ರೇವಣ್ಣ ಇಂದು ಚಿಲ್ಲರೆ ಗಿರಾಕಿ ಆಗಿಬಿಟ್ಟಿದ್ದಾರೆ. ಇತ್ತೀಚೆಗೆ ಪೊಳ್ಳು ಆರೋಪ ಮಾಡುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಹುಡಾದಲ್ಲಿ ಒಂದು ಕೋಟಿ ರು. ವಸೂಲಿ ಸಾಧ್ಯವೇ? ಇವು ಎಲ್ಲವೂ ಗಾಳಿಯಲ್ಲಿ ಗುಂಡು ಹೊಡೆಯುವ ಮಾತುಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು. ರೇವಣ್ಣ ಅವರ ಸಚಿವಾವಧಿಯನ್ನೇ ಉದಾಹರಣೆಗೆ ತಂದು, ಸಮ್ಮಿಶ್ರ ಸರ್ಕಾರದ ಸಮಯದಲ್ಲಿ ಇವರೂ ಸಚಿವರಿದ್ದರು. ಆಗಲೂ ಜಿಲ್ಲೆಯಲ್ಲೇ ಹಲವು ಸರ್ಕಾರಿ ಕಾರ್ಯಕ್ರಮಗಳು ನಡೆದವು. ಆಗ ಯಾವ ಇಲಾಖೆಯಿಂದ ಹಣ ವಸೂಲಿ ಮಾಡಿದ್ದರು? ಈಗ ಮಾತ್ರ ಏಕೆ ಆರೋಪಗಳ ಮಳೆ? ಎಂದು ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯ ರಾಜಕೀಯದಲ್ಲಿ ಶುಕ್ರವಾರ ಮತ್ತೊಮ್ಮೆ ವಾಕ್ಸಮರ ತೀವ್ರಗೊಂಡಿದ್ದು, ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾಡಿದ ಆರೋಪಗಳಿಗೆ ಪ್ರತಿಕ್ರಿಯಿಸಿದ ಮಾಜಿ ಎಂಎಲ್ಸಿ ಎಂ.ಎ. ಗೋಪಾಲಸ್ವಾಮಿ ಅವರ ಹೇಳಿಕೆ ನಗರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ಸರ್ಕಾರಿ ಸೌಲಭ್ಯಗಳ ಸಮರ್ಪಣಾ ಸಮಾವೇಶಕ್ಕಾಗಿ ವಿವಿಧ ಇಲಾಖೆಗಳಿಂದ ಹಣ ವಸೂಲಿ ಮಾಡಿದ್ದಾರೆ ಎಂಬ ರೇವಣ್ಣ ಅವರ ಆರೋಪವನ್ನು ತಿರಸ್ಕರಿಸಿ ನೇರವಾದ ಶೈಲಿಯಲ್ಲೇ ವ್ಯಂಗ್ಯ ಪೂರಿತ ಟೀಕೆಗಳನ್ನು ಮಾಡಿದ ಪ್ರಸಂಗ ನಡೆಯಿತು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ರೇವಣ್ಣ ಇಂದು ಚಿಲ್ಲರೆ ಗಿರಾಕಿ ಆಗಿಬಿಟ್ಟಿದ್ದಾರೆ. ಇತ್ತೀಚೆಗೆ ಪೊಳ್ಳು ಆರೋಪ ಮಾಡುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಹುಡಾದಲ್ಲಿ ಒಂದು ಕೋಟಿ ರು. ವಸೂಲಿ ಸಾಧ್ಯವೇ? ಇವು ಎಲ್ಲವೂ ಗಾಳಿಯಲ್ಲಿ ಗುಂಡು ಹೊಡೆಯುವ ಮಾತುಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು. ರೇವಣ್ಣ ಅವರ ಸಚಿವಾವಧಿಯನ್ನೇ ಉದಾಹರಣೆಗೆ ತಂದು, ಸಮ್ಮಿಶ್ರ ಸರ್ಕಾರದ ಸಮಯದಲ್ಲಿ ಇವರೂ ಸಚಿವರಿದ್ದರು. ಆಗಲೂ ಜಿಲ್ಲೆಯಲ್ಲೇ ಹಲವು ಸರ್ಕಾರಿ ಕಾರ್ಯಕ್ರಮಗಳು ನಡೆದವು. ಆಗ ಯಾವ ಇಲಾಖೆಯಿಂದ ಹಣ ವಸೂಲಿ ಮಾಡಿದ್ದರು? ಈಗ ಮಾತ್ರ ಏಕೆ ಆರೋಪಗಳ ಮಳೆ? ಎಂದು ಪ್ರಶ್ನಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರು ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಪೂರ್ಣ ಜಿಲ್ಲೆಯ ಅಭಿವೃದ್ಧಿಗೆ ತೊಡಗಿಕೊಂಡಿದ್ದಾರೆ. ಇಂತಹ ಸಭೆ, ಕಾರ್ಯಕ್ರಮಗಳಲ್ಲಿ ರೇವಣ್ಣ ಒಮ್ಮೆಯಾದರೂ ಭಾಗವಹಿಸಿದ್ದಾರೆಯೇ? ಜನರ ಕಾಳಜಿ ಇದ್ದರೆ ಸಚಿವರನ್ನು ಭೇಟಿ ಮಾಡುತ್ತಿದ್ದರು. ಈಗ ಜಿಲ್ಲೆಯಲ್ಲಿ ತಮ್ಮ ವ್ಯಾಪಾರ ಇಳಿಮುಖವಾದ್ದರಿಂದ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಎಸೆಯುತ್ತಿದ್ದಾರೆ ಎಂದು ಟೀಕಿಸಿದರು.

ಇನ್ನೂ ಶಾಸಕ ಎಚ್.ಪಿ. ಸ್ವರೂಪ್ ಅವರ ರಾಜಕೀಯ ನಿಲುವುಗಳನ್ನೂ ಟಾರ್ಗೆಟ್ ಮಾಡಿ, ಸ್ವರೂಪ್ ಒಳ್ಳೆಯ ಹುಡುಗ. ಅವರ ಮನೆಯವರ ಬಗ್ಗೆ ಗೌರವವಿದೆ. ಆದರೆ ಇತ್ತೀಚೆಗೆ ಅವರು ರೇವಣ್ಣ ಅವರ ಕೀಲುಗೊಂಬೆಯಂತಾಗಿದ್ದಾರೆ. ಕೀ ಕೊಟ್ಟಾಗ ಮಾತ್ರ ಸರ್ಕಾರದ ವಿರುದ್ಧ ಮಾತನಾಡುತ್ತಾರೆ ಎಂದು ಗರಂ ಆಗಿ ವ್ಯಂಗ್ಯವಾಡಿದರು.

ಲೋಕಸಭಾ ಚುನಾವಣೆಯ ವೇಳೆಯಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ದಿಡಗ ಭಾಗದ ಕೆರೆಗಳಿಗೆ ಏತ ನೀರಾವರಿ ಒದಗಿಸುವ ಭರವಸೆ ನೀಡಿದ್ದರು, ಅದನ್ನು ಸರ್ಕಾರ ನಿಷ್ಠೆಯಿಂದ ಜಾರಿಗೆ ತಂದಿದೆ ಎಂದು ಪ್ರಶಂಸಿಸಿದರು. ೭೪ ಕೋಟಿ ವೆಚ್ಚದಲ್ಲಿ ದಿಡಗ ಹಾಗೂತುಮಕೂರು ಏತ ನೀರಾವರಿ ಯೋಜನೆಗೆ ಅನುದಾನ ಮಂಜೂರಾಗಿದೆ. ೧೮ ಕೆರೆಗಳು ತುಂಬಲಿದ್ದು, ೩೨ ಗ್ರಾಮಗಳು ಇದರ ಪ್ರಯೋಜನ ಪಡೆಯಲಿವೆ ಎಂದು ವಿವರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಾಧಿಕಾರದ ಅಧ್ಯಕ್ಷ ಮೂರ್ತಿ, ಚನ್ನರಾಯಪಟ್ಟಣ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ್ ಇತರರು ಉಪಸ್ಥಿತರಿದ್ದರು.