ಸಾರಾಂಶ
ಹೊನ್ನಾವರ:
ತಾಲೂಕಿನ ಜಲವಳ್ಳಿಯ ನೆಲ್ಲಿಗದ್ದೆಯ ರಾಜೇಶ್ವರಿ ನಾಯ್ಕ ಧಾರವಾಡ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಯ ಭೌತಶಾಸ್ತ್ರ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಸೋಮವಾರ ನಡೆದ 73ನೇ ಘಟಿಕೊತ್ಸವ ಕಾರ್ಯಕ್ರಮದಲ್ಲಿ 4 ಚಿನ್ನದ ಪದಕವನ್ನು ರಾಜ್ಯಪಾಲರಿಂದ ಸ್ವೀಕರಿಸಿದರು.ಲಲಿತಾ ಮತ್ತು ಮಂಜುನಾಥ ನಾಯ್ಕ ಪುತ್ರಿಯಾದ ರಾಜೇಶ್ವರಿ ಪ್ರಸುತ್ತ ಬೆಂಗಳೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದಾರೆ. ಬಡತನ ಲೆಕ್ಕಿಸದೇ ಇವರು ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಿದ ಗ್ರಾಮೀಣ ಪ್ರತಿಭೆಯಾಗಿದ್ದಾರೆ. ಎಸ್‌ಎಸ್‌ಎಲ್‌ಸಿ ಕನ್ನಡ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಬಳಿಕ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರದ ಹಣದ ಮೂಲಕ ಪಿಯುಸಿ ಅಧ್ಯಯನಕ್ಕೆ ಅನುಕೂಲವಾಯಿತು. ಆನಂತರ ದೊರೆಯುವ ಶಿಷ್ಯವೇತನದ ಮೂಲಕ ಬಿಎಸ್ಸಿ ವಿಶ್ವವಿದ್ಯಾಲಯಕ್ಕೆ ತೃತೀಯ ಸ್ಥಾನ ಪಡೆದು ಎಂ.ಎಸ್ಸಿ ಆಯ್ಕೆ ಮಾಡಿಕೊಳ್ಳುವ ಮೂಲಕ ಈ ಸಾಧನೆ ಮಾಡಿದ್ದಾರೆ. ಶಿಕ್ಷಣದ ಜತೆಗೆ ಮೆಹಂದಿ ಹಾಗೂ ರಂಗೋಲಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.ತಂದೆ-ತಾಯಿ ಜತೆಗೆ ಅಣ್ಣ ಮಾರುತಿ, ಅಕ್ಕ ಅನುಪಮಾ ಹಾಗೂ ಶಿಕ್ಷಕವೃಂದದವರ ಸಹಕಾರದ ಮೇರೆಗೆ ಈ ಸಾಧನೆ ಮಾಡಲು ಸಾಧ್ಯವಾಯಿತು. ಗ್ರಾಮೀಣ ಭಾಗ, ಪಟ್ಟಣ ಎನ್ನದೇ ಎಲ್ಲರೂ ಪರಿಶ್ರಮ ಪಟ್ಟು ಅಧ್ಯಯನ ಮಾಡಿದರೆ ಸಾಧನೆ ಮಾಡಲು ಸಾಧ್ಯವಿದೆ ಎಂದು ರಾಜೇಶ್ವರಿ ನಾಯ್ಕ ಪತ್ರಿಕೆಗೆ ತಿಳಿಸಿದರು.