ವ್ಯಸನ ಮುಕ್ತ ಸಮಾಜಕ್ಕಾಗಿ ಮುಂದಾಗಿ

| Published : Aug 02 2025, 12:15 AM IST

ಸಾರಾಂಶ

ಭವ್ಯ ಭಾರತದ ಭವಿಷ್ಯ ರೂಪಿಸಬೇಕಾಗಿರುವ ಯುವ ಸಮೂಹ ವ್ಯಸನಿಗಳ ಸಹವಾಸ ಹಾಗೂ ಮೋಜು ಮಸ್ತಿಗಾಗಿ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ಭವ್ಯ ಭಾರತದ ಭವಿಷ್ಯ ರೂಪಿಸಬೇಕಾಗಿರುವ ಯುವ ಸಮೂಹ ವ್ಯಸನಿಗಳ ಸಹವಾಸ ಹಾಗೂ ಮೋಜು ಮಸ್ತಿಗಾಗಿ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಕಳವಳ ವ್ಯಕ್ತಪಡಿಸಿದರು.ತಾಲೂಕಿನ ಮಾಲಾಬಾದ ವಿಮೋಚನಾ ಶಿಕ್ಷಣ ಸಂಸ್ಥೆಯಲ್ಲಿ ಲಿಂ.ಮಹಾಂತ ಸ್ವಾಮೀಜಿಯವರ 95ನೇ ಜಯಂತಿ ಅಂಗವಾಗಿ ಹಮ್ಮಿಕೊಂಡ ಪ್ರಸನ್ನ ಮುಕ್ತ ದಿನಾಚರಣೆ ಹಾಗೂ ಮಹಾಂತ ಮಂದಾರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನಲ್ಲಿಯೇ ಭಾರತವನ್ನು ಯಂಗ್ ಇಂಡಿಯಾ ಎನ್ನುತ್ತಾರೆ. ಸದೃಢ ಭಾರತವನ್ನು ಆರೋಗ್ಯವಂತ ಸಮಾಜ ಕಟ್ಟಲು ಯುವಕರು ಮತ್ತು ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ವ್ಯಸನ ಮುಕ್ತ ಸಮಾಜಕ್ಕಾಗಿ ಮುಂದಾಗಬೇಕು ಎಂದು ಸಲಹೆ ನೀಡಿದರು.

ಸಾಹಿತಿ ಡಾ.ವಿ.ಎಸ್.ಮಾಳಿ ಮಾತನಾಡಿ, ಸನ್ಮಾರ್ಗದಲ್ಲಿ ನಡೆಯಬೇಕಾದ ಇಂದಿನ ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಮಹಾಂತಪ್ಪಗಳ ಆದರ್ಶವನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿ ಯುವ ಜನಾಂಗ ಮುಂದಾಗಬೇಕು. ವಿದ್ಯಾರ್ಥಿಗಳು ಮಾದಕ ವಸ್ತುಗಳ ವಿರುದ್ಧ ಪ್ರಚಾರಕರಾಗಿ ತಮ್ಮ ತಮ್ಮ ಮನೆಗಳಿಂದಲೇ ದುಶ್ಚಟ ಬಿಡಿಸಲು ಆರಂಭಿಸಬೇಕು ಎಂದು ತಿಳಿಸಿದರು.

