ಸಾರಾಂಶ
ಚಾಮರಾಜನಗರ ಸಮೀಪದ ಮರಿಯಾಲದಲ್ಲಿ ಮಾಜಿ ಕೇಂದ್ರ ಸಚಿವ ದಿ.ಎಂ.ರಾಜಶೇಖರಮೂರ್ತಿ ಅವರ ೧೪ನೇ ವರ್ಷದ ಪುಣ್ಯಸ್ಮರಣೆ ನಡೆಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜ್ಯ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರಾದ ದಿ.ಎಂ.ರಾಜಶೇಖರಮೂರ್ತಿ ಅವರು ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣದ ಕನಸು ಹೊಂದಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಿಗೊಳಿಸುವ ಆಶಯವನ್ನು ಹೊಂದಿದ್ದರು ಎಂದು ರಾಜಶೇಖರ ಮೂರ್ತಿ ಅವರ ಪುತ್ರಿ ಶೀಲಾ ಹರಹಳಕಟ್ಟಿ ತಿಳಿಸಿದರು. ಕೇಂದ್ರ ಸಚಿವ ದಿ.ಎಂ.ರಾಜಶೇಖರಮೂರ್ತಿ ಅವರ ೧೪ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ನಗರದ ಸಮೀಪದ ಮರಿಯಾಲದ ಶ್ರೀ ಮುರುಘರಾಜೇಂದ್ರಸ್ವಾಮಿ ವಿದ್ಯಾಸಂಸ್ಥೆ ಆವರಣದಲ್ಲಿರುವ ಅವರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ನಮ್ಮ ತಂದೆಯವರಾದ ರಾಜಶೇಖರಮೂರ್ತಿ ಅವರು ಕೇಂದ್ರ ಮತ್ತು ರಾಜ್ಯದಲ್ಲಿ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿದ್ದರು. ಬಹಳಷ್ಟು ಯುವ ರಾಜಕಾರಣಿಗಳನ್ನು ಬೆಳೆಸಿದರು. ಉತ್ತಮ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕುವ ಕನಸು ಕಂಡು ಅದನ್ನು ಸಾಕಾರಗೊಳಿಸುವ ಯೋಜನೆಯನ್ನು ರೂಪಿಸಿ ಉತ್ತಮ ನಾಗರಿಕ ಸಮಾಜ ನಿರ್ಮಾಣ ಮಾಡಿ, ಪ್ರಜಾಪ್ರಭುತ್ವವನ್ನು ಉಳಿಸುವ ಸಂಕಲ್ಪಮಾಡಿದ್ದರು ಎಂದರು. ಇಂತಹ ತಮ್ಮ ಭವ್ಯ ಕನಸಿನ ಸಿದ್ಧಿಗೆ ಅವರು ಆಯ್ಕೆ ಮಾಡಿಕೊಂಡಿದ್ದು, ಜಿಲ್ಲೆಯ ಮರಿಯಾಲ ಗ್ರಾಮವನ್ನು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ಬೌದ್ದಿಕ, ಆಧ್ಯಾತ್ಮಿಕ ಶಿಕ್ಷಣ ನೀಡಿ ಅವರು ಸಮಾಜಕ್ಕೆ ಆಸ್ತಿ ಮಾಡುವ ಜೊತೆಗೆ ಸಂಸ್ಕಾರಯುತ ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಒತ್ತು ನೀಡಿದ್ದರು. ಬಡ ಮಕ್ಕಳಿಗೆ ಹಾಗೂ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಅಖಿಲ ಭಾರತ ಮಾದರಿ ಶಿಕ್ಷಣ ಕೇಂದ್ರವನ್ನು ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ಶ್ರಮಿಸಿದ್ದರು ಎಂದರು.ಅವರ ಪರಿಶ್ರಮ ಹಾಗೂ ಹಿರಿಯಶ್ರೀಗಳ ಆರ್ಶೀವಾದದಿಂದ ಮರಿಯಾದಲ್ಲಿ ಬೃಹತ್ ಶ್ರೀ ಮುರುಘರಾಜೇಂದ್ರಸ್ವಾಮಿ ಶೈಕ್ಷಣಿಕ ಸಂಸ್ಥೆ ಆರಂಭಗೊಂಡಿದೆ. ಇಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಹಾಗೂ ಶಿಸ್ತು ರೂಡಿಸುವ ಮೂಲಕ ರಾಜಶೇಖರಮೂರ್ತಿ ಅವರು ಕನಸು ಅವರ ಪುಣ್ಯಭೂಮಿಯಲ್ಲಿಯೇ ನೆನಸು ಮಾಡುವ ಪ್ರಯತ್ನ ನಿರಂತರವಾಗಿ ಸಾಗಿದೆ ಎಂದರು.
