ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯಲ್ಲಿ ಗೋವುಗಳ ಅಕ್ರಮ ಸಾಗಾಟ ಮತ್ತು ಗೋಹತ್ಯೆ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಮಾಜಿ ಶಾಸಕ ಕೆ.ಜಿ.ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಂಜಾ ಪ್ರಕರಣ ಪತ್ತೆ ಹಚ್ಚುವಲ್ಲಿನ ಪೊಲೀಸರ ಆಸಕ್ತಿ ಗೋಕಳ್ಳರನ್ನು ಹಿಡಿಯುವ ಬಗ್ಗೆಯೂ ಬೇಕಾಗಿದೆ ಎಂದು ಬೋಪಯ್ಯ ಒತ್ತಾಯಿಸಿದರು.
ಜಿಲ್ಲೆಯಲ್ಲಿ ಗೋವುಗಳ ಕಳ್ಳತನ ನಿರಂತರವಾಗಿದ್ದು, ಪೊಲೀಸ್ ಇಲಾಖೆ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಜನರು ಸಹನೆ ಕಳೆದುಕೊಳ್ಳುವ ಮೊದಲು ಗೋವುಗಳ ಕಳ್ಳರನ್ನು ನಿಯಂತ್ರಿಸಬೇಕು. ತಪ್ಪಿದಲ್ಲಿ ತೀವ್ರ ರೀತಿಯ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಬಿಜೆಪಿ ಸರ್ಕಾರವಿದ್ದಾಗ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಕಾವೇರಿ ನದಿ ಉಗಮವಾಗುವ ಕೊಡಗಿನಲ್ಲಿ ಬ್ರಿಟಿಷರ ಕಾಲದಿಂದಲೂ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗೋವುಗಳ ಕಳ್ಳರು ಮನೆಗಳ ಕೊಟ್ಟಿಗೆಗೇ ನುಗ್ಗಿ ಕಳ್ಳತನ ಮಾಡುತ್ತಿದ್ದಾರೆ. ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ಅವರ ಮನೆಯ ಕೊಟ್ಟಿಗೆಗೆ ನಸುಕಿನ ಮೂರೂವರೆ ಗಂಟೆ ವೇಳೆಯಲ್ಲಿ ಗೋವುಗಳ ಕಳ್ಳರು ನುಗ್ಗಿ ಒಂದು ಹಸುವನ್ನು ಕದ್ದೊಯ್ದಿದ್ದಾರೆ. ಘಟನೆ ನಡೆದ ತಕ್ಷಣ ಮತ್ತು ಬೆಳಗ್ಗೆ ಮತ್ತೊಮ್ಮೆ ಪೊಲೀಸರಿಗೆ ದೂರವಾಣಿ ಕರೆ ಮಾಡಿ ತಿಳಿಸಿದರೂ ಸ್ಥಳಕ್ಕೆ ಭೇಟಿ ನೀಡದೆ ನಿರ್ಲಕ್ಷಿಸಿದ್ದಾರೆ. ಸಿಸಿ ಕ್ಯಾಮರಾ ಸೆರೆ ಹಿಡಿದಿರುವ ದೃಶ್ಯಾವಳಿಗಳ ಆಧಾರದಲ್ಲಿ ಗೋವು ಕಳ್ಳರನ್ನು ಬಂಧಿಸುವ ಪ್ರಯತ್ನವನ್ನು ಕೂಡ ಮಾಡಿಲ್ಲ ಎಂದು ಟೀಕಿಸಿದರು.
ಇಸ್ಪೀಟ್ ದಂದೆ ಮಿತಿ ಮೀರಿದೆ, ಅಕ್ರಮ ಮರಳು, ಗೋವುಗಳ ಸಾಗಾಟ ಜಿಲ್ಲೆಯಾದ್ಯಂತ ಹೆಚ್ಚಾಗುತ್ತಿದೆ. ಹೀಗಿದ್ದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಆಕ್ರೋಶ ಹೊರಹಾಕಿದ ಬೋಪಯ್ಯ, ರಾಜ್ಯದಲ್ಲಿ ಕಳ್ಳರ, ದಂದೆಕೋರರು, ದರೋಡೆಕೋರರು ಹಾಗೂ ಗೋಹತ್ಯೆ ಮಾಡುವವರು ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ಮೆರೆಯುತ್ತಿದ್ದಾರೆ. ದೂರು ನೀಡುವವರ ವಿರುದ್ಧ ಸರ್ಕಾರದ ಹೆಸರು ಹೇಳಿಕೊಂಡು ದರ್ಪ ತೋರುತ್ತಿದ್ದಾರೆ. ದೂರು ನೀಡಲು ಭಯ ಪಡುವಂತಹ ಪರಿಸ್ಥಿತಿ ರಾಜ್ಯದಲ್ಲಿದೆ. ಇದಕ್ಕೆ ಗೃಹ ಸಚಿವರ ಕಾರ್ಯವೈಖರಿಯೇ ಕಾರಣವೆಂದು ಕೆ.ಜಿ.ಬೋಪಯ್ಯ ಆರೋಪಿಸಿದರು.ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ಮಾತನಾಡಿ, ತನ್ನ ಮನೆಯ ಕೊಟ್ಟಿಗೆಯಿಂದಲೇ ಗುರುವಾರ ಬೆಳಗ್ಗೆ ಗೋಕಳ್ಳತನ ಮಾಡಲು ಕಳ್ಳರು ಮುಂದಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ದೂರು ನೀಡುವವರನ್ನು ಬೆದರಿಸುವ ಪ್ರಯತ್ನಗಳು ನಡೆಯುತ್ತಿದೆ. ಗೋವುಗಳ ಸಾಗಾಟ ಮತ್ತು ಗೋಹತ್ಯೆಯನ್ನು ತಡೆಯದಿದ್ದಲ್ಲಿ ಬಿಜೆಪಿಯಿಂದ ಹೋರಾಟವನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದರು.ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ಬಿ.ಕೆ.ಅರುಣ್ ಕುಮಾರ್, ಮಾಚಿಮಾಡ ರವೀಂದ್ರ ಇದ್ದರು.