ಮುರಿನಕಟ್ಟೆ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಸ್ಥಳೀಯ ಶಾಸಕರ ಒತ್ತಡಕ್ಕೆ ಮಣಿದು ಹಿಂದೂ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಚಾರ್ಚಶೀಟ್ ಸಲ್ಲಿಸಿದ್ದು, ಪೊಲೀಸರು ಇದೇ ರೀತಿ ದ್ವಂದ್ವ ನೀತಿ ಅನುಸರಿಸಿದರೆ ಪೊಲೀಸ್ ಇಲಾಖೆ ವಿರುದ್ದ ಪ್ರತಿಭಟನೆ ನಡೆಸಬೇಕಾದೀತು.
ಹಿಂದೂಪರ ಮುಖಂಡರ ಮೇಲೆ ಟಾರ್ಗೆಟ್ ಮಾಡಿದರೆ ಬಿಜೆಪಿ ಮುಖಂಡರಿಂದ ಪ್ರತಿಭಟನೆ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ಭಟ್ಕಳ
ಮುರಿನಕಟ್ಟೆ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಸ್ಥಳೀಯ ಶಾಸಕರ ಒತ್ತಡಕ್ಕೆ ಮಣಿದು ಹಿಂದೂ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಚಾರ್ಚಶೀಟ್ ಸಲ್ಲಿಸಿದ್ದು, ಪೊಲೀಸರು ಇದೇ ರೀತಿ ದ್ವಂದ್ವ ನೀತಿ ಅನುಸರಿಸಿದರೆ ಪೊಲೀಸ್ ಇಲಾಖೆ ವಿರುದ್ದ ಪ್ರತಿಭಟನೆ ನಡೆಸಬೇಕಾದೀತು ಎಂದು ಮಾಜಿ ಸಚಿವ ಶಿವಾನಂದ ನಾಯ್ಕ ಎಚ್ಚರಿಕೆ ನೀಡಿದರು.ಪಟ್ಟಣದ ಆಸರಕೇರಿ ವೆಂಕಟ್ರಮಣ ದೇವಸ್ಥಾನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮುರಿನಕಟ್ಟೆ ಪ್ರಕರಣದಲ್ಲಿ ಪೊಲೀಸರು ಒಂದು ಕೋಮಿನ ಪರ ಕೆಲಸ ಮಾಡುತ್ತಿದ್ದಾರೆ. ಕಟ್ಟೆ ಧ್ವಂಸ ಸಂದರ್ಭದಲ್ಲಿ ಹಾಜರಿದ್ದ ಮುಸ್ಲೀಂ ಮುಖಂಡರ ಮೇಲೆ ಪ್ರಕರಣ ದಾಖಲಿಸದೇ ದ್ವಂದ್ಬನೀತಿ ಅನುಸರಿಸಿದ್ದಾರೆ. ಎಪ್ ಐಆರ್ ನಲ್ಲಿ ಹೆಸರಿಲ್ಲದಿದ್ದರೂ ಮುಖಂಡ ಶ್ರೀಕಾಂತ ನಾಯ್ಕ ಹೆಸರನ್ನು ಚಾರ್ಚಶೀಟ್‌ನಲ್ಲಿ ಸೇರಿಸಿದ್ದಾರೆ. ಹಿಂದೂಪರ ಮುಖಂಡರನ್ನು ಟಾರ್ಗೆಟ್ ಮಾಡುತ್ತಿರುವುದು ಸರಿಯಲ್ಲ.
