ಸಾರಾಂಶ
ಹುಬ್ಬಳ್ಳಿ: ಶ್ರೀ ಸಿದ್ದಾರೂಢ ಮಠದ ಆವರಣದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳ ಪರಿಹಾರ ಕಲ್ಪಿಸಿದ ಬಳಿಕ ಮಠದ ಗೋಪುರಕ್ಕೆ ಚಿನ್ನದ ಲೇಪನ ಮಾಡುವ ಬಗ್ಗೆ ಚಿಂತನೆ ಮಾಡಬೇಕು ಎಂದು ಮಠದ ಆಜೀವ ಸದಸ್ಯರ ಸಭೆಯಲ್ಲಿ ಸದಸ್ಯರು ಸಲಹೆ ನೀಡಿದರು.
ಮಠದ ದಾಸೋಹ ಭವನದಲ್ಲಿ ಸೋಮವಾರ ನಡೆದ ಪೋಷಕರ, ಆಶ್ರಯದಾತರ ಹಾಗೂ ಆಜೀವ ಸದಸ್ಯರ ಸಭೆಯಲ್ಲಿ, ಸುವ್ಯವಸ್ಥಿತ ಆಡಳಿತಕ್ಕೆ ಉಪ ಸಮಿತಿಗಳನ್ನು ರಚಿಸಿ ಟ್ರಸ್ಟಿಗಳಿಗೆ ಜವಾಬ್ದಾರಿ ಹಂಚಬೇಕು. ದಾನಿಗಳಿಗೆ ಗೌರವ ಸಿಗುವಂತಾಗಬೇಕು. ಹೊಸ ಗೋಶಾಲೆ ಬಗ್ಗೆ ಮರುಪರಿಶೀಲಿಸಬೇಕು ಎಂದು ಸದಸ್ಯರು ಮನವಿ ಮಾಡಿದರು.ಮಠದ ಬೈಲಾದಲ್ಲಿ ಶೈಕ್ಷಣಿಕ ಉದ್ದೇಶದ ಅಂಶಗಳನ್ನು ಸೇರಿಸಿದ ಬಳಿಕ ಹಾಸ್ಟೆಲ್, ಶಿಕ್ಷಣ ಸಂಸ್ಥೆಗಳ ಆರಂಭಕ್ಕೆ ಚಿಂತಿಸಬೇಕು. ಮಠದ ಸಮಗ್ರ ಅಭಿವೃದ್ದಿ ಯೋಜನೆ ರೂಪಿಸಿ ಸರ್ಕಾರದಿಂದ ನೂರಕ್ಕೂ ಹೆಚ್ಚು ಕೋಟಿ ಅನುದಾನಕ್ಕೆ ಮನವಿ ಮಾಡೋಣ ಎಂದು ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಗುರುನಾಥ ಉಳ್ಳಿಕಾಶಿ, 280 ಎಕರೆ ಇದ್ದ ಮಠದ ಜಮೀನು, ಇದೀಗ 128 ಎಕರೆಗೆ ಇಳಿದಿದೆ. ಉಳಿದ ಜಮೀನು ಯಾರ ಪಾಲಾಯಿತು, ಏನಾಯಿತು ಎಂಬುದರ ಮಾಹಿತಿ ಇನ್ನೂ ತಿಳಿದಿಲ್ಲ. ಮಠದ ವಿವಿಧ ಕಾರ್ಯಕ್ರಮಗಳಿಗೆ ದುಡ್ಡು ಕೊಟ್ಟು ಸ್ವಾಮೀಜಿಗಳನ್ನು ಕರೆಸಲಾಗುತ್ತದೆ. ಅದು ಬಿಟ್ಟು ಸ್ವಾಮೀಜಿಗಳಿಗೆ ಹಣ ಕೊಡುವುದೇಕೆ? ಹಣ ಕೊಡುವುದರಲ್ಲೂ ಸ್ವಾಮೀಜಿಗಳಲ್ಲಿ ತಾರತಮ್ಯ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು. ಇದರ ಲೆಕ್ಕಾಚಾರಗಳನ್ನು ಮುಂದಿನ ಸಭೆಯಲ್ಲಿ ಮಂಡಿಸಬೇಕು ಎಂದು ತಿಳಿಸಿದರು.ಚಪ್ಪಲಿ ರಹಿತ ಸೇವೆ, ಕುಡಿಯುವ ನೀರು ಮತ್ತು ಮಹಿಳೆಯರು ಎದುರಿಸುತ್ತಿರುವ ನಾನಾ ತೊಂದರೆ ಸೇರಿ ಮಠದ ಆವರಣ ಸ್ವಚ್ಛತೆಗೆ ಆದ್ಯತೆ ನೀಡುವಂತೆ ತಿಳಿಸಿದರು.
ಅಧ್ಯಕ್ಷತೆ ಸ್ಥಾನ ವಹಿಸಬೇಕಾಗಿದ್ದ ಡಿ.ಆರ್. ಪಾಟೀಲ ಅವರ ಗೈರು ಹಾಜರಿ ಎದ್ದು ಕಾಣುತ್ತಿದೆ. ಮಠದ ಸಮಸ್ಯೆ ಯಾರ ಬಳಿ ಹೇಳಬೇಕು. ಈ ಹಿಂದೆ ಚರ್ಚಿಸಿದ ವಿಷಯಗಳು ಕಾಗದಕ್ಕೆ ಸೀಮಿತವಾಗಿದ್ದು, ಯಾವುದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿಶ್ವ ವೇದಾಂತ ಪರಿಷತ್ ಕಾರ್ಯಕ್ರಮಕ್ಕೆ ಲಕ್ಷಾಂತರ ವೆಚ್ಚ ಮಾಡಿದರೂ ಲೆಕ್ಕಪತ್ರದ ಕುರಿತು ಚಕಾರವೆತ್ತಿಲ್ಲ ಎಂದು ದೂರಿದರು.ಈ ವೇಳೆ ಹಲವರು ಮಾತನಾಡಿ ಸಮಸ್ಯೆಗಳ ಕುರಿತಂತೆ ಸಭೆಯ ಗಮನ ಸೆಳೆದರು. ಗೌರವ ಕಾರ್ಯದರ್ಶಿ ರಮೇಶ ಬೆಳಗಾವಿ, ಮಂಜುನಾಥ ಮುನವಳ್ಳಿ, ಡಾ. ಗೋವಿಂದ ಮಣ್ಣೂರ, ಬಾಳು ಮಗಜಿಕೊಂಡಿ, ಬಸವರಾಜ ಕಲ್ಯಾಣಶೆಟ್ಟರ, ಉದಯಕುಮಾರ ನಾಯ್ಕ, ಗೀತಾ ಕಲ್ಬುರ್ಗಿ, ಶಾಮಾನಂದ ಪೂಜೇರಿ ಸೇರಿದಂತೆ ಮೊದಲಾವದರಿದ್ದರು. ಮಠದ ಟ್ರಸ್ಟ್ ಚೇರಮನ್ ಚನ್ನವೀರ ಮುಂಗರವಾಡಿ ಸ್ವಾಗತಿಸಿದರು.