ಉಡುತೊರೆ ಅಣೆಕಟ್ಟೆಯಿಂದ ನೀರು ಬಿಡಲು ಆಗ್ರಹಿಸಿ ನವೆಂಬರ್‌ 4ರಂದು ರೈತ ಸಂಘ ಧರಣಿ: ರೈತ ಸಂಘದ ಅಮ್ಜಾದ್‌ ಖಾನ್

| Published : Oct 23 2024, 12:40 AM IST

ಉಡುತೊರೆ ಅಣೆಕಟ್ಟೆಯಿಂದ ನೀರು ಬಿಡಲು ಆಗ್ರಹಿಸಿ ನವೆಂಬರ್‌ 4ರಂದು ರೈತ ಸಂಘ ಧರಣಿ: ರೈತ ಸಂಘದ ಅಮ್ಜಾದ್‌ ಖಾನ್
Share this Article
  • FB
  • TW
  • Linkdin
  • Email

ಸಾರಾಂಶ

ಉಡುತೊರೆ ಜಲಾಶಯದ ಭರ್ತಿಯಾಗಿದ್ದರೂ ರೈತರ ಬೆಳೆಗಳಿಗೆ ನೀರು ಬಿಡದಿರುವುದು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನ.4 ರಂದು ಅಜ್ಜೀಪುರ ಗ್ರಾಮದ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ ಖಾನ್ ತಿಳಿಸಿದರು. ಹನೂರಲ್ಲಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಜಲಾಶಯ ಭರ್ತಿಯಾಗಿದ್ದರೂ ಬೆಳೆಗಳಿಗೆ ನೀರು ಬಿಡುತ್ತಿಲ್ಲ ಎಂದು ರೈತರು ಆರೋಪ

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಉಡುತೊರೆ ಜಲಾಶಯದ ಭರ್ತಿಯಾಗಿದ್ದರೂ ರೈತರ ಬೆಳೆಗಳಿಗೆ ನೀರು ಬಿಡದಿರುವುದು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನ.4 ರಂದು ಅಜ್ಜೀಪುರ ಗ್ರಾಮದ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ ಖಾನ್ ತಿಳಿಸಿದರು.