ಕವಲಗುಡ್ಡ ಹಣಮಾಪುರ ಸಿದ್ದಾಶ್ರಮದ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಮ್ಮ ಬದುಕು ಇನ್ನೊಬ್ಬರಿಗೆ ಆದರ್ಶವಾಗಬೇಕು. ಒಳ್ಳೆಯ ಶಿಕ್ಷಣ ಮತ್ತು ಸಂಸ್ಕಾರ ಇಂದಿನ ಮಕ್ಕಳಿಗೆ ನೀಡುವ ಮೂಲಕ ದುಶ್ಚಟಗಳಿಗೆ ಬಲಿಯಾಗದಂತೆ ಮಕ್ಕಳನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಪಾಲಕರ ಕರ್ತವ್ಯವಾಗಿದೆ. ಯುವಕರು ಕೂಡ ದುರ್ಜನರ ಸಂಗ ಮಾಡಿ ಕ್ಷಣಿಕ ಸುಖಕ್ಕೆ ಬದುಕನ್ನು ಬಲಿಕೊಡದೇ ಎಚ್ಚರದಿಂದಿದ್ದು ದೇಶದ ಸತ್ಪ್ರಜೆಗಳಾಗಿ ಬದುಕು ನಡೆಸಬೇಕು. ವ್ಯಸನ ಮುಕ್ತ ಸಮಾಜಕ್ಕಾಗಿ ಎಲ್ಲರೂ ಸಂಘಟಿತರಾಗಿ ಕೈ ಜೋಡಿಸಲು ಕಂಕಣಬದ್ಧರಾಗಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬೆಳಗಾವಿಯ ಹಿರಿಯ ಸಾಹಿತಿ, ಚಿಂತಕ ಬಸವರಾಜ ಜಗಜಂಪಿ, ಅಥಣಿಯ ವೈದ್ಯ ಡಾ.ರಾಮ ಕುಲಕರ್ಣಿ, ಧಾರವಾಡದ ಡಾ.ಸಂಜೀವ ಕುಲಕರ್ಣಿ, ಸಮಾಜ ಸೇವಕ ಶಂಕರ ಕುಂಬಿ ಹಾಗೂ ಅನಂತಪುರ ಗ್ರಾಮದ ಡಾ.ಶಿವಕುಮಾರ ಕಲ್ಯಾಣಮಠ ಅವರಿಗೆ ಮಹಾಂತ ಮಂದಾರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮಾಲಾಬಾದ ಗ್ರಾಮದ ಹಿರಿಯರಾದ ಅಣ್ಣಪ್ಪ ಕುಳ್ಳೊಳ್ಳಿ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಿಮೋಚನಾ ಸಂಸ್ಥೆಯ ಸದಸ್ಯ ಅನಿಲ ದೇಶಪಾಂಡೆ ವಹಿಸಿದ್ದರು.

ಈ ಸಂದರ್ಭದಲ್ಲಿ ವಿಮೋಚನಾ ಸಂಸ್ಥೆಯ ಅಧ್ಯಕ್ಷ, ಬಿ.ಎಲ್.ಪಾಟೀಲ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಎಮಿನೆಂಟ್‌ ಇಂಜನಿಯರ್‌ ಅವಾರ್ಡ್‌ ಪುರಸ್ಕೃತ ಅರುಣ್ ಯಲಗುದ್ರಿ, ಮಂಜುನಾಥ ಪಾಟೀಲ, ಐ.ಬಿ.ಪಾಟೀಲ, ಮಲ್ಲಿಕಾರ್ಜುನ ಕನಶೆಟ್ಟಿ, ಎಲ್.ವಿ.ಕುಲಕರ್ಣಿ, ಎ.ಎಸ್.ಬೇರಡ ಸೇರಿದಂತೆ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿಮೋಚನಾ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯ ಬಿ.ಟಿ.ಅವಟಿ ಸ್ವಾಗತಿಸಿದರು. ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ.ಎಲ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕು.ಸೌಂದರ್ಯ ಕುಳ್ಳೊಳ್ಳಿ, ಸಮೀಕ್ಷಾ ಸನದಿ ಕಾರ್ಯಕ್ರಮ ನಿರೂಪಿಸಿದರು. ಕು.ಪೂಜಾ ಪೂಜಾರಿ ವಂದಿಸಿದರು. ಮಹಾಂತ ಜೋಳಗಿಯ ಮೂಲಕ ಲಿಂ.ಮಹಾಂತ ಸ್ವಾಮೀಜಿಯವರು ಜನರ ದುಶ್ಚಟಗಳನ್ನು ಬಿಡಿಸುವ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಶ್ರಮಿಸಿದವರು. ಅವರ ಆದರ್ಶಗಳು ನಮ್ಮೆಲ್ಲರಿಗೆ ಸ್ಫೂರ್ತಿಯಾಗಬೇಕು.

-ಡಾ.ಬಾಳಾಸಾಹೇಬ ಲೋಕಾಪುರ,

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.