ರಕ್ತ ಚಂದನ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದ ಅಪ್ರಾಪ್ತ ಬಾಲಕ ಸೇರಿದಂತೆ ನಾಲ್ವರನ್ನು ಪ್ರತ್ಯೇಕವಾಗಿ ಬಂಧಿಸಿ ₹1.75 ಕೋಟಿ ಮೌಲ್ಯದ ರಕ್ತ ಚಂದನವನ್ನು ಹುಳಿಮಾವು ಹಾಗೂ ಆರ್.ಟಿ.ನಗರ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಕ್ತ ಚಂದನ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದ ಅಪ್ರಾಪ್ತ ಬಾಲಕ ಸೇರಿದಂತೆ ನಾಲ್ವರನ್ನು ಪ್ರತ್ಯೇಕವಾಗಿ ಬಂಧಿಸಿ ₹1.75 ಕೋಟಿ ಮೌಲ್ಯದ ರಕ್ತ ಚಂದನವನ್ನು ಹುಳಿಮಾವು ಹಾಗೂ ಆರ್.ಟಿ.ನಗರ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.ಥಣಿಸಂದ್ರದ ಅಹಮ್ಮದ್ ಪಾಷ, 16 ವರ್ಷದ ಆತನ ಸಹಚರ, ರಾಜಶೇಖರ್ ಮತ್ತು ವರ ಪ್ರಸಾದ್ ಬಂಧಿತರಾಗಿದ್ದು, ಆರೋಪಿಗಳಿಂದ 1 ಟನ್ ರಕ್ತ ಚಂದನ ಜಪ್ತಿಯಾಗಿದೆ. ಆಂಧ್ರಪ್ರದೇಶ ರಾಜ್ಯದಿಂದ ರಕ್ತ ಚಂದನ ಕಳ್ಳ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ಯಶಸ್ವಿ ದಾಳಿ ನಡೆಸಿದ್ದಾರೆ.
ಮೆಕ್ಯಾನಿಕ್ ಆದ ಸ್ಮಗ್ಲರ್:ಥಣಿಸಂದ್ರದಲ್ಲಿ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದ ಪಾಷ ಇತ್ತೀಚಿಗೆ ಹಣದಾಸೆಗೆ ರಕ್ತ ಚಂದನ ಕಳ್ಳ ಸಾಗಾಣಿಕೆಯಲ್ಲಿ ಆತ ತೊಡಗಿದ್ದ. ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ರಕ್ತಚಂದನ ದಂಧೆಕೋರನಿಂದ ಕಡಿಮೆ ಬೆಲೆಗೆ ಖರೀದಿಸಿ ತಮಿಳುನಾಡಿನ ವ್ಯಕ್ತಿಗಳಿಗೆ ದುಪ್ಪಟ್ಟು ಹಣಕ್ಕೆ ಮಾರುತ್ತಿದ್ದ. ಬಳಿಕ ಈ ರಕ್ತ ಚಂದನವು ಚೆನ್ನೈ ಬಂದರು ಸೇರಿ ಅಲ್ಲಿಂದ ಅಕ್ರಮವಾಗಿ ವಿದೇಶಕ್ಕೆ ರವಾನೆಯಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದು ಹುಳಿಮಾವು ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರಸ್ವಾಮಿ, ಸ್ಮಗ್ಲರ್‌ಗಳ ಬೆನ್ನತ್ತಿದ್ದು, ಗೊಟ್ಟಿಗೆರೆ ಕೆರೆ ಸಮೀಪ ರಕ್ತ ಚಂದನ ಸಾಗಿಸುವಾಗ ಪಾಷ ಖಾಕಿ ಬಲೆಗೆ ಬಿದ್ದಿದ್ದಾನೆ. ಬಳಿಕ ಆತನ ವಿಚಾರಣೆ ವೇಳೆ ಅಕ್ರಮದ ಕೃತ್ಯವು ಬಯಲಾಗಿದೆ.
ಇಬ್ಬರು ಪದವೀಧರರು ಸೆರೆ:ಆರ್.ಟಿ.ನಗರ ಠಾಣೆ ಪೊಲೀಸರಿಗೆ ಮತ್ತಿಬ್ಬರು ಸ್ಮಗ್ಲರ್‌ಗಳು ಸಿಕ್ಕಿಬಿದ್ದಿದ್ದಾರೆ. ಆಂಧ್ರಪ್ರದೇಶ ಮದನ ಪಲ್ಲಿಯ ರಾಜಶೇಖರ್ ಹಾಗೂ ವರ ಪ್ರಸಾದ್ ಬಂಧಿತರಾಗಿದ್ದು, ಆರೋಪಿಗಳಿಂದ ₹75 ಲಕ್ಷ ಮೌಲ್ಯದ ರಕ್ತಚಂದನ ಸಿಕ್ಕಿದೆ. ಕೆಎಚ್‌ಎಂ ಬ್ಲಾಕ್‌ನ ಈರುಳ್ಳಿ ಮೈದಾನದ ಬಳಿ ರಕ್ತ ಚಂದನ ಮಾರಾಟಕ್ಕೆ ಇಬ್ಬರು ಸಜ್ಜಾಗಿದ್ದಾಗ ಮಾಹಿತಿ ಪಡೆದು ಪೊಲೀಸರು ಬಂಧಿಸಿದ್ದಾರೆ. ಪದವಿ ಓದು ಮುಗಿದ ಬಳಿಕ ನಿರುದ್ಯೋಗಿಗಳಾಗಿದ್ದ ಈ ಆರೋಪಿಗಳು, ಹಣ ಸಂದಾಪನೆಗೆ ಅಡ್ಡದಾರಿ ತುಳಿದಿದ್ದಾರೆ. ಮದನಪಲ್ಲಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ರಕ್ತ ಚಂದನ ತುಂಡುಗಳನ್ನು ಕಳವು ಮಾಡಿದ್ದರು. ನಂತರ ಆ ಮರದ ತುಂಡುಗಳನ್ನು ಟಾಟಾ ಏಸ್‌ನಲ್ಲಿ ಅಡಗಿಸಿಟ್ಟುಕೊಂಡು ನಗರಕ್ಕೆ ತಂದು ಮಾರಲು ಆರೋಪಿಗಳು ಯತ್ನಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.