ಸಾರಾಂಶ
ಕನ್ನಡಪ್ರಭ ವಾರ್ತೆ ಉಳ್ಳಾಲ
ವರ್ಷದ ಪ್ರತಿದಿನವೂ ಒಂದೊಂದು ದಿನ ಆಚರಿಸಲಾಗುತ್ತದೆ. ಇತರ ವೃತ್ತಿಯಲ್ಲಿ ಯಾವುದೇ ಸಮಸ್ಯೆ ಬಂದರೂ ಪ್ರಶ್ನಿಸುವವರಿಲ್ಲ, ಆದರೆ ವೈದ್ಯ ವೃತ್ತಿಯಲ್ಲಿ ಸಮಸ್ಯೆ ಬಂದರೆ ಪ್ರಶ್ನಿಸುವವರು ಇರುವುದರಿಂದ ವೈದ್ಯರ ದಿನ ವಿಭಿನ್ನ. ರೋಗಿಗಳಿಗೆ ವೈದ್ಯರೇ ದೇವರಾಗಿ ಕಾಣುವುದರಿಂದ ವೈದ್ಯರಿಗೆ ಹಣಕ್ಕಿಂತ ಮಾನವೀಯತೆ ಅಗತ್ಯ ಎಂದು ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಪ್ರೊ.ಎಂ. ಶಾಂತರಾಮ್ ಶೆಟ್ಟಿ ಹೇಳಿದರು.ನಿಟ್ಟೆ ವಿಶ್ವವಿದ್ಯಾಲಯ ಅಧೀನದ ದೇರಳಕಟ್ಟೆ ಕೆ.ಎಸ್. ಹೆಗ್ಡೆ ವೈದ್ಯಕೀಯ ಆಸ್ಪತ್ರೆ ವತಿಯಿಂದ ಮಂಗಳವಾರ ಎಬಿಎಸ್ ಎಂಐಡಿಎಸ್‌ನ ಆವಿಷ್ಕಾರ್ ಸಭಾಂಗಣದಲ್ಲಿ ಡಾ.ಬಿ.ಸಿ. ರಾಯ್ ಜನ್ಮದಿನ ಪ್ರಯುಕ್ತ ನಡೆದ ವೈದ್ಯರ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಉತ್ತರ ಕನ್ನಡ ಸಿದ್ದಾಪುರದ ಮಾಜಿ ವೈದ್ಯಕೀಯ ಆಡಳಿತಾಧಿಕಾರಿ ಡಾ. ಕೌಲಲಿ ಶ್ರೀಧರ್ ವೈದ್ಯ ಮಾತನಾಡಿ, ರಾತ್ರಿ ವೇಳೆ ಕಾಯಿಲೆಪೀಡಿತರು ಚಿಕಿತ್ಸೆಗಾಗಿ ಮನೆ ಬಾಗಿಲಿಗೆ ಬಂದಾಗ ಅವರನ್ನು ಬೈದು, ತಾತ್ಸಾರ ಭಾವನೆ ತೋರಿ ಚಿಕಿತ್ಸೆ ನೀಡಿದರೆ ವೈದ್ಯರ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡುತ್ತದೆ ಎಂದು ತಿಳಿಸಿದರು.ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಂಶೋಧನಾ ಅಧ್ಯಯನ ಕೇಂದ್ರ ಮತ್ತು ಸ್ವಸಮೀಕ್ಷೆ ವಿಭಾಗಗಳ ಉಪಾಧ್ಯಕ್ಷ ಪ್ರೊ. ಸತೀಶ್ ಕುಮಾರ್ ಭಂಡಾರಿ ಮಾತನಾಡಿ, ಗ್ರಾಮೀಣ ಪ್ರದೇಶಗಳು ದೇಶದ ಬೆನ್ನೆಲುಬು. ಯುವವೈದ್ಯರು ವೃತ್ತಿ ಜೀವನ ಗ್ರಾಮೀಣ ಭಾಗದಲ್ಲಿ ಆರಂಭಿಸುವುದರಿಂದ ಉತ್ತಮ ಅನುಭವದ ಜೊತೆ ಉತ್ತಮ ಹೆಸರು ಗಳಿಸುವ ಅವಕಾಶ ಇದೆ ಎಂದರು. ಈ ಸಂದರ್ಭ ಹಿರಿಯ ವೈದ್ಯರಾದ ಕುಟುಂಬ ವೈದ್ಯರಾದ ಕೇರಳ ನೀಲೇಶ್ವರದ ಡಾ. ಕೆಸಿಕೆ ವರ್ಮ ರಾಜ, ಚಿತ್ರದುರ್ಗ ಹೊಳ್ಳಕೆರೆಯ ಡಾ.ಉಮಾಪತಿ, ಮಂಗಳೂರು ಇಎಸ್ಐ ಆಸ್ಪತ್ರೆಯ ಮಾಜಿ ವೈದ್ಯಕೀಯ ಅಧೀಕ್ಷಕ ಡಾ. ಅಶೋಕ್ ಕುಮಾರ್ ನಾಯಕ್ ಕೆ. ಹಾಗೂ ಉತ್ತರ ಕನ್ನಡ ಸಿದ್ದಾಪುರದ ಮಾಜಿ ವೈದ್ಯಕೀಯ ಆಡಳಿತಾಧಿಕಾರಿ ಡಾ. ಕೌಲಲಿ ಶ್ರೀಧರ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಉಪಕುಲಪತಿ ಪ್ರೊ.ಎಂ.ಎಸ್. ಮೂಡಿತ್ತಾಯ, ಕುಲಸಚಿವ ಡಾ.ಹರ್ಷ ಹಾಲಹಳ್ಳಿ, ವೈದ್ಯಕೀಯ ಅಧೀಕ್ಷಕಿ ಡಾ. ಸುಮಲತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ವೈಸ್ ಡೀನ್ ಡಾ.ಜಯಪ್ರಕಾಶ್ ಶೆಟ್ಟಿ ಕೆ. ಸ್ವಾಗತಿಸಿದರು. ರಾ.ರಾಜೀವ್ ಟಿ.ಪಿ., ರಾ.ಸುಧೀಂದ್ರ ರಾವ್, ಡಾ.ಕ್ಯಾರೆನ್ ಡಿಸೋಜ ಮತ್ತು ಡಾ.ಗಿರಿಧರ್ ಬಿ.ಎಚ್. ಸನ್ಮಾನಿತರ ಪತ್ರ ವಾಚಿಸಿದರು. ವೈಸ್ ಡೀನ್ ಪ್ರೊ.ಅಮೃತ ಮಿರಾಜ್ಕರ್ ವಂದಿಸಿದರು. ಡಾ. ಅದಿತಿ ಕಾರ್ಯಕ್ರಮ ನಿರೂಪಿಸಿದರು.