ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ್‌ ಇನ್ನಿಲ್ಲ

| Published : Sep 18 2024, 01:49 AM IST

ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ್‌ ಇನ್ನಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

Former MLA Venkatareddy Mudnal is no more

- ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ । ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಸಂತಾಪ । ಇಂದು ಯಾದಗಿರಿಗೆ ಆಗಮನ

-----

ಕನ್ನಡಪ್ರಭ ವಾರ್ತೆ ಯಾದಗಿರಿ

ಮಾಜಿ ಶಾಸಕ, ಬಿಎಸ್ವೈ ಆಪ್ತ ವಲಯದ ವೆಂಕಟರೆಡ್ಡಿ ಮುದ್ನಾಳ್‌ (71) ಮಂಗಳವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರಿನಲ್ಲಿಯೇ ಇದ್ದ ಮುದ್ನಾಳ್‌ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಒಂದೂವರೆ ತಿಂಗಳ ಹಿಂದಷ್ಟೇ, ಇವರ ಸಹೋದರ (ಚಿಕ್ಕಪ್ಪರ ಪುತ್ರ) ಮಾಜಿ ಶಾಸಕ ಡಾ. ವೀರಬಸವಂತರೆಡ್ಡಿ ಮುದ್ನಾಳ್‌ ಅವರೂ ಸಹ ಅನಾರೋಗ್ಯದಿಂದ ನಿಧನರಾಗಿದ್ದರು. ಈ ನೋವನ್ನು ಅರಗಿಸಿಕೊಳ್ಳುವ ಮುನ್ನವೇ, ವೆಂಕಟರೆಡ್ಡಿ ಮುದ್ನಾಳ್‌ರ ನಿಧನ ಕುಟುಂಬ ಹಾಗೂ ಅಪಾರ ಅಭಿಮಾನಿಗಳಿಗೆ ಭಾರಿ ಆಘಾತ ಮೂಡಿಸಿದೆ. ಮೃತರಿಗೆ ಪತ್ನಿ, ಸಹೋದರ, ಸಹೋದರಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ.

ನಿಜಾಮ್‌ ದುರಾಡಳಿತ ವಿರುದ್ಧ, ಹೈದರಾಬಾದ್‌ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರ ತಂದೆ, ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರ ಆಪ್ತವಲಯದ, ಮಾಜಿ ಸಚಿವ ದಿ. ವಿಶ್ವನಾಥರೆಡ್ಡಿ ಮುದ್ನಾಳರ ಪುತ್ರರಾಗಿದ್ದ ವೆಂಕಟರೆಡ್ಡಿ ಮುದ್ನಾಳ್‌ ಅವರ ಅಗಲಿಕೆಯು ಕಲ್ಯಾಣ ಕರ್ನಾಟಕ ಉತ್ಸವದ ಸಂಭ್ರಮದ ಸಂದರ್ಭದಲ್ಲಿ ಸೂತಕದ ಛಾಯೆ ಮೂಡಿಸಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುದ್ನಾಳ್‌ ಮನೆತನ ರಾಜಕೀಯವಾಗಿ ಭಾರಿ ಪ್ರಭಾವ ಹೊಂದಿದ್ದು, ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷರಾಗಿದ್ದ ವೆಂಕಟರೆಡ್ಡಿ ಮುದ್ನಾಳ್ ಅವರಿಗೆ ರಾಜಕೀಯ ರಕ್ತಗತವಾಗಿ ಬಂದಿತ್ತು.

