ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಎಂಡಿಎ) ನಡೆದಿರುವ ಬಹುಕೋಟಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್. ವಿಶ್ವನಾಥ್ ಆಗ್ರಹಿಸಿದರು.ಮೈಸೂರಿನ ಜೆಎಲ್ ಬಿ ರಸ್ತೆಯಲ್ಲಿರುವ ಎಂಡಿಎ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗೆ ಬಂದಿರುವ ಜಾಗವನ್ನು ಸರ್ಕಾರಕ್ಕೆ ವಾಪಸ್ ಕೊಡಲಿ ಎಂದು ಒತ್ತಾಯಿಸಿದರು.ಅದೇ ಜಾಗದಲ್ಲಿ ಒಂದು ಆಸ್ಪತ್ರೆ ಕಟ್ಟಿಸಿದರೆ ನಿಮ್ಮ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ. ಇಲ್ಲದೇ ಇದ್ದರೆ ನಿಮ್ಮ ಭ್ರಷ್ಟಾಚಾರ ಚಿರಸ್ಥಾಯಿಯಾಗಿ ಉಳಿಯುತ್ತದೆ. ಯಾಕೆ ಮಾನ ಮರ್ಯಾದೆಯನ್ನು ಹಾದಿ ಬೀದಿಯಲ್ಲಿ ಕಳೆದು ಕೊಳ್ತಾ ಇದ್ದೀರಾ? ಈ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ಎಂದು ನಿಮ್ಮ ಶಿಷ್ಯರು ಸಲಹೆ ಕೊಡ್ತಾ ಇದ್ದಾರೆ. ನ್ಯಾಯಾಂಗ ತನಿಖೆಯಿಂದ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ, ಈ ಹಗರಣದ ತನಿಖೆಯನ್ನು ಸಿಬಿಐಗೆ ಕೊಡಿ. ಸಾವಿರಾರು ಕೋಟಿ ರೂಪಾಯಿ ಹಗರಣ ಇದು. ಇದನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ತಮಗೆ 62 ಕೋಟಿ ರೂಪಾಯಿ ಬರಬೇಕು ಅಂತಾರೆ. ನನಗೆ ಅರ್ಥವಾಗ್ತಿಲ್ಲ, ಇದು ಯಾವ ಥರದ ಲೆಕ್ಕಚಾರ ಅಂತಾ? ಹಣಕಾಸು ಸಚಿವರಾದವರು ಹೀಗೆ ಮಾತಾಡಿದ್ರೆ ಹೇಗೆ? ಯಾಕೆ ಸಿದ್ದರಾಮಯ್ಯ ಮಣ್ಣಿನ ಹಿಂದೆ ಹೋಗ್ತಿದ್ದಾರೆ? ಸಮಾಜವಾದಿ ಮನಸ್ಸಿನ ಸಿದ್ದರಾಮಯ್ಯ ಯಾಕೆ ಈ ರೀತಿ ಮಣ್ಣಿನ ಹಿಂದೆ ಹೋಗುವ ರೀತಿ ಬದಲಾವಣೆ ಆದರು? ನೀವು ನಿಮ್ಮ ಅವಧಿಯಲ್ಲಿ ಒಂದು ಸೈಟ್ ಆದರೂ ಜನಸಾಮಾನ್ಯರಿಗೆ ಕೊಡಿಸಿದ್ದೀರಾ? ಸಿದ್ದರಾಮಯ್ಯ ಪತ್ನಿ ಖರೀದಿಸಿರುವ ದೇವನೂರು ಬಡಾವಣೆ ಜಾಗ ದಲಿತರಿಗೆ ಸೇರಿದ್ದು. ಜವರ ಎಂಬ ವ್ಯಕ್ತಿಗೆ ಸೇರಿದ ಜಮೀನು ಇದು. ಡಿನೋಟಿನೋಫೈ ಆದ ಜಾಗವನ್ನು ಸಿಎಂ ಪತ್ನಿ ಅಣ್ಣ ಖರೀದಿ ಮಾಡಿದ್ದರು. ದಾನ ಪತ್ರವಾಗಿ 2010ರಲ್ಲಿ ಸಿಎಂ ಪತ್ನಿ ಹೆಸರಿಗೆ ಬಂದಿದೆ ಎಂದು ಅವರು ಆರೋಪಿಸಿದರು.2013ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಒಂದೇ ಒಂದು ನಿವೇಶನವನ್ನು ಕೊಡಲಿಲ್ಲ. ದೇವರಾಜ ಅರಸು, ಇಂದಿರಾ ಗಾಂಧಿ ಸಾವಿರಾರು ಮನೆ ಕೊಟ್ಟರು. ಅಕ್ಕಿ ಕೊಟ್ಟೆ ಅಕ್ಕಿ ಕೊಟ್ಟೆ ಎಂದು ಪ್ರಚಾರ ಮಾಡುವುದು ಸಿದ್ದರಾಮಯ್ಯ ಸಾಧನೆ ಎಂದು ಅವರು ವ್ಯಂಗ್ಯವಾಡಿದರು.ಎಂಡಿಎ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಮೂರ್ಮೂರು ಬಾರಿ ಯಾಕೇ ವರ್ಗಾವಣೆ ಮಾಡಿದರು? ನಮ್ಮ ಕೆಲಸ ಇನ್ನೂ ಮುಗಿದಿಲ್ಲ ಎಂದು ಉಳಿಸಿಕೊಂಡಿದ್ದರೇ? ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು 15 ಪತ್ರ ಬರೆದರೂ ಸರ್ಕಾರ ಯಾಕೇ ಮಧ್ಯ ಪ್ರವೇಶ ಮಾಡಲಿಲ್ಲ ಎಂದು ಅವರು ಪ್ರಶ್ನಿಸಿದರು.ಎಂಡಿಎ ನಿವೃತ್ತ ಯೋಜನಾ ನಿರ್ದೇಶಕ ನಟರಾಜು, ಪರಿಸರ ಹೋರಾಟಗಾರ್ತಿ ಭಾನು ಮೋಹನ್, ಆರ್ ಟಿಐ ಕಾರ್ಯಗರ್ತರ ಗಂಗರಾಜು ಮೊದಲಾದವರು ಇದ್ದರು. ------ ಬಾಕ್ಸ್-- ಬೈರತಿ ಸುರೇಶ್ ರಿಯಲ್ ಎಸ್ಟೇಟ್ ಗಿರಾಕಿನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು, ಅವನೊಬ್ಬ ರಿಯಲ್ ಎಸ್ಟೇಟ್ ಗಿರಾಕಿ ಎಂದು ಆರೋಪಿಸಿದರು. ಎಂಡಿಎ ಹಗರಣ ಹೊರ ಬರುತ್ತಿದ್ದಂತೆಯೇ ಹೆಲಿಕಾಪ್ಟರ್ ನಲ್ಲಿ ಬಂದು ಪೊಲೀಸರ ಭದ್ರತೆಯಲ್ಲಿ ಸಭೆ ಮಾಡಿದ್ದಾನೆ. ಹೇ ನೀನು ಯಾವೋನೋಲೇ? ನೀನು ದಡ್ಡನೋ ಬುದ್ಧಿವಂತನಾ? ನಾನು 7 ಸೈಟ್ ಕೇಳಿದ್ದೇನೆ ಅಂತೀಯಲ್ಲ. ಇವನಯ ಯಾವೋನ್ ರೀ ಬೈರತಿ. ನಾನು ಪ್ರಾಮಾಣಿಕ ಅಂತಾ ವಿಧಾನಸೌಧದ ಒಳಗೇ ಹೇಳಿದ್ದೀನಿ. ಈತ ಚೇಂಜ್ ಆಫ್ ಲ್ಯಾಂಡ್ ಗೆ ಐದು ಲಕ್ಷ ಫಿಕ್ಸ್ ಮಾಡಿದ್ದಾನೆ ಎಂದು ವಾಗ್ದಾಳಿ ನಡೆಸಿದರು.