ಈ ವರ್ಷ ‘ನಮ್ಮ ನಡೆ ವಿಜ್ಞಾನದ ಕಡೆ’ ಎಂಬ ಆಶಯದೊಂದಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯಮಟ್ಟದ ‘ಅಕ್ಷರಚಿಗುರು’ ಕಾರ್ಯಕ್ರಮದ ಮೂಲಕ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಪುಸ್ತಕ ಓದುವ ಅಭ್ಯಾಸ ಬೆಳೆಸಲು ಕರೆ ನೀಡಲಾಗುತ್ತಿದೆ. ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ೨೦೦ ಸಾಧಕರನ್ನು ಗುರುತಿಸಿ, ಅವರ ಕುರಿತು ೨೦೦ ಪುಸ್ತಕಗಳನ್ನು ಹೊರತಂದು ರಾಜ್ಯದ ಮನೆಮನೆಗೂ ತಲುಪಿಸುವ ಗುರಿಯನ್ನು ಪರಿಷತ್ತು ಹೊಂದಿದೆ. ಇದೇ ಡಿಸೆಂಬರ್ ೨೮, ೨೯ ಮತ್ತು ೩೦ರಂದು ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನ ಆಯೋಜಿಸಲಾಗಿದೆ. ರಾಜ್ಯದ ವಿವಿಧ ವಿಭಾಗಗಳಲ್ಲಿ ವೈಜ್ಞಾನಿಕ ಜಾಗೃತಿ ಮೂಡಿಸಲು ತಲಾ ೧೦೦ ಮಂದಿಗೆ ತರಬೇತಿ ನೀಡಿ, ಅವರ ಮೂಲಕ ರಾಜ್ಯಾದ್ಯಂತ ವೈಜ್ಞಾನಿಕ ಜಾಗೃತಿ ಅಭಿಯಾನ ನಡೆಸಲಾಗುವುದು. ಡಿಸೆಂಬರ್ ೨೯ರಂದು ಬೆಳಗಾವಿಯಲ್ಲಿ ಸಮ್ಮೇಳನದ ಪ್ರಮುಖ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಹೊಸಕೋಟೆ
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸ್ಥಾಪನೆಯಾಗಿ ಆರು ವರ್ಷ ಪೂರ್ಣಗೊಂಡಿದ್ದು, ರಾಜ್ಯಾದ್ಯಂತ ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸಂಘಟನೆ ಬಲಪಡಿಸಿಕೊಂಡಿದೆ. ಪ್ರಸ್ತುತ ಪರಿಷತ್ತು ೪೭ ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿದ್ದು, ವೈಜ್ಞಾನಿಕ ಮನೋಭಾವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜು ತಿಳಿಸಿದರು.ನಗರದ ಖಾಸಗಿ ಸಭಾ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಎಂ.ಆರ್. ಉಮೇಶ್ ಅವರು ಪರಿಷತ್ತಿನ ಬೈಲಾ ಅನ್ವಯ ತಮ್ಮ ಐದು ವರ್ಷದ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಈ ಹಿನ್ನೆಲೆ ಜಿಲ್ಲೆಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಸರ್ವಾನುಮತದಿಂದ ತರಬಹಳ್ಳಿ ಮಂಜುನಾಥ್ ಟಿ.ವೈ. ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರನ್ನಾಗಿ 5 ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ತಾವರೆಕೆರೆ ತೇಜಸ್, ಕೋಶಾಧಿಕಾರಿಯಾಗಿ ಶಶಿಕಲಾ, ಹೊಸಕೋಟೆ ತಾಲೂಕು ಅಧ್ಯಕ್ಷರಾಗಿ ಮಂಜುನಾಥ್, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷರಾಗಿ ಚೈತ್ರಾ ಬಾಬು, ದೇವನಹಳ್ಳಿ ತಾಲೂಕು ಅಧ್ಯಕ್ಷರಾಗಿ ರಾಧಾ ಹಾಗೂ ನೆಲಮಂಗಲ ತಾಲೂಕು ಅಧ್ಯಕ್ಷರಾಗಿ ವಿಜಯಕುಮಾರ್ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದರು.ಕರಾವೈಸಂ ಪರಿಷತ್ ಉಪಾಧ್ಯಕ್ಷ ಡಾ.ಆಂಜಿನಪ್ಪ ಮಾತನಾಡಿ, ಪರಿಷತ್ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಜತೆಗೆ ಮೂಢನಂಬಿಕೆ ಹಾಗೂ ಮೂಢಾಚರಣೆಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ತಂತ್ರಜ್ಞಾನ ದಿನದಿಂದ ದಿನಕ್ಕೆ ಆಧುನಿಕವಾಗುತ್ತಿದ್ದರೂ ಮನುಷ್ಯನ ಮನಸ್ಸುಗಳು ಮಾತ್ರ ಹಳೆಯ ನಂಬಿಕೆಗಳಿಗೆ ಸಿಲುಕಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಡಾಂಭಿಕತೆಗಿಂತ ವಿಜ್ಞಾನ ಮತ್ತು ಮಾನವೀಯತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ನಿಜವಾದ ಧರ್ಮವೆಂದರೆ ಮಾನವೀಯತೆ ಎಂಬ ಸಂದೇಶವನ್ನು ಜನರಲ್ಲಿ ಮೂಡಿಸುವುದು ಪರಿಷತ್ತಿನ ಪ್ರಮುಖ ಉದ್ದೇಶವಾಗಿದೆ ಎಂದರು.
ಪರಿಷತ್ ರಾಜ್ಯ ನಿರ್ದೇಶಕಿ ಸಿದ್ದಲಿಂಗಮ್ಮ, ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ, ಜಿಲ್ಲಾ ಗೌರವಾಧ್ಯಕ್ಷ ಸೂಲಿಬೆಲೆ ಎಂ.ಆರ್. ಉಮೇಶ್ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.ಮೊಬೈಲ್ ಬಿಡಿ, ಪುಸ್ತಕ ಹಿಡಿ ಅಭಿಯಾನ: