ಸಾರಾಂಶ
ಹೊಸದುರ್ಗ: ಪ್ರವಾಹ ನಿಯಂತ್ರಣ ಸಂಬಂಧ ವಿವಿ ಸಾಗರದ ಜಲಾಶಯದ ಕೋಡಿ ಬಳಿ ಕ್ರಸ್ಟ್ ಗೇಟ್ ಅಳವಡಿಕೆಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ಹೊಸದುರ್ಗ ಹಾಗೂ ಹಿರಿಯೂರು ತಾಲೂಕಿನ ಕೆಲ ರೈತ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣದಿಂದ ಕ್ರಸ್ಟ್ ಗೇಟ್ ಅಳವಡಿಕೆಗೆ ಅವಕಾಶಕೊಡುವುದಿಲ್ಲ. ಕೋಡಿ ಮೂಲಕ ಹೊರ ಹೋಗುವ ಹೆಚ್ಚುವರಿ ನೀರು ಬಳಕೆಗೆ ಹೊಸದುರ್ಗ ತಾಲೂಕಿನಲ್ಲಿ ಪರ್ಯಾಯ ಬ್ಯಾರೇಜ್ ನಿರ್ಮಿಸಿ ಎಡ ಮತ್ತು ಬಲ ಭಾಗದ ಕೆರೆಗಳ ತುಂಬಿಸುವಂತೆ ಸಲಹೆ ಮಾಡಿದ್ದಾರೆ. ಪಟ್ಟಣದ ಎಪಿಎಂಸಿ ಸಭಾ ಭವನದಲ್ಲಿ ಶನಿವಾರ ವಿವಿ ಸಾಗರಕ್ಕೆ ಕ್ರಸ್ಟ್ ಗೇಟ್ ಅಳವಡಿಸುವುದರ ಸಾಧಕ - ಬಾಧಕಗಳ ಕುರಿತು ಚಿಂತನಾ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡ ಈಚಘಟ್ಟದ ಸಿದ್ದವೀರಪ್ಪ, ಕ್ರಸ್ಟ್ ಗೇಟ್ ಅಳವಡಿಸುವ ವೆಚ್ಚದಲ್ಲಿಯೇ ಬ್ಯಾರೇಜ್ ನಿರ್ಮಿಸಬಹುದು. ಕೆರೆಗಳ ನಿರ್ಮಿಸುವುದರಿಂದ ರೈತಾಪಿ ಸಮುದಾಯಕ್ಕೆ ಅನುಕೂಲವಾಗುತ್ತದೆ ಎಂದರು. ವಿವಿ ಸಾಗರದ ಜಲಾಶಯದ ನೀರಿನ ಸಂಗ್ರಹ ಮಟ್ಟ 130 ಅಡಿಯಷ್ಟಿದೆ. ಇದೇ ಎತ್ತರಕ್ಕೆ ಕೋಡಿ ಅಳವಡಿಸಲಾಗಿದೆ. ವೇದಾವತಿ ನದಿ ಹೊಸದುರ್ಗದ ಮೂಲಕವೇ ವಿವಿ ಸಾಗರ ತಲುಪುತ್ತದೆ. ಡ್ಯಾಂನಲ್ಲಿ ನೀರಿನ ಸಂಗ್ರಹ 126 ಅಡಿ ದಾಟುತ್ತಿದ್ದಂತೆ ಹೊಸದಾಗಿ ನಿರ್ಮಿಸುವ ಬ್ಯಾರೇಜ್‌ನಿಂದ ನೀರನ್ನು ಲಿಫ್ಟ್ ಮಾಡುವ ಕೆಲಸ ಆರಂಭಿಸಬೇಕು. ವೇದಾವತಿ ನದಿಯ ಎರಡೂ ದಂಡೆಗಳಲ್ಲಿ ಬರುವ ಕೆರೆಗಳ ತುಂಬಿಸಬೇಕು. ಆಗ ಕೋಡಿ ಮೇಲ್ಬಾಗ ನೀರು ಹರಿದು ವ್ಯರ್ಥವಾಗುವುದಿಲ್ಲ ಎಂದು ತಿಳಿಸಿದರು. ವಿವಿ ಸಾಗರ ಹಿನ್ನೀರಿನ ರೈತರಿಗೆ ಡ್ಯಾಂ ನ ನೀರಿನಿಂದ ಯಾವುದೇ ತೊಂದರೆಯಾಗಿಲ್ಲ. ಕೆಲವರು ವಿವಿ ಸಾಗರ ಹಿನ್ನೀರು ಸಂಗ್ರಹವಾಗುವ ಗಡಿ ದಾಟಿ ಒಳ ಬಂದು ಉಳುಮೆ ಮಾಡಿ ತೋಟಗಳ ನಿರ್ಮಿಸಿದ್ದಾರೆ. ಭ್ರಷ್ಟಾಚಾರ ವೆಸಗಿ ಪಟ್ಟಗಳ ಪಡೆದಿದ್ದಾರೆ. ಈ ರೀತಿ ಮುಳುಗಡೆಯಾದವರಿಗೆ ಬೇರೆಡೆ ಜಮೀನು ನೀಡು ಸ್ಥಳಾಂತರಿಸಲಿ. ಯಾವುದೋ ಒಂದೆರೆಡು ಜಾತಿಯ ಜನರಿಗೆ ಭೂಮಿ ಕೊಡುವ ಸಲುವಾಗಿ ಹಲವು ದಶಕಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಶಾಸಕರು ಮಾಡುತ್ತಿದ್ದು, ಇಂತಹ ಶಾಸಕರನ್ನು ಪಡೆದಿರುವುದು ಈ ತಾಲೂಕಿನ ರೈತರ ದೌರ್ಭಾಗ್ಯ ಎಂದು ಹೇಳಿದರು. ವಿವಿಸಾಗರ ಡ್ಯಾಂ ನ ಹಿನ್ನೀರಿನ ರೈತರ ಸಮಸ್ಯೆಯನ್ನು ಖುದ್ದು ವೀಕ್ಷಿಸಿ ಬಗೆಹರಿಸಲು ಸಹಕರಿಸಿ ಶಾಸಕ ಗೋವಿಂದಪ್ಪ ಹೇಳಿಕೆ ನೀಡಿದ್ದಾರೆ. ಆದರೆ ಆ ಭಾಗದ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ಮಾಡುತ್ತಿರುವ ಶಾಸಕರು ಹಿನ್ನಿರಿನ ರೈತರ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು. ಡ್ಯಾಂನಲ್ಲಿ 130 ಅಡಿ ನೀರು ತುಂಬಿದರೆ ಹಿನ್ನಿರಿನ ರೈತರ ಕೃಷಿ ಭೂಮಿಗೆ ಯಾವುದೇ ತೊಂದರೆಯಾಗುವುದಿಲ್ಲ. ಕಳೆದ 80 ವರ್ಷಗಳಿಂದ ಡ್ಯಾಂ ತುಂಬದ ಹಿನ್ನಲೆ ಆ ಭಾಗದ ರೈತರು ಹಿನ್ನೀರು ಸಂಗ್ರಹದ ಜಾಗದಲ್ಲಿ ಉಳುಮೆ ಮಾಡಿಕೊಂಡು ತೋಟಗಳನ್ನು ನಿರ್ಮಿಸಿಕೊಂಡಿದ್ದಾರೆ. ಅಂತಹ ಜಮೀನುಗಳಿಗೆ ತೊಂದರೆಯಾಗಿದೆ. 2022ರಲ್ಲಿ ಅತಿ ಹೆಚ್ಚು ಮಳೆಯಾಗಿದ್ದರಿಂದ ಕೆಲವು ರೈತರಿಗೆ ತೊಂದರೆಯಾಗಿತ್ತು. ಈ ತೊಂದರೆ ಪ್ರತಿ ವರ್ಷವೂ ಆಗಲ್ಲ. ಕೇವಲ ಒಂದು ವರ್ಷದಲ್ಲಿ ಆದ ತೊಂದರೆಯನ್ನೆ ಗಮನದಲ್ಲಿಟ್ಟುಕೊಂಡು ನೂರಾರು ವರ್ಷಗಳ ಬರಗಾಲದ ಸನ್ನಿವೇಶವನ್ನು ಮರೆಯಬಾರದು ಎಂದರು. ಹೊಸದುರ್ಗ ರೈತ ಸಂಘದ ಅಧ್ಯಕ್ಷ ಬೋರೇಶ್, ಹಿರಿಯೂರು ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೆಸ್ವಾಮಿ, ಸಿದ್ದರಾಮಪ್ಪ, ಬಯಲಪ್ಪ, ಸೋಮೇನಹಳ್ಳಿ ಸ್ವಾಮಿ, ಗೌರವಾಧ್ಯಕ್ಷ ಮಹೇಶ್ವರಪ್ಪ ಇದ್ದರು.