ಮಾಜಿ ಸಿಎಂ ಬಿ. ಎಸ್‌. ಯಡಿಯೂರಪ್ಪ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ವೆಂಕಟರೆಡ್ಡಿ ಮುದ್ನಾಳ್‌, 1995 ರಲ್ಲಿ ಜನತಾ ಪರಿವಾರದ ಮೂಲಕ ರಾಜಕೀಯ ಪ್ರವೇಶಿಸಿ ಮೊದಲ ಬಾರಿಗೆ ಯಾದಗಿರಿ ಪುರಸಭೆಯ ಅಧ್ಯಕ್ಷರಾಗುವ ಮೂಲಕ ರಾಜಕೀಯ ರಂಗ ಪ್ರವೇಶಿಸಿದ್ದರು. 2018ರಲ್ಲಿ ಗುರಮಠಕಲ್ ಮತಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮುದ್ನಾಳ್‌, ಟಿಕೆಟ್ ಸಿಗದಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡಿದ್ದರು. ನಂತರದಲ್ಲಿ ಬಿಜೆಪಿ ಸೇರಿದರಾದರೂ, ಮಾಜಿ ಸಿಎಂ ಬಿಎಸ್‌ವೈ ಅವರು ಆಗ ಸ್ಥಾಪಿಸಿದ್ದ ಕೆಜೆಪಿ ಪಕ್ಷಕ್ಕೆ ಸೇರಿ 2013ರ ಚುನಾವಣೆಯಲ್ಲಿ 2ನೇ ಬಾರಿ ಕೆಜೆಪಿಯಿಂದ ಕಣಕ್ಕಿಳಿದು ಕಾಂಗ್ರೆಸ್‌ನ ಬಾಬುರಾವ ಚಿಂಚನಸೂರ ವಿರುದ್ಧ ಸೋಲು ಕಂಡಿದ್ದರು. ಕೊನೆಗೆ, 2018 ರ ಚುನಾವಣೆಯಲ್ಲಿ ರಾಜಕೀಯ ಬದಲಾವಣೆಗಳ ನಂತರ ಬಿಎಸ್‌ವೈ ಸಲಹೆ ಮೇರೆಗೆ ಗುರುಮಠಕಲ್ ಕ್ಷೇತ್ರ ತೊರೆದು, ಯಾದಗಿರಿ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು, ಮಾಜಿ ಸಚಿವ, ಕಾಂಗ್ರೆಸ್‌ನ ಡಾ. ಎ. ಬಿ. ಮಾಲಕರಡ್ಡಿ ವಿರುದ್ಧ 12 ಸಾವಿರಕ್ಕೂ ಹೆಚ್ಚು ಮತಗಳ ಅಂತರದ ಜಯ ಕಂಡು, ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಮೊನ್ನೆಯ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುದ್ನಾಳ್‌, ಕಾಂಗ್ರೆಸ್‌ನ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು ವಿರುದ್ಧ 3 ಸಾವಿರ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದರು.

ಚುನಾವಣೆ ನಂತರದ ಕೆಲ ತಿಂಗಳಲ್ಲಿ ಆರೋಗ್ಯದ ಸಮಸ್ಯೆಯಿಂದಾಗಿ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಮನೆಗೆ ವಾಪಸ್ಸಾಗಿದ್ದರಾದರೂ ಮಂಗಳವಾರ ಮಧ್ಯಾಹ್ನ ತೀವ್ರ ಎದೆನೋವು ಕಾಣಿಸಿಕೊಂಡ ಕಾರಣ ಅವರನ್ನು ಪುನಃ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಅವರು ತೀವ್ರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಬೆಂಗಳೂರಿನಲ್ಲಿ ಆಸ್ಪತ್ರೆಗೆ ತೆರಳಿದ್ದ ಮಾಜಿ ಸಿಎಂ ಬಿಎಸ್ವೈ ತಮ್ಮ ಖಾಸಾ ವಲಯದ ವೆಂಕಟರೆಡ್ಡಿ ಮುದ್ನಾಳ್‌ ಅವರ ಪಾರ್ಥೀವ ಶರೀರ ವೀಕ್ಷಿಸಿ, ಸಂತಾಪ ಸೂಚಿಸಿದರು.

ನೇರ ನಿಷ್ಠುರವಾದಿ:

ತಂದೆಯಂತೆಯೇ, ನೇರ-ನಿಷ್ಠುರ ನಡೆ-ನುಡಿಗಳಿಗೆ ಹೆಸರಾಗಿದ್ದ ವೆಂಕಟರೆಡ್ಡಿ ಮುದ್ನಾಳ್‌, ಯಾದಗಿರಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಸೇರಿದಂತೆ ವಡಗೇರಾ ಭಾಗದಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನವಾಗುವಲ್ಲಿ ಮುತುವರ್ಜಿ ವಹಿಸಿದ್ದರು. ತೀಕ್ಷ್ಣ ಹೋರಾಟಗಳ ಮೂಲಕ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದ ಅವರು, ನೇರವಾದ ಮಾತುಗಳ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಮುನ್ನುಗ್ಗುತ್ತಿದ್ದರು.

ಮುದ್ನಾಳ್‌ ಸಾವಿನ ಸುದ್ದಿ ಅರಿಯುತ್ತಲೇ ಲಾಲ್‌ ಬಹಾದ್ದೂರ್ ಶಾಸ್ತ್ರಿ ವೃತ್ತದ ಸಮೀಪದ ಅವರ ನಿವಾಸಕ್ಕೆ ಮಠಾಧೀಶರು, ಗಣ್ಯರು ಹಾಗೂ ಅಭಿಮಾನಿಗಳ ದಂಡು ದೌಡಾಯಿಸತೊಡಗಿತು. ಸಾರ್ವಜನಿಕರು ಕೆಲವರು ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿ ತೆರಳಿದರು. ಪುತ್ರ ಮಹೇಶಗೌಡ, ಸಹೋದರ ರಾಚನಗೌಡರನ್ನು ನೆಂಟರು, ಆಪ್ತೇಷ್ಟರು ಸಂತೈಸಿದರು.

