ರಾಯಣ್ಣ ಬ್ರಿಗೇಡ್ ಆರಂಭಿಸುವ ಸೂಚನೆ ನೀಡಿದ ಮಾಜಿ ಸಚಿವ ಈಶ್ವರಪ್ಪ

| Published : May 27 2024, 01:04 AM IST

ಸಾರಾಂಶ

ಬಿಜೆಪಿಯಿಂದ ಉಚ್ಚಾಟನೆಗೊಂಡು ರಾಜಕೀಯವಾಗಿ ಅತಂತ್ರವಾಗಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮತ್ತೆ ಪ್ರವರ್ಧಮಾನಕ್ಕೆ ಬರಲು ತಮ್ಮ ಹಳೆಯ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಚುನಾವಣೆ ಮುಗಿದ ಬಳಿಕ ಮತ್ತೆ ರಾಯಣ್ಣ ಬ್ರಿಗೇಡ್ ಚಟುವಟಿಕೆ ಆರಂಭಿಸುವ ಸುಳಿವು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಿಜೆಪಿಯಿಂದ ಉಚ್ಚಾಟನೆಗೊಂಡು ರಾಜಕೀಯವಾಗಿ ಅತಂತ್ರವಾಗಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮತ್ತೆ ಪ್ರವರ್ಧಮಾನಕ್ಕೆ ಬರಲು ತಮ್ಮ ಹಳೆಯ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಚುನಾವಣೆ ಮುಗಿದ ಬಳಿಕ ಮತ್ತೆ ರಾಯಣ್ಣ ಬ್ರಿಗೇಡ್ ಚಟುವಟಿಕೆ ಆರಂಭಿಸುವ ಸುಳಿವು ನೀಡಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಅನೇಕರು ರಾಯಣ್ಣ ಬ್ರಿಗೇಡ್ ಮಾಡ್ಬೇಕು ಅಂತಿದ್ದಾರೆ. ಹಿಂದುಳಿದವರು, ದಲಿತರು ಎಲ್ಲಾ ಸಮಾಜದವರು ಸೇರಿಸಬೇಕು ಅಂತಿದ್ದಾರೆ. ಏನು ಮಾಡಬೇಕು ಅಂತ ನಾನೊಬ್ಬನೇ ತೀರ್ಮಾನ ತೆಗೆದುಕೊಳ್ಳಲ್ಲ. ಚುನಾವಣೆ ನಿಲ್ಲಬೇಕಾದರೂ ನಾನೊಬ್ಬನೇ ನಿರ್ಧಾರ ತಗೊಂಡಿದ್ದಲ್ಲ. ಯಾರೂ ಬಿಜೆಪಿ, ಹಿಂದುತ್ವ ಉಳಿಯಬೇಕು, ಅಪ್ಪ-ಮಕ್ಕಳಿಂದ ಪಕ್ಷ ಮುಕ್ತರಾಗಬೇಕೆಂದು ಬಯಸುವವರು ಅನೇಕರಿದ್ದಾರೆ. ಅವರಿಂದ ಅಭಿಪ್ರಾಯ ಪಡೆದು ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಚುನಾವಣೆ ಮುಗಿದ ನಂತರ ಯಾರ್‍ಯಾರು ಈ ಭಾವನೆಯಲ್ಲಿದ್ದಾರೊ? ರಾಜ್ಯದಲ್ಲಿರೋ ಎಲ್ಲಾ ಹಿತೈಷಿಗಳನ್ನ ಒಂದು ಕಡೆ ಸೇರಿಸುತ್ತೇನೆ. ಎಲೆಕ್ಷನ್ ಮುಗಿದು ಮಾರನೇ ದಿನವೇ ಆಗಲ್ಲ, ನಾನು ದಡ್ಡ ಅಂತ ಯಾವುದೇ ತೀರ್ಮಾನ ತೆಗೆದುಗೊಳ್ಳಲ್ಲ. ರಾಜ್ಯದಲ್ಲಿ ಹಿಂದುಳಿದವರು, ಕುರುಬರಿಗೆ ಅನ್ಯಾಯ ಆಗಿದೆ ಎಂದು ಸಾಕಷ್ಟು ಜನ ಹೇಳ್ತಿದ್ದಾರೆ. ಏನೇನು ಪರಿವರ್ತನೆ ಆಗುತ್ತೆ ನೋಡಿ ಎಂದು ಮಾರ್ಮಿಕವಾಗಿ ಹೇಳಿದರು.ಕೇವಲ ರಾಜಕೀಯ ಮಾತ್ರ ಅಲ್ಲ, ಸಾಮಾಜಿಕ, ಶೈಕ್ಷಣಿಕವಾಗಿ ನ್ಯಾಯ ಸಿಗಬೇಕು, ಆ ನಿಟ್ಟಿನಲ್ಲಿ ಏನು ಮಾಡಬೇಕು ಎಂದು ಪ್ರಮುಖರ ಜೊತೆ ಮಾತಾಡಿ ತೀರ್ಮಾನ ಮಾಡುವೆ ಎಂದರು.

