ಸಾರಾಂಶ
ತಾಲೂಕಿನ ಮುತ್ತೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಈ ಹಿಂದೆ ಒಬ್ಬ ವಿದ್ಯಾರ್ಥಿ ಮಾತ್ರ ವ್ಯಾಸಾಂಗ ಮಾಡುತ್ತಿದ್ದು, ಆ ವಿದ್ಯಾರ್ಥಿಗೆ ಬೋಧಿಸಲು ಇಬ್ಬರು ಶಿಕ್ಷಕರನ್ನು ನೇಮಕ ಮಾಡಲಾಗಿತ್ತು. ಇದರ ಬಗ್ಗೆ ಕನ್ನಡಪ್ರಭ ವರದಿ ಮಾಡಿತ್ತು.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಮಕ್ಕಳಿಲ್ಲದೆ ಬೀಗ ಜಡಿಯಲಾಗಿರುವ ಮುತ್ತೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ತಾಲೂಕಿನ ಮುತ್ತೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಈ ಹಿಂದೆ ಒಬ್ಬ ವಿದ್ಯಾರ್ಥಿ ಮಾತ್ರ ವ್ಯಾಸಾಂಗ ಮಾಡುತ್ತಿದ್ದು, ಆ ವಿದ್ಯಾರ್ಥಿಗೆ ಬೋಧಿಸಲು ಇಬ್ಬರು ಶಿಕ್ಷಕರನ್ನು ನೇಮಕ ಮಾಡಲಾಗಿತ್ತು. ಇದರ ಬಗ್ಗೆ ಕನ್ನಡಪ್ರಭ ಪತ್ರಿಕೆಯಲ್ಲಿ ಕಳೆದ ವಾರ ವರದಿ ಪ್ರಕಟವಾಗಿತ್ತು.ಶಾಲೆಗೆ ಮಾಜಿ ಸಚಿವರ ಭೇಟಿ
ಇದರ ಬೆನ್ನಲ್ಲೇ ಶಿಕ್ಷರಿಬ್ಬರನ್ನೂ ಬೇರೆ ಶಾಲೆಗಳಿಗೆ ನಿಯೋಜನೆ ಮಾಡಿ ವಿಧ್ಯಾರ್ಥಿನಿಯನ್ನು ಬೂದಿಕೋಟೆಯ ಕೆಪಿಎಸ್ ಶಾಲೆಗೆ ದಾಖಲು ಮಾಡಲಾಗಿತ್ತು. ಇತ್ತ ಶಾಲೆಯಲ್ಲಿ ವಿದ್ಯಾರ್ಥಿಗಳು ಇಲ್ಲದ ಕಾರಣ ಶಾಲೆಗೆ ಬೀಗವನ್ನು ಜಡಿಯಲಾಗಿತ್ತು. ಇದರ ಬಗ್ಗೆ ಮಾಹಿತಿ ಪಡೆದ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಂಗಳವಾರ ಶಾಲೆಗೆ ಭೇಟಿ ನೀಡಿದರು.ಮಾಜಿ ಸಚಿವ ಸುರೇಶ್ ಕುಮಾರ್ ಮಾತನಾಡಿ, ಮುತ್ತೇನಹಳ್ಳಿ ಗ್ರಾಮದ ಶಾಲಾ ಕಟ್ಟಡಗಳನ್ನು ಶಿಕ್ಷಣಕ್ಕೆ ಮಾತ್ರ ಮೀಸಲಿಡಬೇಕು ಬೇರೆ ಯಾವುದೇ ಇಲಾಖೆಗೆ ಅಥವಾ ಇತರೆ ಕಾರ್ಯಚಟುವಟಿಕೆಗೆ ಹಸ್ತಾಂತರ ಮಾಡದೇ ಕಾಪಾಡಬೇಕು. ಮುಂದಿನ ದಿನಗಳು ಅಥವಾ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವ ಮೂಲಕ ಶಾಲೆಯನ್ನು ಗ್ರಾಮದಲ್ಲಿಯೇ ಆರಂಭಿಸಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಶಾಲೆಗಳನ್ನು ಉಳಿಸಬೇಕು. ಇದರಲ್ಲಿ ಅಧಿಕಾರಿಗಳ ಪಾತ್ರ ಹೆಚ್ಚಿದೆ. ತಾಲ್ಲೂಕಿನಲ್ಲಿ ೫ ಮಕ್ಕಳಿಗಿಂತ ಕಡಿಮೆ ಮಕ್ಕಳಿರುವ ಶಾಲೆಗಳ ಮಾಹಿತಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಿದರು.