ಕಾಂಗ್ರೆಸ್ ಪಕ್ಷದಿಂದ ಆಗಲಿ, ನಮ್ಮ ರಾಜ್ಯ ಸರ್ಕಾರದಿಂದ ಅಧಿಕಾರ, ಲಾಭ ಪಡೆದವರು ಈ ಕಾಂಗ್ರೆಸ್ ಭವನ ನಿರ್ಮಾಣದ ಜವಾಬ್ದಾರಿ ವಹಿಸಿಕೊಳ್ಳಲಿ.
ಹಳಿಯಾಳ ಬ್ಲಾಕ್ ಕಾಂಗ್ರೆಸ್ ಭವನ ಕಟ್ಟಡದ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ
ಕನ್ನಡಪ್ರಭ ವಾರ್ತೆ ಹಳಿಯಾಳಕಾಂಗ್ರೆಸ್ ಪಕ್ಷದಿಂದ ಆಗಲಿ, ನಮ್ಮ ರಾಜ್ಯ ಸರ್ಕಾರದಿಂದ ಅಧಿಕಾರ, ಲಾಭ ಪಡೆದವರು ಈ ಕಾಂಗ್ರೆಸ್ ಭವನ ನಿರ್ಮಾಣದ ಜವಾಬ್ದಾರಿ ವಹಿಸಿಕೊಳ್ಳಲಿ. ನಿರ್ಮಾಣಕ್ಕೆ ಬೇಕಾಗಿರುವ ಸಂಪನ್ಮೂಲವನ್ನು ದಾನವಾಗಿ ನೀಡಲು ಮುಂದಾಗಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಕರೆ ನೀಡಿದರು.ಗುರುವಾರ ಸಂಜೆ ಪಟ್ಟಣದಲ್ಲಿ ಕಾಂಗ್ರೆಸ್ ಭವನ ಟ್ರಸ್ಟ್ ಹಾಗೂ ಹಳಿಯಾಳ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಜಂಟಿಯಾಗಿ ಆಯೋಜಿಸಿದ ಸಮಾರಂಭದಲ್ಲಿ ಹಳಿಯಾಳ ಬ್ಲಾಕ್ ಕಾಂಗ್ರೆಸ್ ಭವನ ಕಟ್ಟಡದ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ನಾನು ನಿಮಗೆ ಇಷ್ಟೇ ದಾನ ಮಾಡಿ ಎಂದು ಒತ್ತಾಯ ಮಾಡುವುದಿಲ್ಲ. ಆದರೇ ನಿಮ್ಮ ಸ್ಥಾನ, ಯೋಗ್ಯತೆ ನೋಡಿ ಕೈಬಿಚ್ಚಿ, ಯಾರೂ ಎಷ್ಟು ಲಾಭ ಪಡೆದಿದ್ದಾರೆ, ಪಡೆಯುತ್ತಿದ್ದಾರೆಂಬ ಪ್ರತಿಯೊಂದು ಬೆಳವಣಿಗೆ, ಮಾಹಿತಿಯು ನನ್ನ ಬಳಿಯಿದೆ. ನಾನು ಕಠಿಣವಾದರೇ ನಿಮಗೆ ಮುಂದೇ ತೊಂದರೆಯಾಗಲಿದೆ ಎಂಬುವುದನ್ನು ಮರೆಯಬೇಡಿ ಎಂದು ಅಪರೋಕ್ಷವಾಗಿಯೇ ಎಚ್ಚರಿಸಿದರು. ನಮ್ಮ ಕ್ರಿಯಾಶೀಲ ರಾಜ್ಯಾಧ್ಯಕ್ಷರು ರಾಜ್ಯದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯಗಳು ಸ್ವಂತ ಕಟ್ಟಡ ಹೊಂದಿರಬೇಕೆಂದು ಸೂಚಿಸಿದ್ದಾರೆ. ಈ ಹಿನ್ನೆಲೆ ರಾಜ್ಯದೆಲ್ಲೆಡೆ ಕಾಂಗ್ರೆಸ್ ಭವನದ ನಿರ್ಮಾಣ ಕಾರ್ಯಗಳು ಆರಂಭಗೊಂಡಿವೆ. ದಾಂಡೇಲಿಯಲ್ಲಿ ಭವನದ ಕಾರ್ಯ ಮುಕ್ತಾಯ ಹಂತಕ್ಕೆ ತಲುಪಿದೆ. ಜೋಯಿಡಾ ತಾಲೂಕಿನಲ್ಲಿ ಭವನಕ್ಕಾಗಿ ನಿವೇಶನ ದೊರೆಯುತ್ತಿಲ್ಲವಾಗಿದೆ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಕೈಗೊಂಡಿರುವ ಜನಪರ ಯೋಜನೆ ತಿಳಿಸುವ ಜವಾಬ್ದಾರಿಯು ಪ್ರತಿಯೊಬ್ಬರದ್ದಾಗಿದೆ. ಮತದಾರರ ನಾಡಿಮಿಡಿತ ಅರಿತುಕೊಂಡೆ ಪಕ್ಷ ಸಂಘಟನೆ ಮಾಡಬೇಕು ಎಂದ ದೇಶಪಾಂಡೆ, ಚುನಾವಣಾ ಸಮಯದಲ್ಲಿ ಸಂಘಟನೆಯ ಬಗ್ಗೆ ಗಂಭೀರವಾಗಿ ಕೆಲಸ ಮಾಡಿ ತದನಂತರ ಮನೆಯಲ್ಲಿ ಹೋಗಿ ಕುಳಿತರೇ ಜನಾಶೀರ್ವಾದವು ಮತಗಳ ರೂಪದಲ್ಲಿ ಪರಿವರ್ತನೆಯಾಗುವುದು ಕಷ್ಟಕರವಾಗಲಿದೆ ಎಚ್ಚರಿಸಿದರು.
