ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೆಲ ದಿನಗಳ ಹಿಂದೆ ತಮ್ಮ ಸ್ನೇಹಿತನನ್ನು ಪಾರ್ಟಿ ಸೋಗಿನಲ್ಲಿ ಕರೆದೊಯ್ದು ಆತನಿಂದ ಚಿನ್ನಾಭರಣ ದೋಚಿದ್ದ ನಾಲ್ವರನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ.ಪವನ್ ಭಾಸ್ಕರ್, ಎಲ್.ಪ್ರೇಮ್ ಶೆಟ್ಟಿ, ಕೆ.ಎಸ್.ತರುಣ್ ಅಲಿಯಾಸ್ ಸೈಕೋ ಹಾಗೂ ಅಚಲ್ ನಾನಾ ಬಂಧಿತರಾಗಿದ್ದು, ಆರೋಪಿಗಳಿಂದ 93 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಚಿಕ್ಕಜಾಲ ಸಮೀಪದ ನಿವಾಸಿ ಚಂದನ್‌ನನ್ನು ಕರೆದೊಯ್ದು ಆರೋಪಿಗಳು ಸುಲಿಗೆ ಮಾಡಿ ಕಳುಹಿಸಿದ್ದರು. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಆತನ ಸ್ನೇಹಿತರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಈ ಬಂಧಿತರ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಹಾಗೂ ಬಿಕಾಂ ಓದುತ್ತಿದ್ದಾರೆ. ಹಲವು ದಿನಗಳಿಂದ ಚಂದನ್ ಹಾಗೂ ಪವನ್, ಅಚಲ್ ಸ್ನೇಹಿತರಾಗಿದ್ದರು. ಈ ಗೆಳೆತನದಲ್ಲಿ ಪಾರ್ಟಿ ಮಾಡುವ ನೆಪದಲ್ಲಿ ಚಂದನ್‌ನನ್ನು ಕಾರಿನಲ್ಲಿ ಯಲಹಂಕ ಕಡೆಗೆ ಕರೆದುಕೊಂಡು ಹೋಗಿದ್ದರು. ಬಳಿಕ ಮಾರ್ಗ ಮಧ್ಯೆ ತಮ್ಮ ಪರಿಚಯದ ತರುಣ್ ಹಾಗೂ ಪ್ರೇಮ್ ಮೂಲಕ ಚಂದನ್‌ಗೆ ಬೆದರಿಸಿ ಆತ ಧರಿಸಿದ್ದ ಚಿನ್ನ ದೋಚಿಸಿದ್ದರು. ಈ ಕೃತ್ಯದ ಬಗ್ಗೆ ಯಾರಿಗೂ ಹೇಳದಂತೆ ಚಂದನ್‌ಗೆ ಕೋರಿದ್ದ ಆರೋಪಿಗಳು, ಆಭರಣ ಕಳೆದು ಹೋಗಿದೆ ಎಂದು ತನ್ನ ಪೋಷಕರಿಗೆ ಹೇಳುವಂತೆ ಸೂಚಿಸಿದ್ದರು. ಆದರೆ ಘಟನೆ ನಡೆದ ಮರುದಿನ ಚಿಕ್ಕಜಾಲ ಠಾಣೆಗೆ ತೆರಳಿ ಚಂದನ್ ದೂರು ಕೊಟ್ಟಿದ್ದ. ತಮ್ಮ ವಿರುದ್ಧ ಎಫ್‌ಐಆರ್ ದಾಖಲಾದ ಕೂಡಲೇ ಪವನ್ ಹಾಗೂ ಅಚಲ್ ನಾಪತ್ತೆಯಾಗಿದ್ದರು. ಕೊನೆಗೆ ಆರೋಪಿಗಳನ್ನು ಪತ್ತೆ ಹಚ್ಚಿ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.