ಹನೂರು ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಸರ್ಕಾರ ಅಜ್ಜೀಪುರ ರಾಮಾಪುರ ಕೌದಳ್ಳಿ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಅನುಕೂಲ ಕಲ್ಪಿಸಲು ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ಉಡುತೊರೆ ಜಲಾಶಯ ನಿರ್ಮಾಣ ಮಾಡಲಾಗಿದೆ. ಕಳೆದ ಎರಡು ವರ್ಷಗಳ ಕಾಲ ಸತತ ಬರಗಾಲವಿದ್ದರಿಂದ ರೈತರು ತೀವ್ರ ತೊಂದರೆ ಅನುಭವಿಸಿದ್ದಾರೆ. ವರುಣನ ಕೃಪೆಯಿಂದ ಕಳೆದ ಒಂದು ತಿಂಗಳಿನಿಂದ ಸತತ ಮಳೆಯಾಗುತ್ತಿರುವ ಹಿನ್ನೆಲೆ ಅಣೆಕಟ್ಟೆ ಭರ್ತಿಯಾಗುತ್ತಿದೆ. ಆದರೆ ಮುಖ್ಯ ಕಾರ್ಯಗಳಲ್ಲಿ ಕಸ ಕಡ್ಡಿಗಳು, ಗಿಡಗಂಟಿಗಳು ಬೆಳೆದಿರುವುದರಿಂದ ಕೊನೆಯ ಭಾಗದವರೆಗೆ ಜಲಾಶಯ ನೀರು ತಲುಪುತ್ತಿಲ್ಲ. ಈ ಸಂಬಂಧ ಅಧಿಕಾರಿಗಳಿಗೆ ಮುಖ್ಯ ಕಾಲುವೆ ದುರಸ್ತಿ ಪಡಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ ಖಂಡಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಸಂಚಾಲಕ ಶೈಲೇಂದ್ರ ಮಾತನಾಡಿ, ಅರಣ್ಯ ಇಲಾಖೆ ಮಲೆ ಮಹದೇಶ್ವರ ಬೆಟ್ಟ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ಗ್ರಾಮಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕಿದೆ. ಆದರೆ ಇದುವರೆಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಟ್ಟಿಲ್ಲ. ಸರ್ಕಾರದ ಕಾನೂನನ್ನೇ ಉಲ್ಲಂಘನೆ ಮಾಡಿರುವ ಹಿರಿಯ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಸ್ವಾತಂತ್ರ್ಯಪೂರ್ವದಲ್ಲಿ ಗ್ರಾಮ ಪಂಚಾಯಿತಿಗಳ ಗ್ರಾಮ ಠಾಣೆಯನ್ನು ನಿಗದಿ ಮಾಡಲಾಗಿದೆ. ಸರ್ಕಾರ ಹೊಸದಾಗಿ ಗ್ರಾಮ ಠಾಣೆ ಸರ್ವೆ ಮಾಡುವಂತೆ ಸೂಚನೆ ನೀಡಿದ್ದರೂ ಇದುವರೆಗೂ ಸರ್ವೆ ಮಾಡದೆ ಇರುವುದರಿಂದ ನಿವಾಸಿಗಳಿಗೆ ತೊಂದರೆಯಾಗಿದೆ. ಈ ಹಿನ್ನೆಲೆ ಈ ಕೂಡಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊಸದಾಗಿ ಸರ್ವೆ ಮಾಡಿಸಿ ಸ್ಥಳೀಯ ನಿವಾಸಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಉಪಾಧ್ಯಕ್ಷ ಗೌಡೇ ಗೌಡ ಮಾತನಾಡಿ, ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಹೋಗುವ ಭಕ್ತಾದಿಗಳಿಗೆ ಅರಣ್ಯ ಇಲಾಖೆ ವತಿಯಿಂದ 200 ರುಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ. ಕಾಡಂಚಿನ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಅರಣ್ಯ ಇಲಾಖೆಯವರು ತೊಂದರೆ ಕೊಡುತ್ತಿದ್ದಾರೆ. ಆದರೆ ಚಾರಣದ ಹೆಸರಿನಲ್ಲಿ ಭಕ್ತರಿಂದ ಹಣ ವಸೂಲಿ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ? ಭಕ್ತಾದಿಗಳಿಂದ ಹಣ ವಸೂಲಿ ಮಾಡಿ ಏನು ಸಾಧನೆ ಮಾಡಬೇಕು. ಈ ಕೂಡಲೇ ಸಂಬಂಧಪಟ್ಟ ಅರಣ್ಯ ಸಚಿವರು ಈ ಆದೇಶವನ್ನು ಹಿಂಪಡೆಯಬೇಕು, ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯವರು ತಾಳುಬೆಟ್ಟದಿಂದ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತಾದಿಗಳಿಂದ ಹಣ ವಸೂಲಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ, ಈ ನಿಟ್ಟಿನಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ಶಾಸಕರು ಸಹ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ನಡೆಸಿ ಅರಣ್ಯ ಇಲಾಖೆ ವತಿಯಿಂದ ಹಣ ಪಡೆಯುತ್ತಿರುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಗೌರವಾಧ್ಯಕ್ಷ ರಾಜಣ್ಣ ರವಿ ನಾಯ್ಡು, ಗ್ರಾಮ ಘಟಕಗಳ ಅಧ್ಯಕ್ಷರಾದ ಅರ್ಪುದರಾಜ್, ಡೇವಿಡ್ ,ತಂಗವೇಲು, ಮಹಿಳಾ ಘಟಕದ ಅಧ್ಯಕ್ಷೆ ಪೊಂಗೋಡಿ ಲೋಕೇಶ್ ಗೌಡ ವೆಂಕಟೇಶ್ ಇತರರು ಹಾಜರಿದ್ದರು.