ಕಾಲ ಕಳೆದಂತೆ ಅಭಿವೃದ್ಧಿಯ ಜೊತೆಯಲ್ಲಿ ಮಾನವನ ಮನಸ್ಥಿತಿಯು ಬದಲಾಗುತ್ತಿದೆ ಎಂದರು. ಹಿಂದಿನ ಕಾಲದಲ್ಲಿ ದೇವಸ್ಥಾನ, ಮಸೀದಿ, ಚರ್ಚ ಇವುಗಳನ್ನು ನಮ್ಮ ಹಿರಿಯರು ಸ್ವಂತ ಶ್ರಮದಿಂದ ನಿರ್ಮಿಸಿದ್ದಾರೆ. ಆದರೆ ಈಗ ಪ್ರತಿಯೊಂದು ಧಾರ್ಮಿಕ ಕೇಂದ್ರಗಳ ನಿರ್ಮಾಣಕ್ಕೆ ಸರ್ಕಾರದತ್ತ ನೋಡುವಂತಹ ಮನಸ್ಥಿತಿ ಬೆಳೆಯುತ್ತಿರುವುದು ಸಾಮಾಜಿಕ ದೃಷ್ಟಿಯಿಂದ ಸರಿಯಾದ ಬೆಳವಣಿಗೆಯಲ್ಲಿ ಎಂದರು.ಈ ಜೀವಮಾನದಲ್ಲಿ ಗಳಿಸಿದ್ದು ಎಲ್ಲವೂ ನಮಗಲ್ಲ, ಅದರಲ್ಲಿ ಕೆಲವಷ್ಟು ಪಾಲನ್ನು ಸಾಮಾಜಿಕ ಸೇವೆಗಾಗಿ, ಬಡವರಿಗಾಗಿ, ಅವಶ್ಯಕತೆಯುಳ್ಳವರಿಗಾಗಿ ಬಳಸಬೇಕು. ಈ ಸತ್ಯ ಅರಿವಾದರೇ ನಮ್ಮ ಬದುಕು ಸ್ವರ್ಗವಾಗಲಿದೆ ಎಂದರು. ವ್ಯಾಪಾರಿ ದೃಷ್ಟಿಯ ಮನೋಭಾವ ಬಿಟ್ಟು ಆದಷ್ಟು ಮಾನವೀಯ ಮೌಲ್ಯ ಹೃದಯವಂತಿಕೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾಂಗ್ರೆಸ್ ಮುಖಂಡ ಎಚ್.ಬಿ.ಪರಶುರಾಮ ಅವರು ಕಾಂಗ್ರೆಸ್ ಭವನ ನಿರ್ಮಾಣದ ಕುರಿತು ಸಂಕ್ಷೀಪ್ತ ಮಾಹಿತಿಯನ್ನು ನೀಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಇದೇ ವೇಳೆ ಪಕ್ಷದ ವಕ್ತಾರ ಉಮೇಶ ಬೊಳಶೆಟ್ಟಿ ₹1ಲಕ್ಷದ 1 ಸಾವಿರ, ಕಾಂಗ್ರೆಸ್ ಮುಖಂಡ ಉದ್ಯಮಿ ಅಲಿಂ ಆರ್. ಬಸರಿಕಟ್ಟಿ ₹5 ಲಕ್ಷಗಳನ್ನು ಭವನ ನಿರ್ಮಾಣಕ್ಕೆ ದೇಣಿಗೆ ನೀಡುವುದಾಗಿ ಘೋಷಿಸಿದರು. ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾರದಾ ರಾಥೋಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಡಿ.ಚೌಗಲೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಮಾಲಾ ಬ್ರೃಗಾಂಜ್, ಕಾಂಗ್ರೆಸ್ ಮುಖಂಡ ಸಂತೋಷ ರೇಣಕೆ, ಫಯಾಜ್ ಶೇಖ್, ಸಂಜು ಮಿಶಾಳೆ, ಅಜರ್ ಬಸರಿಕಟ್ಟಿ, ಮಂಜುನಾಥ ಬಂಡಿವಾಡ ಹಾಗೂ ಇತರರಿದ್ದರು. ಸತ್ಯಜಿತ ಗಿರಿ ಹಾಗೂ ದೇಮಾಣಿ ಶಿರೋಜಿ ಕಾರ್ಯಕ್ರಮ ನಿರ್ವಹಿಸಿದರು.