ಮಂಗಳವಾರ ರಾತ್ರಿ ವೇಳೆಗೆ ಬೆಂಗಳೂರಿನಿಂದ ಪಾರ್ಥಿವ ಶರೀರ ಬರಲಿದ್ದು, ಬುಧವಾರ ಸಾರ್ವಜನಿಕರ ದರ್ಶನದ ನಂತರ, ಯಾದಗಿರಿ ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ ಜಿಲ್ಲಾ ಕ್ರೀಡಾಂಗಣದೆದುರಿನ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮುದ್ನಾಳ್‌ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸೆ.18 ರಂದು ಆಗಮಿಸಲಿದ್ದಾರೆ.

.....ಬಾಕ್ಸ್‌....

ಮುದ್ನಾಳ್‌ ನಿಧನಕ್ಕೆ ಗಣ್ಯರ ಸಂತಾಪ

ವೆಂಕಟರೆಡ್ಡಿ ಮುದ್ನಾಳ್‌ ನಿಧನಕ್ಕೆ ಅಬ್ಬೆತುಮಕೂರು ವಿಶ್ವಾರಾಧ್ಯ ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮೀಜಿ, ಗುರುಮಠಕಲ್ ಖಾಸಾಮಠದ ಪೀಠಾಧಿಪತಿ ಶಾಂತವೀರ ಮಹಾಸ್ವಾಮೀಜಿ, ಹೆಡಗಿಮದ್ರಾದ ಶ್ರೀ ಶಾಂತ ಶಿವಯೋಗಿ ಮಠದ ಪೀಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕೊಡಾಲದ ಪಂಚಮಸಿದ್ಧಲಿಂಗ ಸ್ವಾಮೀಜಿ, ಸಂಗಮದ ಕರುಣೇಶ್ವರ ಮಹಾಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ, ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಚೆನ್ನಾರಡ್ಡಿ ಪಾಟೀಲ್ ತುನ್ನೂರ, ಶರಣಗೌಡ ಕಂದಕೂರ, ರಾಜಾ ವೇಣುಗೋಪಾಲ ನಾಯಕ, ಡಾ. ಶಿವರಾಜ ಪಾಟೀಲ್, ಬಿ. ಜಿ ಪಾಟೀಲ್, ಮಾಜಿ ಸಚಿವರಾದ ಡಾ. ಎ. ಬಿ. ಮಾಲಕರೆಡ್ಡಿ, ನರಸಿಂಹನಾಯಕ (ರಾಜೂಗೌಡ), ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಚೆನ್ನಪ್ಪಗೌಡ ಮೋಸಂಬಿ, ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ, ಮಾಜಿ ಅಧ್ಯಕ್ಷ ಡಾ. ಶರಣಭೂಪಾಲರೆಡ್ಡಿ ನಾಯ್ಕಲ್‌, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರಡ್ಡಿ ಪಾಟೀಲ್ ಅನಪೂರ, ಕಸಾಪ ಜಿಲ್ಲಾಧ್ಯಕ್ಷ ಸಿದ್ಧಪ್ಪ ಹೊಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

-

17ವೈಡಿಆರ್‌10 : ವೆಂಕಟರೆಡ್ಡಿ ಮುದ್ನಾಳ್‌, ಮಾಜಿ ಶಾಸಕರು ಹಾಗೂ ಬಿಜೆಪಿ ಮುಖಂಡರು.

17ವೈಡಿಆರ್‌11 : ಮಾಜಿ ಸಿಎಂ ಬಿಎಸ್ವೈ ಅವರೊಡನೆ ಸಮಾರಂಭವೊಂದರಲ್ಲಿ ಮಾತುಕತೆ ವೇಳೆ ಮುದ್ನಾಳ್‌.

17ವೈಡಿಆರ್‌12 : ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಗಳಿಗೆ. ಮಾಜಿ ಸಚಿವ ರಾಜೂಗೌಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

17ವೈಡಿಆರ್‌13 : ಸಹೋದರ ಹಾಗೂ ಮಾಜಿ ಶಾಸಕ ಡಾ. ವೀರಬವಸವಂತರೆಡ್ಡಿ ಮುದ್ನಾಳ್‌ ಅವರ ಜೊತೆ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ್‌ ಹೋರಾಟದ ಸಂದರ್ಭವೊಂದರಲ್ಲಿ ಕಂಡು ಬಂದಿದ್ದು ಹೀಗೆ. ಡಾ. ವೀರಬಸವಂತರೆಡ್ಡಿ ಅವರೂ ಸಹ ಒಂದೂವರೆ ತಿಂಗಳ ಹಿಂದೆ ತೀರಿಕೊಂಡಿದ್ದರು.

17ವೈಡಿಆರ್14 : ಪತ್ನಿ, ಪುತ್ರ ಹಾಗೂ ಪುತ್ರಿಯೊಡನೆ ಮತದಾನದ ನಂತರ ಕ್ಯಾಮರಾಗಳಿಗೆ ಫೋಸ್‌ ನೀಡಿದ್ದರು ವೆಂಕಟರೆಡ್ಡಿ ಮುದ್ನಾಳ್‌.