ಸಾರಾಂಶ
ಮಂಡ್ಯ : ಮುಖ್ಯಮಂತ್ರಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದಕ್ಕೆ ಕಾಂಗ್ರೆಸ್ಸಿಗರಿಂದಲೇ ಪಿತೂರಿ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಂಡ್ಯಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರು ಮುಡಾ ಹಗರಣ ಹಳೆಯ ಸುದ್ದಿ. ಇಲ್ಲಿಯವರೆಗೆ ಹೊರಬರದ ಸುದ್ದಿ ಈಗ ಯಾಕೆ ಬಂದಿದೆ? ಮುಡಾ ಹಗರಣವನ್ನು ಮುಂದಿಟ್ಟುಕೊಂಡು ದೊಡ್ಡ ಪ್ರಚಾರ ಪಡೆಯುವುದರ ಹಿಂದೆ ಕಾಂಗ್ರೆಸ್ಸಿಗರ ಸಂಚು ಅಡಗಿದೆ ಎಂದು ಸ್ಪೋಟಕ ಮಾಹಿತಿ ಹೊರಹಾಕಿದರು.
ಇದರ ಹಿಂದೆ ಸಿಎಂ ಸ್ಥಾನಕ್ಕಾಗಿ ಆಸೆಪಟ್ಟು, ಟವೆಲ್ ಹಾಸಿ ಕುಳಿತಿರುವವರ ಕೈವಾಡವಿದೆ. ಈಗಿನ ಮುಖ್ಯಮಂತ್ರಿ ತೆಗೆದು ನಾವಾಗಬೇಕೆಂದು ಕಾಯುತ್ತಿದ್ದಾರೆ. ಸಿದ್ದರಾಮಯ್ಯನವರ ಇಮೇಜ್ ಹಾಳು ಮಾಡಲು ಕಾರ್ಯತಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು.
ಮುಡಾದಲ್ಲಿ ಸಿಎಂ ಮಾಡಿರುವ ವ್ಯವಹಾರಗಳ ದಾಖಲಾತಿ ತೆಗೆದು, ವಕೀಲರನ್ನು ಇಟ್ಟು ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ಸಿಗರಿಂದಲೇ ಪಿತೂರಿ ನಡೆದಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆದಿರುವುದಾಗಿ ಡಿ.ಕೆ.ಶಿವಕುಮಾರ್ ಹೆಸರೇಳದೇ ಟಾಂಗ್ ನೀಡಿದರು.