ನಿಮ್ಮ ಕೈಲಿ ಆಗಲ್ಲ ಕೊಟ್ಬಿಡಿ ಸಿಬಿಐಗೆ ವಹಿಸಿ:

ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದ ಹಿಂದೆ ಡಿಕೆಶಿ ಕೈವಾಡ ಇದೆಯಾ ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಡಿಕೆ ಶಿವಕುಮಾರ್ ಪೆನ್ ಡ್ರೈವ್ ಪ್ಯಾಕ್ಟರಿ ಮಾಲೀಕ ಅಂತ ಹೇಳಲ್ಲ. ಕುಮಾರಸ್ವಾಮಿ ಅವರ ದೊಡ್ಡ ಪಾತ್ರ ಇದೆ ಅಂತಾನೂ ಹೇಳಲ್ಲ, ಒಟ್ಟಾರೆ ಇದರಿಂದ ರಾಜ್ಯ, ದೇಶ ಹಾಗೂ ಪ್ರಪಂಚದ ಮುಂದೆ ಬೆತ್ತಲೆಯಾಗಿ ಬಿಟ್ಟಿದ್ದೇವೆ. ಹೆಣ್ಣನ್ನು ತಾಯಿ ಎಂದು ಕರೀತಿವಿ, ತಾಯಿ ಎಂದು ಕರೆಯುವ ಹೆಣ್ಣಿಗೆ ಇಷ್ಟು ಅಪಮಾನ ಆಗಿದ್ದು ಇದು ಮೊದಲ ಬಾರಿ. ನಾನು ಸಿದ್ದರಾಮಯ್ಯ ,ಗೃಹಮಂತ್ರಿಗೆ ಕೈ ಮುಗಿದು ಪ್ರಾರ್ಥನೆ ಮಾಡುವೆ. ಇದು ನಿಮ್ಮ ಕೈಲಿ ಆಗಲ್ಲ. ಸಿಬಿಐಗೆ ವಹಿಸಿ. ನಾವೇ ಮಾಡ್ತೀವಿ ನಮಗೆ ಶಕ್ತಿ ಇದೆ, ನಮ್ಮ ಪೊಲೀಸರು ಅಷ್ಟು ವೀಕಾ ಅಂತಿದ್ದೀರಿ, ಪೊಲೀಸರ ಸಾಮರ್ಥ್ಯದ ಬಗ್ಗೆ ನಾನು ಪ್ರಶ್ನೆ ಮಾಡಲ್ಲ. ಆದರೆ ಸಿಬಿಐಗೆ ಕೊಡದೆ ಇದ್ದರೆ, ನೀವು ಏನೇ ರಿಪೋರ್ಟ್‌ ಕೊಟ್ಟರೂ ಸರ್ಕಾರವೇ ಇದನ್ನು ಮಾಡಿಸಿದೆ ಎಂಬ ಭಾವನೆ ಬರುತ್ತದೆ ಎಂದರು.

ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ನೋಡಿರಲಿಲ್ಲ:

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಿಂದ ಇಡೀ ಕರ್ನಾಟಕ ರಾಜ್ಯ ತಲೆತಗ್ಗಿಸುವ ವ್ಯವಸ್ಥೆ ಆಗಿದೆ, ಈ ಪ್ರಕರಣವನ್ನೂ ಸಿಎಂ, ಹೋಮ್ ಮಿನಿಸ್ಟರ್ ಹಗುರವಾಗಿ ತಗೊಂಡಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡುತ್ತಿದ್ದಾರೆ, ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ಏಕೆ ಕೊಡ್ತಿಲ್ಲ ? ಇಡೀ ಕರ್ನಾಟಕದಲ್ಲಿ ನಡೆಯುತ್ತಿರುವ ಕೊಲೆ ಸುಲಿಗೆ, ಅತ್ಯಾಚಾರಗಳನ್ನು ರಾಜ್ಯದ ಇತಿಹಾಸದಲ್ಲಿ ಎಂದೂ ಕಂಡಿರಲಿಲ್ಲ. ಡಿಕೆಶಿ, ಹೆಚ್ಡಿಕೆ ನಾಟಕ ನೋಡೋಕೆ ರಾಜ್ಯದ ಜನರಿದ್ದಾರೆ ಎಂದುಕೊಂಡಿದ್ದಾರೆ ಎಂದು ಲೇವಡಿ ಮಾಡಿದ ಅವರು, ಇವರಿಬ್ಬರೂ ಮೇಲೆಯೂ ಆಪಾದನೆಯನ್ನು ನಾನು ಮಾಡಲ್ಲ, ತಾಯಿಯ ಸ್ವರೂಪದ ಹೆಣ್ಣು ಮಕ್ಕಳ ಮೇಲೆ ಪ್ರತಿದಿನ ಅತ್ಯಾಚಾರ ನಡೆಯುತ್ತಿದೆ, ಇದಕ್ಕೆ ಮಂಗಳ ಹಾಡಬೇಕೆನ್ನುವ ಆಸೆ ನನ್ನದು ಎಂದು ಹೇಳಿದರು.

