ್‌ಗಳ ಹಾಕಿಸುವ ಶುಭಕೋರುವ ಮೂಲಕ ತಮ್ಮ ನೆಚ್ಚಿನ ನಾಯಕನ ಮೇಲಿರುವ ಪ್ರೀತಿ ಅಭಿಮಾನ ತೋರ್ಪಡಿಸಿದರು. ಕೇವಲ ಪಟ್ಟಣದಲ್ಲಿ ಮಾತ್ರವಲ್ಲಿ ತಾಲೂಕಿನ ಊರು-ಊರುಗಳಲ್ಲಿ ಸಿ.ಎಸ್.ಪುಟ್ಟರಾಜು ಅವರ ಕಟೌಟ್, ಬ್ಯಾನರ್‌ಗಳು ರಾರಾಜಿಸಿದವು.