ಯಾರೂ ಕೇಳದೇ ವಾಲ್ಮೀಕಿ ಮಂಟಪ ಕಟ್ಟಿಸಿದ್ದೇನೆ

| Published : Oct 27 2024, 02:00 AM IST

ಸಾರಾಂಶ

ಹೊಳಲ್ಕೆರೆ: ಹೊಳಲ್ಕೆರೆಯಲ್ಲಿ ವಾಲ್ಮೀಕಿ ಮಂಟಪ ನಿರ್ಮಿಸುವಂತೆ ಯಾರೂ ಬಂದು ನನ್ನ ಬಳಿ ಪ್ರಸ್ತಾಪ ಮಾಡಲಿಲ್ಲ, ಒತ್ತಾಯಿಸಲಿಲ್ಲ. ಆದರೆ ನನ್ನ ಬದ್ಧತೆ ಕಾರಣಕ್ಕೆ ಮಂಟಪ ನಿರ್ಮಿಸಿದ್ದೇನೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ಹೊಳಲ್ಕೆರೆ: ಹೊಳಲ್ಕೆರೆಯಲ್ಲಿ ವಾಲ್ಮೀಕಿ ಮಂಟಪ ನಿರ್ಮಿಸುವಂತೆ ಯಾರೂ ಬಂದು ನನ್ನ ಬಳಿ ಪ್ರಸ್ತಾಪ ಮಾಡಲಿಲ್ಲ, ಒತ್ತಾಯಿಸಲಿಲ್ಲ. ಆದರೆ ನನ್ನ ಬದ್ಧತೆ ಕಾರಣಕ್ಕೆ ಮಂಟಪ ನಿರ್ಮಿಸಿದ್ದೇನೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು. ಪಟ್ಟಣದ ಸಂವಿಧಾನ ಸೌಧದಲ್ಲಿ ಮಹರ್ಷಿ ವಾಲ್ಮೀಕಿ, ರಾಜವೀರ ಮದಕರಿನಾಯಕ ಜಯಂತಿ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಗ್ರಾಮ ಪಂಚಾಯಿತಿ ಅಧ್ಯಕ್ಷರು-ಸದಸ್ಯರುಗಳಿಗೆ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮಹರ್ಷಿ ವಾಲ್ಮೀಕಿ ಜಯಂತಿಗೆ ರಜೆ ಘೋಷಿಸಿದ್ದನ್ನು ಯಾರೂ ಮರೆಯಬಾರದು ಎಂದರು.ಕಳೆದ ಮೂವತ್ತು ವರ್ಷಗಳಿಂದಲೂ ಯಾರು ಏನೆ ಕೇಳಲಿ ಬಿಡಲಿ ಎಲ್ಲೆಲ್ಲಿ ಏನೇನು ಸಮಸ್ಯೆಯಿದೆ ಎನ್ನುವುದನ್ನು ಅರ್ಥಮಾಡಿಕೊಂಡು ನಾನು ಹಗಲಿರುಳು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದರು. ರಾಜನಹಳ್ಳಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ಆಸ್ತಿ-ಅಧಿಕಾರಕ್ಕಾಗಿ ಅಣ್ಣ ತಮ್ಮಂದಿರ ತ್ಯಾಗವನ್ನು ರಾಮಾಯಣ ಎಂತಲೂ, ಅಧಿಕಾರ-ಆಸ್ತಿಗಾಗಿ ಅಣ್ಣ-ತಮ್ಮಂದಿರ ಜಗಳವನ್ನು ಮಹಾಭಾರತವೆಂದು ಕರೆಯಲಾಗುತ್ತದೆ. ಮಹರ್ಷಿ ವಾಲ್ಮೀಕಿರವರ ಆದರ್ಶವನ್ನು ಸಮಸ್ತ ಮಾನವ ಕುಲಕೋಟಿ ಪರಿಪಾಲಿಸಬೇಕು. ವಾಲ್ಮೀಕಿಯನ್ನು ಕೇವಲ ನಾಯಕ ಜನಾಂಗಕ್ಕೆ ಸೀಮಿತಗೊಳಿಸಬಾರದು ಎಂದು ಹೇಳಿದರು. ಭಾರತ ಜಾತ್ಯತೀತ ದೇಶ. ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರು ಹೆಚ್ಚಾಗಿರುವ ದೇಶದಲ್ಲಿ ಜಾತಿ ಗಣತಿ ಆಗಲೇಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕಿದೆ. ಇಲ್ಲವಾದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕಿಯವಾಗಿ ಆಳುವ ಸರ್ಕಾರಗಳು ಪ್ರಾತಿನಿಧ್ಯ ಕೊಡಬೇಕು. ಚುನಾವಣೆಯಲ್ಲಿ ನಮ್ಮ ಮತಗಳನ್ನು ಪಡೆಯುತ್ತಾರೆ. ಅಧಿಕಾರಕ್ಕೆ ಬಂದ ನಂತರ ಹಿತ ಕಾಪಾಡುವುದನ್ನು ಮರೆತು ಬಿಡುತ್ತಾರೆ. ವಾಲ್ಮೀಕಿ ಜಯಂತಿ, ಮದಕರಿನಾಯಕ ಜಯಂತಿಯಲ್ಲಿ ಎಲ್ಲರೂ ಒಟ್ಟಾಗಿ ಸೇರಿಕೊಂಡು ಸಂಘಟಿತರಾಗುವಂತೆ ಪರಿಶಿಷ್ಟ ವರ್ಗದವರಲ್ಲಿ ಜಾಗೃತಿ ಮೂಡಿಸಿದಾಗ ಮಾತ್ರ ಸರ್ಕಾರ ಸಾಂವಿಧಾನಿಕ ಹಕ್ಕು ನೀಡುತ್ತದೆ. ಇಲ್ಲದಿದ್ದರೆ ಸಾಮಾಜಿಕ ಹಿನ್ನೆಡೆಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಹೋದರ ಸಮಾಜದವರು ಸುಳ್ಳು ಜಾತಿ ಪ್ರಮಾಣಗಳನ್ನು ಪಡೆದುಕೊಂಡು ನಾಯಕ ಜನಾಂಗಕ್ಕೆ ಅನ್ಯಾಯವೆಸಗುತ್ತಿರುವುದರ ವಿರುದ್ಧ ಜಾಗೃತರಾಗಬೇಕಿದೆ. ಇಲ್ಲವಾದಲ್ಲಿ ನಮಗೆ ಸಿಗಬೇಕಾದ ನ್ಯಾಯಯುತವಾದ ಸೌಲಭ್ಯಗಳು ಅನ್ಯರ ಪಾಲಾಗುತ್ತವೆ ಎಂದರು. ಕಾರ್ಯಕ್ರಮದಲ್ಲಿ ಹೊಳಲ್ಕೆರೆ ತಾಲೂಕು ನಾಯಕ ವಾಲ್ಮೀಕಿ ಸಮಾಜದ ಅಧ್ಯಕ್ಷ ಸೂರೆಗೌಡ, ಮದಕರಿನಾಯಕ ಯುವ ಸೇನಾ ಸಮಿತಿಯ ಅಧ್ಯಕ್ಷ ರಾಜಣ್ಣ ಹಿರೇಕಂದವಾಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಜಿ.ಲೋಹಿತ್‍ಕುಮಾರ್, ಎಂ.ಬಿ.ತಿಪ್ಪೇಸ್ವಾಮಿ, ರಾಜಾ ಮದಕರಿನಾಯಕ, ಕೆ.ಜಿ.ಜಯಲಕ್ಷ್ಮಿ, ಜೆ.ಓ.ಪುಟ್ಟಸ್ವಾಮಿ, ಗೌರಿ ರಾಜ್‍ಕುಮಾರ್‌, ಪುರಸಭೆ ಸದಸ್ಯರುಗಳಾದ ಆರ್.ಎ.ಅಶೋಕ್, ಸುಧಾ ಬಸವರಾಜ್, ಗಿರಿಜಾ ಅಜ್ಜಯ್ಯ, ಭಾಗ್ಯಮ್ಮ ರಾಜಪ್ಪ, ಶೇಖರಪ್ಪ, ಸರಸ್ವತಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಹನುಮಂತಪ್ಪ ಭಾಗವಹಿಸಿದ್ದರು.