ಒಂದು ಕಣ್ಣಿಗೆ ಎಣ್ಣೆ, ಮತ್ತೊಂದು ಕಣ್ಣಿಗೆ ಬೆಣ್ಣೆ:

ಚನ್ನಗಿರಿಯಲ್ಲಿ ನಡೆದ ಲಾಕಪ್ ಡೆತ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಸರ್ಕಾರದ ವ್ಯವಸ್ಥೆ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತಿದೆ. ಮೃತ ಆದಿಲ್ ತಂದೆಯೇ ಎರಡು ಹೇಳಿಕೆ ನೀಡಿದ್ದಾರೆ, ಒಂದು ಕಡೆ ಲೋ ಬಿಪಿ ಎಂದು ಹೇಳಿದ್ದರೆ ಮತ್ತೊಂದು ಕಡೆ ಲಾಕಪ್ ಡೆತ್ ಅಂದಿದ್ದಾರೆ. ರಾಜ್ಯ ಸರ್ಕಾರ ಈವರೆಗೂ ಪರಿಹಾರ ಕೊಟ್ಟಿಲ್ಲ ಅನ್ನೋದೇ ಒಂದು ಅಚ್ಚರಿ. ಮುಸ್ಲಿಂ ಅಂದೊಡನೆ ಪರಿಹಾರ ಘೋಷಣೆ ಮಾಡೋದು ರಾಜ್ಯ ಕಾಂಗ್ರೆಸ್‌ ಸರ್ಕಾರದ ಚಾಳಿ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ನೇಹಾ ಪ್ರಕರಣದಿಂದ ಚನ್ನಗಿರಿ ಪ್ರಕರಣದವರೆಗೂ ಗಮನಿಸಿದರೆ ರಾಜ್ಯ ಸರ್ಕಾರದ ಬೇಜವಾಬ್ದಾರಿ ಹೇಳಿಕೆಗಳು, ಸಿಎಂ, ಹೋಂ ಮಿನಿಸ್ಟರ್ ಬೇರೆ ಹೇಳಿಕೆ ಕೊಡುತ್ತಾರೆ, ಏನೇ ತೀರ್ಮಾನಕ್ಕೆ ಬರಬೇಕಾದರೂ ತನಿಖೆ ನಂತರ ಬರಬೇಕು, ನೇಹಾ ಪ್ರಕರಣ ಸಿಬಿಐ ತನಿಖೆಗೆ ಕೊಡಬೇಕು ಎಂದ ಅವರು, ಹಿಂದು ಸಂಘಟನೆಗಳ ಹೋರಾಟದ ಬಳಿಕ ರಾಜ್ಯ ಸರ್ಕಾರ ಸಿಐಡಿಗೆ ನೀಡಿದೆ, ಸಿಐಡಿ ರಾಜ್ಯ ಸರ್ಕಾರದ ಕಂಟ್ರೋಲ್ ನಲ್ಲಿದೆ, ಸರ್ಕಾರ ಏನು ಹೇಳಿಕೆ ಕೊಟ್ಟಿದೆಯೋ ಅದೇ ಹೇಳಿಕೆಯನ್ನು ಸಿಐಡಿ ಕೊಡುತ್ತೆ ಎಂದು ಈಶ್ವರಪ್ಪ ತಿಳಿಸಿದರು.

ರಾಷ್ಟ್ರಪತಿ ಆಡಳಿತದ ಮುನ್ಸೂಚನೆ ನೀಡಿದ್ರಾ ಈಶ್ವರಪ್ಪ?:

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ತರೋದಕ್ಕೆ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಅವಕಾಶ ಕೊಡಬಾರದು ಎಂದು ಅಚ್ಚರಿಯ ಹೇಳಿಜೆ ನೀಡಿದ ಈಶ್ವರಪ್ಪ ಅವರು, ಜನರಿಂದ ಆಯ್ಕೆಯಾದ ಚುನಾಯಿತ ಸರ್ಕಾರ ರಾಜ್ಯದಲ್ಲಿದೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದೆ, ಸರ್ಕಾರವನ್ನು ಕೆಡವಿ ಎಂದು ನಾನು ಹೇಳಲ್ಲ, ರಾಷ್ಟ್ರಪತಿ ಆಡಳಿತ ತನ್ನಿ ಅಂತಾನೂ ಹೇಳಲ್ಲ,

ಚುನಾಯಿತ ಪ್ರತಿನಿಧಿಗಳ ಸರ್ಕಾರವೇ ಮುಂದುವರೆಯಲಿ, ಸಿದ್ದರಾಮಯ್ಯ ಸಿಎಂ ಆಗ್ತಾರೋ, ಡಿಕೆಶಿ ಸಿಎಂ ಆಗ್ತಾರೋ ಸಂಬಂಧವಿಲ್ಲ, ಆದರೆ, ಚುನಾಯಿತ ಸರ್ಕಾರ ಇರಬೇಕು, ರಾಜ್ಯ ಸರ್ಕಾರ ತಾನು ನಿರ್ದೋಷಿ ಆಗಬೇಕಂದ್ರೆ, ಪ್ರಕರಣ ಸಿಬಿಐಗೆ ಕೊಡಬೇಕೆಂದು ಆಗ್ರಹಿಸಿದರು.