ಶಿರಹಟ್ಟಿ: ರೈತರ ಧ್ವನಿಯಾಗಿ, ನೀರಾವರಿ ಹೋರಾಟಗಾರರಾಗಿ ಮತ್ತು ನಾಡಿನ ಹಿರಿಯ ಮುತ್ಸದ್ಧಿಯಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನೀಡಿರುವ ಕೊಡುಗೆ ಅಪಾರ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವೈ. ಮುಧೋಳ ತಿಳಿಸಿದರು.ಇಲ್ಲಿಯ ಜೆಡಿಎಸ್ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಜನ್ಮದಿನದ ಪ್ರಯುಕ್ತ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಸತ್ಕಾರ ಮತ್ತು ರೈತ ಮಹಿಳೆಯರಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವೇಗೌಡರ ಬದುಕಿನ ಮತ್ತೊಂದು ದೊಡ್ಡ ವಿಶೇಷ ಎಂದರೆ ಅವರ ಸರಳತೆ ಮತ್ತು ಇಳಿವಯಸ್ಸಿನಲ್ಲೂ ಅವರು ತೋರುವ ಛಲ. ಅಧಿಕಾರ ಇರಲಿ ಅಥವಾ ಇಲ್ಲದಿರಲಿ, ಸದಾ ಜನರ ಸೇವಕನಾಗಿ ಇರುತ್ತೇನೆ ಎನ್ನುವುದು ಅವರ ಮೂಲಮಂತ್ರ. ರೈತರ ಸಮಸ್ಯೆಗಳು, ಕಾವೇರಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ವಿವಾದಗಳ ಸಂದರ್ಭದಲ್ಲಿ ಅವರು ಸದನದಲ್ಲಿ ಮತ್ತು ಹೊರಗೆ ನಡೆಸಿದ ಹೋರಾಟಗಳು ಯುವಪೀಳಿಗೆಗೆ ಸದಾ ಸ್ಫೂರ್ತಿದಾಯಕ ಎಂದರು.ನಾಡಿನ ಏಳಿಗೆಗಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿರುವ ಎಚ್.ಡಿ. ದೇವೇಗೌಡರು ಕೇವಲ ಒಬ್ಬ ವ್ಯಕ್ತಿಯಲ್ಲ, ಅದೊಂದು ಶಕ್ತಿ ಮತ್ತು ಸಂಸ್ಥೆ. ಅವರ ದೂರದೃಷ್ಟಿ, ರೈತಪರ ಚಿಂತನೆ ಮತ್ತು ನಾಡಿನ ಮೇಲಿನ ಪ್ರೀತಿ ಸದಾಕಾಲ ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಇಂತಹ ಮಹಾನ್ ಚೇತನಕ್ಕೆ ನಾವೆಲ್ಲರೂ ಗೌರವ ಸಲ್ಲಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಶರಣಪ್ಪ ಹೂಗಾರ ಮಾತನಾಡಿ, ಶಿಕ್ಷಣ ಹರಿಯುವ ನೀರಿನಂತೆ. ನಿತ್ಯನೂತನವಾಗಿರುತ್ತದೆ. ವಿದ್ಯಾರ್ಥಿಗಳು ಪ್ರತಿದಿನ ಶೈಕ್ಷಣಿಕ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಸಂಶೋಧನೆ, ಅನ್ವೇಷಣೆ ಕುರಿತು ತಿಳಿದುಕೊಂಡು ಜ್ಞಾನದ ಹರಿವು ಹೆಚ್ಚಿಸಿಕೊಳ್ಳಬೇಕು ಎಂದರು.ಜೆಡಿಎಸ್ ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ರಮೇಶ್ ಹುಣಸಿಮರದ, ಎಂ.ಎಸ್. ಪಾರ್ಥಗೌಡ, ಸಂತೋಷ್ ಪಾಟೀಲ, ಫಕೀರಪ್ಪ ತುಳಿ, ಹನುಮಂತಪ್ಪ ಮರಿಗೌಡ್ರು, ಲಲಿತಕ್ಕ ಕಲ್ಲಪ್ಪನವರ, ಜಯರಾಜ್ ವಾಲಿ, ವಿನಾಯಕ್ ಪರ್ಬತ, ಮುನ್ನ ಡಾಲಾಯತ್, ಬಸವರಾಜ್ ಕಲ್ಲಪ್ಪನವರ್, ವೀರೇಶ್ ಬಣಗಾರ, ಶಿವಯೋಗಿ ತುಳಿ, ಮುದುಕಪ್ಪ ತಳವಾರ, ಮುತ್ತು ಮಜ್ಜಿಗೆ, ಬಸವಂತಪ್ಪ ಗೌಳಿ ಮುಂತಾದವರು ಇದ್ದರು.