ಸ್ಥಳೀಯ ಶಾಸಕರ ಒತ್ತಡದಿಂದ ಪೊಲೀಸರು ಹಿಂದೂಪರ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸುತ್ತಿದ್ದಾರೆ. ಶಾಸಕರು ಜನವಿರೋಧಿ ಕೆಲಸ ಬಿಟ್ಟು ಜನಪರ ಕೆಲಸ ಮಾಡಬೇಕು. ಯಾರನ್ನೋ ಮೆಚ್ಚಿಸಲು ಹಿಂದೂಪರ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸುವಂತೆ ಮಾಡುವುದು ಸರಿಯಲ್ಲ ಎಂದ ಅವರು ಶಾಸಕರು ಇನ್ನಾದರೂ ತಮ್ಮ ವರ್ತನೆ ತಿದ್ದಿಕೊಳ್ಳಬೇಕು ಎಂದರು.ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ಹಿಂದೂಧರ್ಮಕ್ಕೆ ತೊಂದರೆ ಆದಾಗ ಹೋರಾಟ ಮಾಡುವುದು ಸಹಜ. ಆದರೆ ಪೊಲೀಸರು ತಂಝೀಂ ಮತ್ತು ಸ್ಥಳೀಯ ಶಾಸಕರ ಅಣತಿಯಂತೆ ಹಿಂದೂಪರ ಹೋರಾಟಗಾರರ ದಮನ ಮಾಡಲು ಹೊರಟಿದ್ದಾರೆ. ಮುರಿನಕಟ್ಟೆ ಬಳಿ ಕಟ್ಟೆ ಧ್ವಂಸ ಸಂದರ್ಭದಲ್ಲಿ ಮುಸ್ಲೀಂ ಮುಖಂಡರಿದ್ದರೂ ಅವರ ಮೇಲೆ ಕೇಸು ದಾಖಲಿಸದೇ ಬರೀ ಹಿಂದೂ ಮುಖಂಡರ ಮೇಲೆ ಕೇಸು ದಾಖಲಿಸಿ ಪೊಲೀಸರು ದ್ವಂದ್ವ ನೀತಿ ಅನುಸರಿಸಿದ್ದಾರೆ. ನಾವು ಸಮಾಜ, ಧರ್ಮ, ರಾಷ್ಟ್ರಕ್ಕಾಗಿ ಮಾಡಿದ ಹೋರಾಟಕ್ಕೆ ಕೇಸು ಹಾಕಿದ್ದಾರೆ. ಈ ಕೇಸಿಗೆಲ್ಲಾ ನಾವು ಹೆದರುವುದಿಲ್ಲ. ನಮ್ಮನ್ನು ಹೋರಾಟದಿಂದ ಹಿಂದೆ ಸರಿಸುವುದು ಸಾಧ್ಯವಿಲ್ಲ ಎಂದ ಅವರು ಸ್ಥಳೀಯ ಶಾಸಕರು ಅಂದು ಸಚಿವರಿದ್ದರೂ ಸಹ ಕಟ್ಟೆ ದ್ವಂಸ ಮಾಡಿದ್ದಕ್ಕೆ ಒಂದು ಖಂಡನೆ ಕೂಡ ವ್ಯಕ್ತಪಡಿಸಿಲ್ಲ. ಇವರು ಹಿಂದೂಗಳ ಮತ ಪಡೆದಿಲ್ಲವೇ . ಇನ್ನಾದರೂ ಒಲೈಕೆ ಬಿಡಿ ಎಂದು ಹೇಳಿದರು.
ಮುಖಂಡ ಈಶ್ವರ ನಾಯ್ಕ ಮಾತನಾಡಿ, ಮುರಿನಕಟ್ಟೆ ಪ್ರಕರಣದಲ್ಲಿ ಪೊಲೀಸರು ನ್ಯಾಯ ಕೇಳಿದವರ ಮೇಲೆ ಕೇಸು ದಾಖಲಿಸಿದ್ದಾರೆ. ಒತ್ತಡಕ್ಕೆ ಮಣಿದು ತಾರತಮ್ಯ ಮಾಡುವುದು ಸರಿಯಲ್ಲ ಎಂದರು. ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಡಿಗ ಅವರು ಸರಕಾರ ಮತ್ತು ಪೊಲೀಸ್ ಇಲಾಖೆ ಮುರಿನಕಟ್ಟೆ ವಿಚಾರದಲ್ಲಿ ಹಿಂದೂಗಳ ಭಾವನೆಗೆ ಸ್ಪಂದಿಸಿಲ್ಲ ಎಂದು ದೂರಿದರು. ಈ ಸಂದರ್ಭದಲ್ಲಿ ಶ್ರೀಕಾಂತ ನಾಯ್ಕ, ರವಿ ನಾಯ್ಕ ಜಾಲಿ, ವಿಷ್ಣುಮೂರ್ತಿ ಹೆಗಡೆ, ಸುರೇಶ ನಾಯ್ಕ,ಚಂದ್ರು ಗೊಂಡ ಮುಂತಾದವರಿದ್ದರು.