ಸಾರಾಂಶ
ಕೆಎಂಇಆರ್‌ಸಿ ಮೇಲ್ವಿಚಾರಣಾ ಪ್ರಾಧಿಕಾರದಿಂದ ಯೋಜನೆಗಳ ಕುರಿತು ಪರಿಶೀಲನೆ
₹೩೭೦ ಕೋಟಿ ಖರ್ಚಾಗಿದ್ದು, ಸಂಡೂರಲ್ಲಿ ಖರ್ಚಾಗಿರುವುದು ಕೇವಲ ₹೧೦ ಕೋಟಿ ಮಾತ್ರಕನ್ನಡಪ್ರಭ ವಾರ್ತೆ ಸಂಡೂರುಕೆಎಂಇಆರ್ಸಿ (ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ)ವು ಗಣಿ ಬಾಧಿತ ಪ್ರದೇಶದ ಜನರ ಜೀವನ ಮಟ್ಟವನ್ನು ಸುಧಾರಿಸಲು, ಜನ ಬದುಕನ್ನು ಕಟ್ಟಲು ಉತ್ತಮ ಅವಕಾಶವಾಗಿದೆ. ಆದ್ದರಿಂದ ಅಧಿಕಾರಿಗಳು ಗಣಿ ಬಾಧಿತ ಪ್ರದೇಶದ ಅಭಿವೃದ್ಧಿಗೆ ಸಮಗ್ರವಾದ ಯೋಜನೆಯನ್ನು ರೂಪಿಸಿ ಕಾರ್ಯಗತಗೊಳಿಸಬೇಕು ಎಂದು ಕೆಎಂಇಆರ್‌ಸಿ ಅಧ್ಯಕ್ಷರೂ ಹಾಗೂ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ತಿಳಿಸಿದರು.
ತಾಲೂಕಿನ ದೋಣಿಮಲೈನಲ್ಲಿನ ಸಭಾಂಗಣದಲ್ಲಿ ಗಣಿ ಬಾಧಿತ ಪ್ರದೇಶದ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಬೇಕಾದ ಯೋಜನೆಗಳ ಕುರಿತು ಹಮ್ಮಿಕೊಂಡಿದ್ದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಮಾದರಿ ಅಂಗನವಾಡಿ ನಿರ್ಮಿಸಬೇಕು. ಶಾಲಾ-ಕಾಲೇಜು ಅಭಿವೃದ್ದಿ ಪಡಿಸಿ, ಅಲ್ಲಿ ನೀರು, ಶೌಚಾಲಯ, ಆಟದ ಮೈದಾನ ಮುಂತಾದ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು. ಆರೋಗ್ಯ, ಕೌಶಲ್ಯಾಭಿವೃದ್ಧಿ, ಮಹಿಳಾ ಶಿಕ್ಷಣ ಮತ್ತು ಸಬಲೀಕರಣಕ್ಕೆ ಒತ್ತು ನೀಡಬೇಕು ಎಂದರು.
ಕೆಎಂಇಆರ್‌ಸಿ ಮೇಲ್ವಿಚಾರಣಾ ಪ್ರಾಧಿಕಾರದ ಸಲಹೆಗಾರ ಬಾಲಸುಬ್ರಮಣಿಯನ್ ಮಾತನಾಡಿ, ಸಂಡೂರು ತಾಲೂಕು ಪ್ರಮುಖ ಗಣಿ ಬಾಧಿತ ತಾಲೂಕಾಗಿದೆ. ಕೆಎಂಇಆರ್‌ಸಿಯಲ್ಲಿ ₹೩೦೦೦೦ ಕೋಟಿ ಹಣವಿದೆ. ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಈ ಹಣ ಬಳಕೆಯಾಗಬೇಕಿದೆ. ನಾಲ್ಕು ಜಿಲ್ಲೆಗಳಲ್ಲಿ ಒಟ್ಟು ೧೦ ತಾಲೂಕುಗಳು ಗಣಿ ಬಾಧಿತ ತಾಲೂಕುಗಳೆಂದು ಗುರುತಿಸಲ್ಪಟ್ಟಿವೆ. ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ ಮತ್ತು ಸಂಡೂರು ಗಣಿ ಬಾಧಿತ ತಾಲೂಕುಗಳಾಗಿವೆ. ಇವುಗಳ ಅಭಿವೃದ್ಧಿಗೆ ಸಮಗ್ರ ಯೋಜನೆಯನ್ನು ರೂಪಿಸಬೇಕಿದೆ ಎಂದರು.ಕೆಎಂಇಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಬಿಜ್ಜೂರ್ ಮಾತನಾಡಿ, ಸಂಡೂರು ತಾಲೂಕು ಪ್ರಮುಖ ಗಣಿ ಬಾಧಿತ ಪ್ರದೇಶವಾಗಿದೆ. ಆದರೆ, ಈವರೆಗೆ ಇಲ್ಲಿನ ಅಭಿವೃದ್ಧಿ ಕುರಿತಂತೆ ಹೆಚ್ಚಿನ ಪ್ರಸ್ತಾವಗಳು ಬಂದಿಲ್ಲ. ಕೆಎಂಇಆರ್‌ಸಿ ವತಿಯಿಂದ ಈಗಾಗಲೇ ₹೩೭೦ ಕೋಟಿ ಖರ್ಚಾಗಿದೆ. ಇದರಲ್ಲಿ ಸಂಡೂರು ತಾಲೂಕಿನಲ್ಲಿ ಖರ್ಚಾಗಿರುವುದು ಕೇವಲ ₹೧೦ ಕೋಟಿ ಮಾತ್ರ. ಅಂದರೆ, ಈವರಗಿನ ಒಟ್ಟು ಖರ್ಚಿನಲ್ಲಿ ಶೇ .೭೦ ರಷ್ಟು ಗಣಿ ಬಾಧಿತವಾದ ಪ್ರದೇಶದಲ್ಲಿ ಶೇ. ೪ರಷ್ಟು ಹಣ ಮಾತ್ರ ಖರ್ಚಾಗಿದೆ. ಆರೋಗ್ಯ ಕ್ಷೇತ್ರದ ಸುಧಾರಣೆಗೆ ಸಂಬಂಧಿಸಿದಂತೆ ಈವರೆಗೆ ಬಂದಿರುವ ಪ್ರಸ್ತಾವಗಳು ಸಾಕಾಗುವಷ್ಟಿಲ್ಲ ಎಂದರು.
