ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ರಾಜಕೀಯದ ಭೀಷ್ಮ, ಹಿರಿಯ ಮುತ್ಸದ್ಧಿ ಜತೆಗೆ ನಂಬಿದ ತತ್ತ್ವಗಳು ಹಾಗೂ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳದ ಧೀಮಂತ ವ್ಯಕ್ತಿ ಮತ್ತು ದೆಹಲಿಯ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದ ಏಕೈಕ ಕನ್ನಡಿಗ, ಮಣ್ಣಿನ ಮಗ ಎಚ್. ಡಿ. ದೇವೇಗೌಡರ 94ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ ಎಂದು ಜಿಪಂ ಮಾಜಿ ಸದಸ್ಯ ಚಂದ್ರಶೇಖರ್ ತಿಳಿಸಿದರು.ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಜನ್ಮದಿನ ಪ್ರಯುಕ್ತ ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ಮಾತನಾಡಿದರು. ಗೌಡರಿಗೆ ದೇವರು ಇನ್ನಷ್ಟು ಆರೋಗ್ಯ, ಆಯಸ್ಸು, ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಹಾಗೂ ತಾಲೂಕಿನ ಎಲ್ಲಾ ನಾಗರಿಕ ಪರವಾಗಿ ಜನ್ಮದಿನ ಶುಭಾಶಯವನ್ನು ಕೋರುತ್ತೇವೆ ಎಂದರು.ಪುರಸಭೆ ಮಾಜಿ ಅಧ್ಯಕ್ಷ ಎಚ್. ಕೆ. ಪ್ರಸನ್ನ ಮಾತನಾಡಿ ಶ್ರೀಯುತರ ಕೃಷಿ ಪರ ನಿಲುವುಗಳನ್ನು ಗೌರವಿಸಿ, ಪಂಜಾಬಿನಲ್ಲಿ ಭತ್ತದ ತಳಿಯೊಂದಕ್ಕೆ ದೇವೇಗೌಡರ ಹೆಸರನ್ನು ಇಟ್ಟಿರುವುದು ಅವರ ಜನಪರ ಕಾರ್ಯಕ್ಕೆ ಸಂದ ಗೌರವವಾಗಿದೆ ಎಂದರು. ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಎಚ್. ಡಿ. ದೇವೇಗೌಡರ ಜನ್ಮದಿನ ಪ್ರಯುಕ್ತ ತಾಲೂಕು ಜೆಡಿಎಸ್ ವತಿಯಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣುಗಳು ಹಾಗೂ ಬ್ರೆಡ್ ವಿತರಿಸಿದರು.ಪುರಸಭೆ ಮಾಜಿ ಅಧ್ಯಕ್ಷರಾದ ಲಕ್ಷ್ಮಣ, ಸುದರ್ಶನ್, ಕೆ. ಶ್ರೀಧರ್‌ ಹಾಗೂ ಜಗನ್ನಾಥ್, ಮಾಜಿ ಸದಸ್ಯರಾದ ಸೈಯದ್ ವಾಸಿಂ, ಉಮೇಶ್ ಹಾಗೂ ಶಿವಣ್ಣ, ಸೋಷಿಯಲ್ ಕ್ಲಬ್ ಅಧ್ಯಕ್ಷ ಹೊನ್ನಪ್ಪ, ಜೈಪ್ರಕಾಶ್, ಆನಂದ, ಪ್ರವೀಣ್, ರಾಜು, ರವಿಕುಮಾರ್‌, ಸತೀಶ್, ಸುನೀಲ್, ಅಶೋಕ್, ರಿಯಾಜ್, ಮಂಜು, ದೀಕ್ಷಿತ್, ಬಿಡ್ಡರಾಮ, ಕೃಷ್ಣಮೂರ್ತಿ ಎನ್, ಜವರೇಶ ಇತರರು ಇದ್ದರು.