ಕನಕಶ್ರೀ ಜ್ಞಾನ ವಿದ್ಯಾಮಂದಿರ ನಿರ್ಮಾಣಕ್ಕೆ ಅಡಿಗಲ್ಲು

| Published : Feb 04 2025, 12:30 AM IST

ಸಾರಾಂಶ

ಹೊಸಕೋಟೆ: ತನ್ನ ಅಧಿಕಾರಾವಧಿಯಲ್ಲಿ ನಗರದ ದಂಡುಪಾಳ್ಯ ದಿಣ್ಣೆಯಲ್ಲಿ ಕುರುಬರ ಸಂಘಕ್ಕೆನೀಡಿದ್ದ ಸ್ಥಳದಲ್ಲಿ ಶಾಲೆ ನಿರ್ಮಿಸುತ್ತಿರುವುದು ಉತ್ತಮ ಕೆಲಸ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್‌ ಹೇಳಿದರು.

ಹೊಸಕೋಟೆ: ತನ್ನ ಅಧಿಕಾರಾವಧಿಯಲ್ಲಿ ನಗರದ ದಂಡುಪಾಳ್ಯ ದಿಣ್ಣೆಯಲ್ಲಿ ಕುರುಬರ ಸಂಘಕ್ಕೆನೀಡಿದ್ದ ಸ್ಥಳದಲ್ಲಿ ಶಾಲೆ ನಿರ್ಮಿಸುತ್ತಿರುವುದು ಉತ್ತಮ ಕೆಲಸ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್‌ ಹೇಳಿದರು.

ನಗರದ ದಂಡುಪಾಳ್ಯ ದಿಣ್ಣೆಯಲ್ಲಿ ತಾಲೂಕು ಕುರುಬರ ಸಂಘ ಕನಕಶ್ರೀ ಜ್ಞಾನ ವಿದ್ಯಾಮಂದಿರ ಕಟ್ಟಡ ನಿರ್ಮಾಣ ಕಾಮಗಾರಿ ಅಡಿಗಲ್ಲು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 20 ಕೋಟಿ ರು. ಮೌಲ್ಯದ ಸ್ಥಳವನ್ನು ಕುರುಬರ ಸಂಘಕ್ಕೆ ನೀಡಿದ್ದರಿಂದ ಇಂದು ಜ್ಞಾನಮಂದಿರ ನಿರ್ಮಾಣವಾಗುತ್ತಿದೆ. ರಾಜ್ಯದಲ್ಲಿ ಕುರುಬ ಸಮುದಾಯ ಇನ್ನಷ್ಟು ಅಭಿವೃದ್ಧಿಯಾಗಬೇಕಿದೆ. ಕುರುಬ ಸಮುದಾಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ನಾವು ಅಭಿವೃದ್ಧಿಯಾಗಬೇಕು. ಚಿಕ್ಕಮಗಳೂರು ಬಳಿ ಇರುವಂತಹ ಕುರುಬ ಸಂಘದ ಜಮೀನಿನಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೆ. ಆದರೆ ಅದು ಕೂಡ ಸಾಕಾರ ಆಗಿಲ್ಲ. ಮೈಸೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಇಂಜಿನಿಯರಿಂಗ್ ಕಾಲೇಜು ಅರ್ಧಕ್ಕೆ ನಿಂತಿದೆ. ಅದರಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕುರುಬ ಸಮುದಾಯದ ರಾಜಕಾರಣಿಗಳು ಎಚ್ಚೆತ್ತುಕೊಂಡು ಸಮುದಾಯದ ಅಭಿವೃದ್ಧಿಗೂ ಶ್ರಮಿಸಬೇಕು ಎಂದು ಸಲಹೆ ಮಾಡಿದರು.

ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಕುರುಬ ಸಮುದಾಯ ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆ ಆಗಿಲ್ಲ. ವಾಣಿಜ್ಯವಾಗಿ ಯೋಚಿಸುವ ಕಾಲದಲ್ಲಿ ವಿದ್ಯಾ ಮಂದಿರ ಕಟ್ಟುವ ಯೋಚನೆ ಪ್ರಶಂಸನೀಯ. ತಾಲೂಕಿನಲ್ಲಿರುವ ಪ್ರತಿಯೊಬ್ಬ ಕುರುಬ ಸಮುದಾಯದ ಮನೆಯಿಂದಲೂ ವಿದ್ಯಾಮಂದಿರಕ್ಕೆ ದೇಣಿಗೆ ಬರಬೇಕು, ಆಗ ಮಾತ್ರ ಜವಾಬ್ದಾರಿ ಬರಲು ಸಾಧ್ಯ. ಪ್ರಮುಖವಾಗಿ ಸಮುದಾಯ ಅಭಿವೃದ್ಧಿ ಆಗಬೇಕಾದರೆ ರಾಜಕೀಯ ಬಲ ಇರಬೇಕು. ಅದರಿಂದ ಮುಂದಿನ ದಿನಗಳಲ್ಲಿ ಎಂಟಿಬಿ ನಾಗರಾಜ್ ಅವರಿಗೆ ರಾಜಕೀಯ ಉತ್ತಮ ಸ್ಥಾನಮಾನ ದಕ್ಕಬೇಕು ಎಂದರು.

ಕುರುಬರ ಸಂಘದ ಅಧ್ಯಕ್ಷ ರಘುವೀರ್ ಮಾತನಾಡಿ, ೮೦ರ ದಶಕದಲ್ಲಿ ಪ್ರಾರಂಭಗೊಂಡ ಸಂಘ ಸಾಕಷ್ಟು ಕೆಲಸ ಮಾಡಿದ್ದು ಕನಕ ಭವನ ಸಂಘದ ಪ್ರಥಮ ಮೈಲಿಗಲ್ಲು. ಈಗ ಶಾಲೆ ಸ್ಥಾಪನೆ ಎರಡನೇ ಮೈಲಿಗಲ್ಲಿಗೆ ಸಾಕ್ಷಿ. ೫ ಕೋಟಿ ವೆಚ್ಚದಲ್ಲಿ ವಿದ್ಯಾಮಂದಿರ ನಿರ್ಮಾಣ ಮಾಡುತ್ತಿದ್ದೇವೆ ಎಂದರು.

