ಹೊಸಪೇಟೆ: ಮಹಿಳಾ ನೌಕರರು ಕಚೇರಿ ಕೆಲಸ ಮತ್ತು ಮನೆಯ ಜವಾಬ್ದಾರಿಗಳೆರಡನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಆದರೆ ಕಚೇರಿ ಕೆಲಸದ ಒತ್ತಡದ ಓಟದಲ್ಲಿ ತಮ್ಮ ಆರೋಗ್ಯದ ಕಡೆಗೆ ಗಮನಹರಿಸುತ್ತಿಲ್ಲ. ಆರೋಗ್ಯವಂತ ನೌಕರರಿಂದ ಮಾತ್ರ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ಇನ್ನರ್ ವೀಲ್ ಕ್ಲಬ್ ಆಫ್ ಹೊಸಪೇಟೆ ಹಾಗೂ ಆಯುಷ್ ಇಲಾಖೆ ಸಹಯೋಗದೊಂದಿಗೆ ಸೋಮವಾರ ರೋಟರಿ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್‌ನ ಮಹಿಳಾ ಸಿಬ್ಬಂದಿಗಳಿಗೆ ಆಯೋಜಿಸಲಾಗಿದ್ದ ಮಹಿಳಾ ನೌಕರರಿಗೆ ವಿಶೇಷ ವೈದ್ಯಕೀಯ ತಪಾಸಣೆ ಶಿಬಿರ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯವಂತರಾಗಿರಲು ಮಹಿಳಾ ನೌಕರರು ಕನಿಷ್ಠ ಆರು ತಿಂಗಳಿಗೊಮ್ಮೆ ಸಮಗ್ರ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಕೆಲಸದ ಒತ್ತಡವು ದೈಹಿಕ ಕಾಯಿಲೆಗಳಿಗಿಂತ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಹಿಳಾ ನೌಕರರು ದಿನದ ಅರ್ಧ ಗಂಟೆಯನ್ನಾದರೂ ಯೋಗ, ಧ್ಯಾನಕ್ಕೆ ಮೀಸಲಿಡಬೇಕು ಎಂದರು.ಇದರಿಂದ ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆ ನಿಯಂತ್ರಿಸಬಹುದು. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತಿರುವ ಕ್ಯಾನ್ಸರ್ ಹಾಗೂ ಇತರ ಸ್ತ್ರೀಸಂಬಂಧಿ ಕಾಯಿಲೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಆರೋಗ್ಯದಲ್ಲಿ ಏನಾದರೂ ಏರುಪೇರು ಉಂಟಾದಲ್ಲಿ ಯಾವುದೇ ಮುಜುಗರವಿಲ್ಲದೇ ತಜ್ಞ ವೈದ್ಯರಲ್ಲಿ ಸಮಾಲೋಚನೆ ನಡೆಸಬೇಕು. ಆರಂಭಿಕ ಹಂತದಲ್ಲಿಯೇ ಕಾಯಿಲೆ ಪತ್ತೆಯಾದರೆ ಅದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ. ಪ್ರತಿಯೊಬ್ಬರೂ ಇಂತಹ ವೈದ್ಯಕೀಯ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಈ ವೇಳೆ ಇನ್ನರ್ ವೀಲ್ ಕ್ಲಬ್ ಆಫ್ ಹೊಸಪೇಟೆ ಸಂಸ್ಥೆಯ ಅದ್ಯಕ್ಷೆ ನೈಮಿಷಾ, ಕಾರ್ಯದರ್ಶಿ ಡಾ. ಆರತಿ ರಾಜಪೂರ್, ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ. ಮುನಿವಾಸುದೇವ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.