ಈವರೆಗೆ ನಾಲ್ಕು ಜಿಲ್ಲೆಗಳು ಸೇರಿ ಒಟ್ಟು ೯೩೪೫ ಕೋಟಿ ವೆಚ್ಚದ ಯೋಜನೆಗಳ ಪ್ರಸ್ತಾವ ಬಂದಿವೆ. ಇವುಗಳಲ್ಲಿ ೩೨೫೧ ಕೋಟಿ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದ್ದಾಗಿದೆ. ಈವರೆಗೆ ೨೦೦೦ ಕೋಟಿ ವೆಚ್ಚದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದರು.ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಉಮಾದೇವಿ ಮಾತನಾಡಿ, ಬಳ್ಳಾರಿ ತಾಲೂಕಿನಲ್ಲಿ ೧೦೧ ಹಾಗೂ ಸಂಡೂರು ತಾಲೂಕಿನಲ್ಲಿ ೧೪೨ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ನರೇಗಾ ಮತ್ತು ಕೆಎಂಇಆರ್‌ಸಿ ಅನುದಾನದಲ್ಲಿ ಶಾಲೆಗಳಲ್ಲಿ ಮಕ್ಕಳ ಸಂಖೆಗೆ ಅನುಗುಣವಾಗಿ ಶೌಚಾಲಯ, ಸಂಪ್ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗಿದೆ. ಕೆಎಂಇಆರ್‌ಸಿಯ ಮಾರ್ಗಸೂಚಿಯಂತೆ ಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅನುಮೋದನೆ:ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಮೇಶ್ ಬಾಬು ವೈ. ಮಾತನಾಡಿ, ತಾಲೂಕಿನಲ್ಲಿ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅನುಮೋದನೆ ದೊರೆತಿದ್ದು, ಅವುಗಳ ನಿರ್ಮಾಣಕ್ಕೆ ಇನ್ನು ಹತ್ತು ದಿನಗಳಲ್ಲಿ ಟೆಂಡರ್ ಕರೆಯಲಾಗುವುದು. ತಾಲೂಕು ಕೇಂದ್ರದಲ್ಲಿನ ೧೦೦ ಬೆಡ್ ಆಸ್ಪತ್ರೆಯನ್ನು ೧೫೦ ಬೆಡ್ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಮರು ಪ್ರಸ್ತಾವ ಸಲ್ಲಿಸುವುದಾಗಿ ತಿಳಿಸಿದರು.
ಸಭೆಗೂ ಮುಂಚೆ ಅಧಿಕಾರಿಗಳು ಲಕ್ಷ್ಮೀಪುರ, ತಾರಾನಗರ ಮುಂತಾದೆಡೆಯ ಶಾಲೆ, ಅಂಗನವಾಡಿ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಮೂಲ ಸೌಕರ್ಯ ಪರಿಶೀಲಿಸಿದರು.ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ, ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್, ತಹಶೀಲ್ದಾರ್ ಜಿ. ಅನಿಲ್‌ಕುಮಾರ್, ತಾಪಂ ಇಒ ರೇಣುಕಾಚಾರ್ಯಸ್ವಾಮಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.