ಸಾರಾಂಶ
ಹೊರಗುತ್ತಿಗೆ ಪಡೆದ ಸುರಕ್ಷ ಸೆಕ್ಯೂರಿಟಿ ಸರ್ವೀಸಸ್ ಸಂಸ್ಥೆಯನ್ನು ಕೇಳಿದರೆ ನಮಗೆ ಯಾವುದೇ ಹಣಸಂದಾಯವಾಗಿಲ್ಲ. ಸಂಸ್ಥೆಯೇ ನೇರವಾಗಿ ಹಣ ಪಾವತಿ ಮಾಡುತ್ತಾರೆ ಎಂದು ಹೇಳುತ್ತಿದ್ದು. ೧೯೫೨ರ ಕಾರ್ಮಿಕ ಕಾಯ್ದೆ ಪ್ರಕಾರ ಮೈಷುಗರ್ ಸಂಸ್ಥೆಯೇ ವೇತನ ಪಾವತಿ ಮಾಡಬೇಕಿದೆ .
ಕನ್ನಡಪ್ರಭ ವಾರ್ತೆ ಮಂಡ್ಯ
ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಬಾಕಿ ಉಳಿಸಿಕೊಂಡಿರುವ ವೇತನ ಪಾವತಿ ಮಾಡುವಂತೆ ಒತ್ತಾಯಿಸಿ, ಸಾಮಗ್ರಿ ನಿರ್ವಾಹಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದವರು ಶನಿವಾರ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿದರು.ಕಾರ್ಖಾನೆಯಲ್ಲಿ ೨೦೧೮- ೧೯ನೇ ಸಾಲಿನಲ್ಲಿ ಸೇವೆ ಸುರಕ್ಷ ಸೆಕ್ಯೂರಿಟಿ ಸರ್ವೀಸಸ್ ಗುತ್ತಿಗೆ ಸಂಸ್ಥೆಯ ಮೂಲಕ ಸಾಮಗ್ರಿ ನಿರ್ವಾಹಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ್ದು, ಕೇವಲ ೨ ತಿಂಗಳ ವೇತನ ನೀಡಿ, ೧೦ ತಿಂಗಳ ವೇತನ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ವೇತನ ಸಂಬಂಧ ಹಲವು ಬಾರಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ವಾಹಕರನ್ನು ಭೇಟಿ ಮಾಡಿದ್ದರೂ ವೇತನ ಪಾವತಿಗೆ ಸಬೂಬು ಹೇಳುತ್ತಿದ್ದಾರೆ. ಕಳೆದ ೬ ವರ್ಷಗಳಿಂದ ಬಾಕಿ ಉಳಿದ ೩೬ ಲಕ್ಷ ರು. ವೇತನ ಪಾವತಿಗೆ ಯಾವುದೇ ಕ್ರಮ ವಹಿಸಲಾಗಿಲ್ಲ ಎಂದು ದೂರಿದರು.ಸಂಕಷ್ಟದ ಸಂದರ್ಭದಲ್ಲೂ ವೇತನ ಪಾವತಿ ಮಾಡುವಂತೆ ಕಂಪನಿ ಮೊರೆ ಹೋಗಿ ಅಂಗಲಾಚಿದರೂ, ಕನಿಷ್ಠ ಮಾನವೀಯತೆಯನ್ನೂ ತೋರುತ್ತಿಲ್ಲ. ಹಾಲಿ ಅಧ್ಯಕ್ಷರ ಗಮನಕ್ಕೆ ತಂದರೆ ಸಕ್ಕರೆ ಮಾರಾಟವಾದ ನಂತರ ಪಾವತಿ ಮಾಡುವುದಾಗಿ ಹೇಳಿ ಇದುವರೆಗೂ ಪಾವತಿ ಮಾಡದೇ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ವೇತನ ಪಾವತಿ ಸಂಬಂಧ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿಗಳು, ಜಿಲ್ಲಾಧಿಕಾರಿ, ಲೋಕಸಭಾ ಸದಸ್ಯರು, ಶಾಸಕರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಮನವಿ ಸಲ್ಲಿಸಿದ ವೇಳೆ ವೇತನ ಪಾವತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರೂ ವೇತನ ಪಾವತಿ ಮಾಡುವತ್ತ ಮನಸ್ಸು ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಹೊರಗುತ್ತಿಗೆ ಪಡೆದ ಸುರಕ್ಷ ಸೆಕ್ಯೂರಿಟಿ ಸರ್ವೀಸಸ್ ಸಂಸ್ಥೆಯನ್ನು ಕೇಳಿದರೆ ನಮಗೆ ಯಾವುದೇ ಹಣಸಂದಾಯವಾಗಿಲ್ಲ. ಸಂಸ್ಥೆಯೇ ನೇರವಾಗಿ ಹಣ ಪಾವತಿ ಮಾಡುತ್ತಾರೆ ಎಂದು ಹೇಳುತ್ತಿದ್ದು. ೧೯೫೨ರ ಕಾರ್ಮಿಕ ಕಾಯ್ದೆ ಪ್ರಕಾರ ಮೈಷುಗರ್ ಸಂಸ್ಥೆಯೇ ವೇತನ ಪಾವತಿ ಮಾಡಬೇಕಿದೆ ಎಂದರು.
ಕಂಪನಿಯ ಮಾಜಿ ಸಾಮಗ್ರಿ ನಿರ್ವಾಹಕ ಎಚ್.ಎಂ.ರಘು ನೇತೃತ್ವದ ಪ್ರತಿಭಟನೆಯಲ್ಲಿ ರಮೇಶ್, ರಾಮದಾಸ್. ಎಸ್.ಸಂಜೀವ್‌ಕುಮಾರ್, ಸುಮಿತ್‌ಕುಮಾರ್, ಗಂಗಾಧರ್, ಎಂ.ಮಹೇಶ್ ಇದ್ದರು.