ಪಟ್ಟಣದಲ್ಲಿ ಶಾದಿ ಮಹಲ್ ನಿರ್ಮಾಣಕ್ಕೆ ಹುಳಿಯಾರಿನ ಉರ್ದು ಶಾಲೆ ಬಳಿ ಶಾಸಕ ಸಿ.ಬಿ. ಸುರೇಶ್ ಬಾಬು ಶಂಕುಸ್ಥಾಪನೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಹುಳಿಯಾರು

ಪಟ್ಟಣದಲ್ಲಿ ಶಾದಿ ಮಹಲ್ ನಿರ್ಮಾಣಕ್ಕೆ ಹುಳಿಯಾರಿನ ಉರ್ದು ಶಾಲೆ ಬಳಿ ಶಾಸಕ ಸಿ.ಬಿ. ಸುರೇಶ್ ಬಾಬು ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಈ ಭಾಗದಲ್ಲಿ ಶಾದಿ ಮಹಲ್ ನಿರ್ಮಾಣವಾಗಬೇಕು ಎಂಬುದು ಹಲವು ವರ್ಷಗಳ ಒತ್ತಾಯವಾಗಿತ್ತು. ಇಂದು ಆ ಕನಸು ನನಸಾಗುತ್ತಿದೆ. ನನಗೆ ದೊರೆತ ಅವಕಾಶದಲ್ಲಿ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ದಿ ಯೋಜಯಡಿ ನೀಡಿದ 6.25 ಕೋಟಿ ರು. ಅನುದಾನವನ್ನು ವಿವಿಧ ಸಮುದಾಯಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಮಡಿವಾಳ, ಉಪ್ಪಾರ, ಕುರುಬ ಸೇರಿದಂತೆ ವಿವಿಧ ಸಮಾಜಗಳಿಗೆ ಶಾಶ್ವತ ಸಮುದಾಯ ಭವನಗಳನ್ನು ನಿರ್ಮಿಸಲಾಗುತ್ತಿದ್ದು, ಆಯಾ ಸಮುದಾಯಗಳ ಅಮೂಲ್ಯ ಆಸ್ತಿಯಾಗಲಿವೆ ಎಂದು ತಿಳಿಸಿದರು. ಶಾದಿ ಮಹಲ್ ನಿರ್ಮಾಣಕ್ಕಾಗಿ ತಾವು 1 ಕೋಟಿ ರು. ಹಾಗೂ ಮುಖ್ಯಮಂತ್ರಿಗಳಿಂದ 1 ಕೋಟಿ ರು. ಅನುದಾನ ಪಡೆದು ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಸದಸ್ಯ ದಸ್ತುಗಿರ್ ಸಾಬ್ ಮಾತನಾಡಿ, ನಮ್ಮ ಸಮಾಜದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಶಾಸಕ ಸುರೇಶ್ ಬಾಬು ಅವರು ಉತ್ಸಾಹದಿಂದ ಭಾಗವಹಿಸುತ್ತಾರೆ. ಮುಸ್ಲಿಂ ಸಮಾಜಕ್ಕೆ ಬೆನ್ನೆಲುಬಾಗಿ ನಿಂತಿರುವ ಅವರು, ಶಾದಿ ಮಹಲ್ ನಿರ್ಮಾಣಕ್ಕೆ ಮುಂದಾಗಿರುವುದು ಸಮಾಜಕ್ಕೆ ನೀಡಿರುವ ಮಹತ್ವದ ಕೊಡುಗೆ ಎಂದು ಪ್ರಶಂಸಿಸಿದರು. ಹಾಗೂ ಮೌಲಾನಾ ಅಬುಲ್ ಕಲಾಂ ಆಜಾದ್ ಶಾಲೆಗೆ ನಿವೇಶನ ಒದಗಿಸುವಂತೆ ಶಾಸಕರಿಗೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪ್ರೀತಿ ರಾಘವೇಂದ್ರ, ಸದಸ್ಯರಾದ ಸಿದ್ದೀಕ್, ಬಿ.ಬಿ. ಫಾತೀಮಾ, ಎಸ್.ಆರ್.ಎಸ್. ದಯಾನಂದ್, ಜಹೀರ್ ಸಾಬ್, ರಾಘವೇಂದ್ರ ಸೇರಿದಂತೆ ಹಲವರು ಮಾತನಾಡಿದರು. ಈ ಸಂದರ್ಭದಲ್ಲಿ ಪ.ಪಂ. ಸದಸ್ಯ ಜುಬೇರ್, ಗೌಡಿ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.