ಕೆಆರ್‌ಪುರಂ ಶಾಸಕ ಭೈರತಿ ಬಸವರಾಜ್, ಹನೂರು ಶಾಸಕ ಎಂ.ಆರ್.ಮಂಜುನಾಥ್, ನಗರಸಭೆ ಮಾಜಿ ಸದಸ್ಯ ಅನಂತ ರಾಮಯ್ಯ, ಮಾಜಿ ಅಧ್ಯಕ್ಷ ಶ್ರೀನಿವಾಸಯ್ಯ ಇತರರಿದ್ದರು.

ಬಾಕ್ಸ್ ................

ಸಮುದಾಯದ ಅಭಿಮಾನ ಮುಖ್ಯ

ಕುರುಬ ಸಮುದಾಯದ ಅಭಿವೃದ್ಧಿಗೆ ಅಭಿಮಾನ ಬರಬೇಕು. ನಮ್ಮ ಸಮುದಾಯಕ್ಕೆ ಅಭಿಮಾನ ಶೂನ್ಯತೆ ಪರಿಣಾಮ ಎಂಟಿಬಿ ನಾಗರಾಜ್ ಚುನಾವಣೆಯಲ್ಲಿ ಸೋಲಿಸಿ ಅವರನ್ನು ಮನೇಲಿ ಕೂರಿಸುವಂತಾಂಯಿತು. ಸಮುದಾಯದ ಅಭಿಮಾನ ನೋಡಲು ಉತ್ತರ ಕರ್ನಾಟಕ ಭಾಗಕ್ಕೆ ಒಮ್ಮೆ ಹೋಗಿ ಕಂಡರೆ ಗೊತ್ತಾಗುತ್ತೆ ಸಮುದಾಯ ಕಾರ್ಯಕ್ರಮಗಳಲ್ಲಿ ಜನರು ಹೇಗೆ ಸೇರಿರುತ್ತಾರೆ ಎಂದು ಕಾಗಿನೆಲೆ ಕನಕ ಗುರುಪೀಠ ತಿಂಥಣಿ ಬ್ರಿಡ್ಜ್ ನಂದಗುಡಿ ಶಾಖಾ ಮಠದ ಶ್ರೀ ಸಿದ್ದರಾಮಾನಂದ ಪುರಿ ಸ್ವಾಮೀಜಿ ತಿಳಿಸಿದರು.

ಬಾಕ್ಸ್ ...............

ಸೋಲಿನ ಅಸಮಾಧಾನ ಹೊರ ಹಾಕಿದ ಎಂಟಿಬಿ

ದೇವರು ನನಗೆ ಆಸ್ತಿ, ಅಂತಸ್ತು, ಆರೋಗ್ಯ, ರಾಜಕೀಯ ಸ್ಥಾನಮಾನ ಎಲ್ಲವನ್ನೂ ಕೊಟ್ಟಿದ್ದಾನೆ. ನಾನು ನನ್ನ ಅಧಿಕಾರಾವಧಿಯಲ್ಲಿ ಪಕ್ಷಾತೀತ, ಧರ್ಮಾತೀತ ಅಭಿವೃದ್ದಿ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಿರುವ ತೃಪ್ತಿ ಇದೆ. ನನ್ನ ಕೆಲಸದ ಲೆಕ್ಕ ದೇವರ ಬಳಿಯೂ ಇದೆ. ಹೊಸಕೋಟೆಯಲ್ಲಿ ದಶಕಗಳ ಕಾಲ ಆಡಳಿತ ಮಾಡಿದವರು ಮಾಡದ ಅಭಿವೃದ್ಧಿಯನ್ನು ನಾನು ಮಾಡಿದ್ದೇನೆ. ಆದರೆ ಇಲ್ಲಿ ಸಮುದಾಯ ಒಗ್ಗೂಡಿ ಮುಂದಿನ ಚುನಾವಣೆಗೆ ಮತ ಕೇಳಲು ಬಂದಿಲ್ಲ. ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಪರೋಕ್ಷವಾಗಿ ತಮ್ಮ ಸೋಲಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಫೋಟೋ : 3 ಹೆಚ್‌ಎಸ್‌ಕೆ 1

ಹೊಸಕೋಟೆ ನಗರದ ದಂಡುಪಾಳ್ಯ ದಿನ್ನೆಯಲ್ಲಿ ತಾಲೂಕು ಕುರುಬರ ಸಂಘ ಹಮ್ಮಿಕೊಂಡಿರುವ ಜ್ಞಾನ ಕನಕ ಶ್ರೀ ವಿದ್ಯಾಮಂದಿರದ ಶಂಕುಸ್ಥಾಪನೆಯನ್ನು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಮಾಜಿ ಸಚಿವ ಎಂಟಿಬಿ ನಾಗರಾಜ್ ನೆರವೇರಿಸಿದರು.

ಫೋಟೋ: 3 ಹೆಚ್‌ಎಸ್‌ಕೆ 2

ಹೊಸಕೋಟೆ ತಾಲೂಕು ಕುರುಬರ ಸಂಘ ಏರ್ಪಡಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಮಾಜಿ ಸಚಿವ ಎಂಟಿಬಿ ನಾಗರಾಜ್ ಕನಕದಾಸರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.