ನನಗೆ ಯಾವುದೇ ಪಕ್ಷ ಇಲ್ಲ, ಜಿ.ಟಿ. ದೇವೇಗೌಡರೇ ಒಂದು ಪಕ್ಷ, ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವಾಗ ಎಲ್ಲರನ್ನೂ ಬೆಂಬಲಿಸಿದೆ. ಆದರೆ, ನನಗೆ ಯಾರೂ ನೆರವಿಗೆ ಬರಲಿಲ್ಲ.
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ತಾಲೂಕಿನ ದೊಡ್ಡಮಾರಗೌಡನಹಳ್ಳಿಯ ಮನೆಮಂಚಮ್ಮ ದೇವಾಲಯದ ಪುನರ್ ನಿರ್ಮಾಣಕ್ಕೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು.ಬಳಿಕ ಜಿ.ಟಿ. ದೇವೇಗೌಡ ಮಾತನಾಡಿ, ಗ್ರಾಮದವರ ಬೇಡಿಕೆಯಂತೆ ದೇವಸ್ಥಾನ ನಿರ್ಮಾಣವಾಗುತ್ತಿದೆ. 50 ಲಕ್ಷ ರು. ಅಂದಾಜು ಇದ್ದು, ದೇವಾಲಯ ಪೂರ್ಣಗೊಳಿಸಲಾಗುವುದು. ಯಾರೇ ಆದರೂ ಪಕ್ಷ, ಜಾತಿ ಇಲ್ಲದೇ ಪ್ರೀತಿಯಿಂದ ಬದುಕಬೇಕು. ದೇವರ ಆಶೀರ್ವಾದ ಎಲ್ಲರಿಗೂ ಬೇಕು. ದೇವಾಲಯದ ಅಭಿವೃದ್ಧಿಗೆ ಗ್ರಾಮಸ್ಥರು ನೆರವು ನೀಡಬೇಕು ಎಂದು ಮನವಿ ಮಾಡಿದರು.
ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಗ್ರಾಮಸ್ಥರು ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಅವರು, ಶಾಶ್ವತವಾಗಿ ಈ ಭಾಗದ ಕೆರೆಗಳಿಗೆ ನೀರು ತುಂಬಿಸಬೇಕಾದರೆ ಏತ ನೀರಾವರಿ ಆಗಬೇಕು. ಈ ಕುರಿತು ವಿಧಾನಸಭೆಯಲ್ಲಿ ಹೋರಾಟ ಮಾಡಿದ್ದೇನೆ ಎಂದರು.ಇದೇ ವೇಳೆ ಗ್ರಾಮದ ಬಂದಂತಮ್ಮ ದೇವಸ್ಥಾನಕ್ಕೆ ರಸ್ತೆ ನಿರ್ಮಿಸಬೇಕು ಎಂದು ಮಹಿಳೆಯರು ಮನವಿ ಮಾಡಿದರು.
ಶ್ರೀ ಮನೆಮಂಚಮ್ಮ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭಗವಂತಸ್ವಾಮಿ, ಉಪಾಧ್ಯಕ್ಷ ಡಿ. ಸ್ವಾಮಿ, ಕಾರ್ಯದರ್ಶಿ ಲೋಕೇಶ್, ಖಜಾಂಚಿ ಶಶಿಕುಮಾರ್, ಎಂಜಿನಿಯರ್ ಶ್ವೇತಾ, ಪಿಡಿಒ ಪ್ರದೀಪ್ ಕುಮಾರ್, ದೇವಸ್ಥಾನದ ಶಿಲ್ಪಿ ವೀರಭದ್ರಾಚಾರ್, ಗ್ರಾಮದ ಮುಖಂಡರಾದ ಟಿ. ಕೃಷ್ಣಪ್ಪ, ಕೃಷ್ಣ ನಾಯಕ, ನಾಡಗೌಡ ಶಿವಣ್ಣ, ಸೋಮಣ್ಣ, ದೊಡ್ಡೇಗೌಡ, ಸಿದ್ದರಾಜು, ಕೆಂಡಗಣ್ಣಸ್ವಾಮಿ, ಉದಯ್ ಕುಮಾರ್, ಅಮಾಸನಾಯಕ, ಕೆಂಡಗಣ್ಣ, ಮೋಹನ್ ಕುಮಾರ್ ಮೊದಲಾದವರು ಇದ್ದರು. ಡಿ.ಬಿ. ಶಂಕರ್ ನಿರೂಪಿಸಿದರು.ಜಿಟಿಡಿಯೇ ಒಂದು ಪಕ್ಷನನಗೆ ಯಾವುದೇ ಪಕ್ಷ ಇಲ್ಲ, ಜಿ.ಟಿ. ದೇವೇಗೌಡರೇ ಒಂದು ಪಕ್ಷ, ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವಾಗ ಎಲ್ಲರನ್ನೂ ಬೆಂಬಲಿಸಿದೆ. ಆದರೆ, ನನಗೆ ಯಾರೂ ನೆರವಿಗೆ ಬರಲಿಲ್ಲ ಎಂದು ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ಬೇಸರ ವ್ಯಕ್ತಪಡಿಸಿದರು.
ಡಾ.ಬಿ.ಆರ್. ಅಂಬೇಡ್ಕರ್ ಮತದಾನಕ್ಕೆ ಶಕ್ತಿ ನೀಡಿದ್ದು, ಅಭಿವೃದ್ಧಿ ಮಾಡುವವರಿಗೆ ವೋಟು ಹಾಕಬೇಕು. ಯಾರೇ ಮುಖ್ಯಮಂತ್ರಿಯಾಗಲಿ, ಯಾವುದೇ ಸರ್ಕಾರ ಬರಲಿ ಅಭಿವೃದ್ಧಿ ಕೆಲಸ ಮಾಡುವೆ ಎಂದು ಅವರು ಭರವಸೆ ನೀಡಿದರು.