ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು ಸಮುದಾಯದ ಭಾಷೆ ಅನ್ನ ನೀಡುವ ಭಾಷೆಯಾದಾಗ ಮಾತ್ರ ಭಾಷೆ ಮತ್ತು ಭಾಷಿಕ ಉಳಿಯಲು ಸಾಧ್ಯವಾಗುತ್ತದೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಅಭಿಪ್ರಾಯಪಟ್ಟರು. ಪಟ್ಟಣದ ಟ್ಯಾಲೆಂಟ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಕುವೆಂಪು ಮಕ್ಕಳ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯ ಪರಿಸ್ಥಿತಿ ಇದಕ್ಕಿಂತ ಮಿಗಿಲಾಗಿಲ್ಲ. ರಷ್ಯಾ, ಜರ್ಮನಿ, ಜಪಾನ್, ಫ್ರಾನ್ಸ್ ನಂತಹ ವೈಜ್ಞಾನಿಕವಾಗಿ ಮುಂದುವರೆದ ದೇಶಗಳಲ್ಲಿ ಇಂಗ್ಲೀಷ್ ಭಾಷೆಯ ಪಾರಮ್ಯವಿಲ್ಲದೆ ಆಯಾ ದೇಶಗಳ ಪ್ರಾದೇಶಿಕ ಭಾಷೆಗಳಲ್ಲೆ ವಿಜ್ಞಾನವನ್ನು ಬೋಧಿಸಲಾಗುತ್ತದೆ ಎಂದರು. ಕರ್ನಾಟಕ ರಾಜ್ಯಕ್ಕೆ ಹೊರದೇಶಗಳಿಂದ ಮತ್ತು ಹೊರ ರಾಜ್ಯಗಳಿಂದ ಬರುತ್ತಿರುವ ವಲಸೆಗಾರರು ಮತ್ತು ನುಸುಳುಕೋರರ ದೆಸೆಯಿಂದಾಗಿ ರಾಜ್ಯದ ರಾಜಧಾನಿ ಬೆಂಗಳೂರಿನಂತಹ ಬೃಹತ್ ನಗರದಲ್ಲಿ ಕನ್ನಡ ಭಾಷಿಕರ ಸಂಖ್ಯೆ ದಿನೇ ದಿನೇ ಕುಸಿಯುತ್ತಿದ್ದು, ಅಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುವ ಅಪಾಯವಿದೆ. ಸರ್ಕಾರ ನಡೆಸುವ ಜನ ಇದನ್ನು ತಡೆಗಟ್ಟುವ ಹಾದಿಯಲ್ಲಿ ತೀವ್ರ ಪ್ರಯತ್ನ ಹಾಕಬೇಕು. ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ಪುಸ್ತಕಗಳನ್ನು ಓದುವುದರ ಮೂಲಕ ಕನ್ನಡವನ್ನು ಉಳಿಸಬೇಕಿದೆ. ಮಾತೃಭಾಷೆ ವ್ಯಕ್ತಿಯ ಅನ್ನಕ್ಕೆ ದಾರಿಯಾದಲ್ಲಿ ಆತ ಯಾವುದೇ ಕಾರಣಕ್ಕೂ ತನ್ನ ಭಾಷೆಯನ್ನು ಬಿಟ್ಟುಕೊಡಲಾರ. ಅನ್ನ ನೀಡುವ ಶಕ್ತಿ ಕನ್ನಡ ಭಾಷೆಗಿದೆ. ಅದರ ಸದುಪಯೋಗ ಕನ್ನಡಿಗರಿಂದ ಆಗಬೇಕಿದೆ ಎಂದರು. ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹದೇವ್ ಮಾತನಾಡಿ, ಕನ್ನಡ ಭಾಷೆ ಶ್ರೀಮಂತ ಭಾಷೆಯಾಗಿದ್ದು, ಸಾವಿರಾರು ಕವಿ, ಸಾಹಿತಿಗಳು ನಾಡಿನ ಸಾಹಿತ್ಯಿಕ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.ವಿದ್ಯಾಸಂಸ್ಥೆಯ ನಿರ್ದೇಶಕ ನವೀನ್ ರೈ ಮಾತನಾಡಿ, ಕನ್ನಡದ ಕೆಲಸವನ್ನು ತಪಸ್ಸಿನಂತೆ ಮಾಡಬೇಕು. ವರ್ಷವಿಡೀ ಕಾರ್ಯಕ್ರಮಗಳು ನಡೆಯಬೇಕು. ಹಾಗಾದಲ್ಲಿ ಮಾತ್ರ ಕನ್ನಡದ ಅಭಿವೃದ್ಧಿ ಸಾಧ್ಯವಾಗುತ್ತದೆ. ಕನ್ನಡದ ಕೆಲಸಕ್ಕೆ ಎಲ್ಲರೂ ಬದ್ಧರಾಗಿರಬೇಕೆಂದರು.ಕಾಲೇಜಿನ ಪ್ರಾಂಶುಪಾಲ ಮಂಜುನಾಥ್, ಸಂಸ್ಥೆಯ ನಿರ್ದೇಶಕ ಆರ್.ಎನ್. ಮಂಜುನಾಥ್, ಉಪನ್ಯಾಸಕರಾದ ಪರ್ವಿನ್ ತಾಜ್, ಶಶಿಕಲಾ, ಎಸ್.ಎನ್. ಮಂಜುನಾಥ್. ಡಿ. ಅನುಷಾ , ವಿನುತಾ ಇದ್ದರು.ಕುವೆಂಪು ಮಕ್ಕಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಎಂ.ಪಿ. ಪ್ರಗತಿ, ಉಪಾಧ್ಯಕ್ಷರಾಗಿ ನಾಗಮಣಿ, ಕಾರ್ಯದರ್ಶಿಯಾಗಿ ಆದಿತ್ಯ, ಖಜಾಂಚಿಯಾಗಿ ಹೇಮಲತಾ ಮತ್ತು ಸಂಚಾಲಕರಾಗಿ ಸಂತೋಷ್, ಡಿ. ಮೌಲ್ಯ ಅಧಿಕಾರ ಸ್ವೀಕರಿಸಿದರು.
;Resize=(128,128))
;Resize=(128,128))
;Resize=(128,128))