ಮಹಾ ಮಳೆಗೆ ನಾಲ್ಕು ಸೇತುವೆ ಜಲಾವೃತ

| Published : Jul 09 2024, 12:45 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿರುವುದರಿಂದ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಜಲಾವೃತಗೊಂಡ ಸೇತುವೆಗಳ ಸಂಖ್ಯೆ ನಾಲ್ಕಕ್ಕೇರಿದೆ. ದೂದಗಂಗಾ ನದಿಯ ಚಿಕ್ಕೋಡಿ ತಾಲೂಕಿನ ಮಲ್ಲಿಕವಾಡ-ದತ್ತವಾಡ, ನಿಪ್ಪಾಣಿ ತಾಲೂಕಿನ ದೂದಗಂಗಾ ನದಿಯ ಕಾರದಗಾ-ಬೋಜ್, ಕುನ್ನೂರ-ಭೋಜವಾಡಿ ಸಂಪರ್ಕಿಸುವ ಸೇತುವೆ ಮತ್ತು ಕೃಷ್ಣಾ ನದಿಗೆ ಅಡ್ಡಲಾಗಿರುವ ಮಾಂಜರಿ - ಭಾವನ ಸೌಂದತ್ತಿ ಸೇತುವೆ ಜಲಾವೃತಗೊಂಡಿವೆ. ಇವು ಕೆಳಹಂತದ ಸೇತುವೆಗಳಾಗಿದ್ದು, ಪರ್ಯಾಯ ಮಾರ್ಗಗಳ ಮೂಲಕ ಜನಸಂಚಾರ ವ್ಯವಸ್ಥೆ ಜಾರಿಯಲ್ಲಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿರುವುದರಿಂದ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಜಲಾವೃತಗೊಂಡ ಸೇತುವೆಗಳ ಸಂಖ್ಯೆ ನಾಲ್ಕಕ್ಕೇರಿದೆ. ದೂದಗಂಗಾ ನದಿಯ ಚಿಕ್ಕೋಡಿ ತಾಲೂಕಿನ ಮಲ್ಲಿಕವಾಡ-ದತ್ತವಾಡ, ನಿಪ್ಪಾಣಿ ತಾಲೂಕಿನ ದೂದಗಂಗಾ ನದಿಯ ಕಾರದಗಾ-ಬೋಜ್, ಕುನ್ನೂರ-ಭೋಜವಾಡಿ ಸಂಪರ್ಕಿಸುವ ಸೇತುವೆ ಮತ್ತು ಕೃಷ್ಣಾ ನದಿಗೆ ಅಡ್ಡಲಾಗಿರುವ ಮಾಂಜರಿ - ಭಾವನ ಸೌಂದತ್ತಿ ಸೇತುವೆ ಜಲಾವೃತಗೊಂಡಿವೆ. ಇವು ಕೆಳಹಂತದ ಸೇತುವೆಗಳಾಗಿದ್ದು, ಪರ್ಯಾಯ ಮಾರ್ಗಗಳ ಮೂಲಕ ಜನಸಂಚಾರ ವ್ಯವಸ್ಥೆ ಜಾರಿಯಲ್ಲಿದೆ.

ಜಲಾವೃತಗೊಂಡ ಕಾರದಗಾ-ಭೋಜ್‌ ಸೇತುವೆ ಮೇಲೆ ವಾಹನಗಳು ಸಂಚರಿಸುತ್ತಿವೆ. ಈ ಬಗ್ಗೆ ಜಿಲ್ಲಾಡಳಿತ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಜಲಾವೃತಗೊಂಡಿರುವ ಸೇತುವೆಗಳ ಎದುರು ಪೊಲೀಸ್‌ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇದರಿಂದಾಗಿ ಕೃಷ್ಣಾ ನದಿಗೆ ಸುಮಾರು 63 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ದೂಧಗಂಗಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬರುತ್ತಿದ್ದು, ಚಿಕ್ಕೋಡಿ ತಾಲೂಕಿನ ಯಕ್ಸಂಬಾದ ಹೊರವಲಯಲ್ಲಿರುವ ಮುಲ್ಲಾಣಕಿ ಬಾಬಾ ದರ್ಗಾಕ್ಕೆ ನೀರು ನುಗ್ಗಿದ್ದು, ದರ್ಗಾ ಜಲಾವೃತಗೊಂಡಿದೆ. ಕೃಷ್ಣಾ, ವೇದಗಂಗಾ, ದೂಧಗಂಗಾ ನದಿಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಬರುತ್ತಿರುವ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ಬೆಳಗಾವಿಯಲ್ಲಿ ಮಳೆ ಜೋರು:

ಬೆಳಗಾವಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆಯ ಅಬ್ಬರ ಮುಂದುವರಿದಿದೆ. ಇನ್ನು, ನಗರದ ಕೆಎಲ್‌ಇ ಆಸ್ಪತ್ರೆಯ ಬಳಿ ಬೃಹತ್‌ ಗಾತ್ರದ ಮರವೊಂದು ಕುಸಿದು ನೆಲಕ್ಕುರುಳಿದೆ. ಕಾರ್‌ ಸೇರಿದಂತೆ ಎರಡು ವಾಹನಗಳು ಜಖಂಗೊಂಡಿವೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮರ ಕುಸಿದು ರಸ್ತೆಯ ಮಾರ್ಗಮಧ್ಯದಲ್ಲೇ ಬಿದ್ದಿದ್ದರಿಂದ ಕೆಲಕಾಲ ಈ ಮಾರ್ಗದಲ್ಲಿ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿತ್ತು. ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಮರವನ್ನು ತೆರವುಗೊಳಿಸಿದ ಬಳಿಕ ಸಂಚಾರ ಸುಗಮವಾಯಿತು.

ಬೆಳಗಾವಿ, ಖಾನಾಪುರ, ಬೈಲಹೊಂಗಲ ಸೇರಿದಂತೆ ವಿವಿಧೆಡೆ ಮಳೆ ಆಗಿದೆ. ಖಾನಾಪುರ ತಾಲೂಕಿನ ಪಶ್ಚಿಮ ಘಟ್ಟ ಪ್ರದೇಶದಲ್ಲಿಯೂ ಎಡೆಬಿಡದೇ ಮಳೆ ಸುರಿಯುತ್ತಿದ್ದು, ಮಾರ್ಕಂಡೇಯ, ಮಲಪ್ರಭಾ ನದಿಗಳು ಉಕ್ಕಿ ಹರಿಯುತ್ತಿವೆ. ಇದೆ ವೇಳೆ ಖಾನಾಪುರ ತಾಲೂಕಿನಲ್ಲಿ ಮಳೆಯಾಗುತ್ತಿರುವುದರಿಂದ ನಾಲ್ಕು ಸೇತುವೆಗಳು ಮುಳುಗಡೆಯಾಗಿವೆ. ಇದರಿಂದ ಸಂಚಾರ ಕೂಡ ದುಸ್ತರವಾಗಿದೆ. ----------