ಶ್ರೀ ಮಠದ ಅಧ್ಯಕ್ಷರಾದ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ರಾಜಶೇಖರಮೂರ್ತಿ ಅವರು ತಮ್ಮ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದಂತೆ ರಾಜಕಾರಣ ಮಾಡಿದ ಶುದ್ಧ ಹಸ್ತರು. ಇಂದು ಅವರ ಐಕ್ಯವಾದ ಈ ಪುಣ್ಯಭೂಮಿಯಲ್ಲಿ ಅವರ ಆಶಯಕ್ಕೆ ತಕ್ಕಂತೆ ಸಾವಿರಾರು ಮಕ್ಕಳು ವಿದ್ಯಾಭ್ಯಾಸ ಪಡೆದುಕೊಳ್ಳುತ್ತಿದ್ದಾರೆ. ರಾಜಶೇಖರಮೂರ್ತಿ ಅವರು ಭೌತಿಕವಾಗಿ ಅಗಲಿ ೧೪ ವರ್ಷಗಳು ಕಳೆದಿದ್ದರೂ ಅವರ ಪರಿಕಲ್ಪನೆ ಮತ್ತು ಶೈಕ್ಷಣಿಕ ಧ್ಯೇಯೊದ್ದೇಶಗಳು ಈ ನೆಲದಲ್ಲಿ ಸಾಕಾರಗೊಳಿಸುವ ಕಡೆ ದಿಟ್ಟ ಹೆಜ್ಜೆಯನ್ನು ಹಾಕುತ್ತಿದ್ದೇವೆ ಎಂದು ಪೂಜ್ಯರು ಮತ್ತು ರಾಜಶೇಖರ್ ಮೂರ್ತಿ ಅವರ ಸೇವೆಯನ್ನು ಗುಣಗಾನ ಮಾಡಿದರು.ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯಲ್ಲಿನ ವಲಯ, ವಿಭಾಗವಾರು ಮತ್ತು ಹಾಗೂ ರಾಜ್ಯಮಟ್ಟದ ಕ್ರೀಡಾಸ್ಥರ್ಧೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು. ದಿ.ರಾಜಶೇಖರಮೂರ್ತಿರವರ ಮಕ್ಕಳಾದ ಶೀಲಾ ಹರಹಳಕಟ್ಟಿ, ಸುಮ, ಶಶಿ, ಶೋಭಾ ಹಾಗೂ ತಡಿಮಾಲಂಗಿ ಮತ್ತು ಮರಿಯಾಲ ಗ್ರಾಮಸ್ಥರು, ವಿದ್ಯಾಸಂಸ್ಥೆಯ ಅಧ್ಯಕ್ಷರು, ಸದಸ್ಯರು, ನೌಕರರು, ವಿದ್ಯಾರ್ಥಿಗಳು, ದಿ ಎಂ. ರಾಜಶೇಖರಮೂರ್ತಿ ಅಭಿಮಾನಿಗಳು ಉಪಸ್ಥಿತರಿದ್ದರು.