ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಎಲ್ಲ ಸರ್ಕಾರಿ ನೌಕರರು ಹಾಗೂ ನಿವೃತ್ತ ಸರ್ಕಾರಿ ನೌಕರರಿಗಾಗಿ ಪರಿಷ್ಕೃತ 7ನೇ ವೇತನ ಜಾರಿ ಸಂದರ್ಭ ಉಂಟಾಗಿರುವ ವೇತನ ತಾರತಮ್ಯವನ್ನು ಸರ್ಕಾರ ತಕ್ಷಣ ಸರಿಪಡಿಸಬೇಕೆಂದು ಕರ್ನಾಟಕ ನಿವೃತ್ತ ನೌಕರರ ವೇದಿಕೆ ಕೊಡಗು ಜಿಲ್ಲಾ ಘಟಕ ಆಗ್ರಹಿಸಿದೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಪಿ.ಎಸ್.ಜನಾರ್ದನ್, 7ನೇ ವೇತನ ಜಾರಿ ಸ್ವಾಗತಾರ್ಹ ಕ್ರಮವಾಗಿದೆ. ಆದರೆ ನಿವೃತ್ತ ನೌಕರರಿಗೆ ಕೆಲವು ಸೌಲಭ್ಯಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸೇವೆಯಲ್ಲಿರುವ ನೌಕರರಿಗೆ ನೀಡುವ ಸೌಲಭ್ಯಗಳನ್ನೇ ನಿವೃತ್ತರಿಗೂ ನೀಡಬೇಕೆಂದು ಆಗ್ರಹಿಸಿದರು.
ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ನಿಗದಿಪಡಿಸಲಾದ ಕಾಲ್ಪನಿಕ ವೇತನವನ್ನು ನಿವೃತ್ತಿ ವೇತನ, ಕುಟುಂಬ ನಿವೃತ್ತಿ ವೇತನದ ಪುನರ್ ನಿಗದಿಯ ಆರ್ಥಿಕ ಲಾಭ ನಿವೃತ್ತಿ ಹೊಂದಿದ ಸರ್ಕಾರಿ ನೌಕರನಿಗೆ ಅಥವಾ ಮರಣ ಹೊಂದಿದ ಸರ್ಕಾರಿ ನೌಕರನ ಪಲಾನುಭವಿಗಳಿಗೆ 2024 ಆ.1 ರಿಂದ ಲಭಿಸಬೇಕು. ಆದರೆ 2022 ಜು.1ರಿಂದ 2024 ಜು.31ರವರೆಗೆ ಅಂದರೆ ಕಳೆದ 25 ತಿಂಗಳ ಅವಧಿಯಲ್ಲಿ ನಿವೃತ್ತರಾದ, ನಿಧನ ಹೊಂದಿದ ಅಧಿಕಾರಿಹಾಗೂ ನೌಕರನಿಗೆ ಪರಿಷ್ಕೃತ ವೇತನದನ್ವಯ ಡಿ.ಸಿ.ಆರ್.ಜಿ, ಕಮ್ಯೂಟೇಷನ್, ರಜೆ ನಗದೀಕರಣ ಲೆಕ್ಕಚಾರ ಮಾಡದೆ ಹಳೆಯ ವೇತನ ಶ್ರೇಣಿಯ ಮೇಲೆಯೇ ಪರಿಗಣಿಸುತ್ತಿರುವುದು ಆಘಾತ ಉಂಟು ಮಾಡಿದೆ ಎಂದರು.
2022 ಜು.1ರಿಂದ ನಿವೃತ್ತಿ ವೇತನದ ಸೌಲಭ್ಯ ನೀಡಿದಂತೆ 7ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದಲ್ಲಿ ನಿವೃತ್ತಿಯ ಆರ್ಥಿಕ ಉಪ ದಾನಗಳ ಸೌಲಭ್ಯಗಳನ್ನು ಪಡೆಯುವ ಅರ್ಹತೆ ಹೊಂದಿದ್ದೇವೆ. ನಿವೃತ್ತಿ ವೇತನದ ವ್ಯತ್ಯಾಸದ ಬಾಕಿ ಕೇಳುತ್ತಿಲ್ಲ. ಬದಲಿಗೆ 7ನೇ ವೇತನ ಆಯೋಗದ ವರದಿ ಪ್ರಕಾರ ಪರಿಷ್ಕೃತ ವೇತನದ ಮೇಲೆ ನಿವೃತ್ತಿ ಆರ್ಥಿಕ ಸೌಲಭ್ಯಗಳಾದ ಡಿ.ಸಿ.ಆರ್.ಜಿ, ಕಮ್ಯೂಟೇಷನ್ ಮತ್ತು ರಜೆ ನಗದೀಕರಣ ನೀಡಬೇಕು ಎಂದರು.2022ರ ಜು.1 ರಿಂದ 2024 ರ ಜು.31 ರವರೆಗಿನ ಸೀಮಿತ ಅವಧಿಯಲ್ಲಿ ರಾಜ್ಯವ್ಯಾಪಿ 5 ರಿಂದ 6 ಸಾವಿರ ಮಂದಿ ನಿವೃತ್ತರಾಗಿದ್ದಾರೆ. ಜಿಲ್ಲೆಯಲ್ಲಿ ಈ ಅವಧಿಯಲ್ಲಿ ಸುಮಾರು 300 ಮಂದಿ ನಿವೃತ್ತರಾಗಿದ್ದು, ಇವರು ಏಳನೇ ವೇತನ ಆಯೋಗದ ವೇತನ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದರಿಂದ ನಿವೃತ್ತರು ಸರಾಸರಿ 10-20 ಲಕ್ಷ ರು.ಗಳ ವರೆಗೆ ನಷ್ಟಕ್ಕೆ ಒಳಗಾಗಿರುವುದಾಗಿ ಮಾಹಿತಿಯನ್ನಿತ್ತರು. ಉಪಾಧ್ಯಕ್ಷ ಜಿ.ಎಂ.ಚನ್ನಯ್ಯ, ಪ್ರಧಾನ ಕಾರ್ಯದರ್ಶಿ ಸುಕ್ಕು ದೇವು ಗೌಡ, ಸೋಮವಾರಪೇಟೆ ತಾಲೂಕು ಸಂಚಾಲಕರಾದ ಎ.ಎಂ.ಆನಂದ, ಚಾವಡಿ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.