ಸಾರಾಂಶ
ವಾರ್ಷಿಕ ಸಾಮಾನ್ಯ ಸಭೆಕನ್ನಡಪ್ರಭ ವಾರ್ತೆ ವಿಜಯಪುರ
ಪಟ್ಟಣದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು.ಸಂಘದ ಸಿಇಒ ಎನ್.ಮಂಜುನಾಥ್ ಮಾತನಾಡಿ, ಸಂಘವು ಪ್ರಸಕ್ತ ವರ್ಷದಲ್ಲಿ 4,17,000 ರು. ನಿವ್ವಳ ಲಾಭಗಳಿಸಿದೆ. ೩೦೬ ಸಕ್ರಿಯವಾದ ಸದಸ್ಯರಿದ್ದಾರೆ. ಪ್ರತಿನಿತ್ಯ ೩೪೫೧ ಲೀ. ಹಾಲು ಸಂಗ್ರಹ ಮಾಡಲಾಗುತ್ತಿದೆ. ಪ್ರತಿ ಉತ್ಪಾದಕರಿಗೆ ಸಂಘದಿಂದ ಒಂದು ಲೀ.ಹಾಲಿಗೆ ₹೧.೫೦ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ತಿಳಿಸಿದರು.
ರೈತ ಕೆ.ಮಂಜುನಾಥ್ ಮಾತನಾಡಿ, ಡೇರಿಯ ಆಡಳಿತ ಮಂಡಳಿಗೆ ಒಂದೇ ವರ್ಷದಲ್ಲಿ ಎರಡು ಬಾರಿ ಚುನಾವಣೆ ನಡೆಯುತ್ತಿದೆ. ಒಂದೊಂದು ಬಾರಿಗೆ ₹೨.೫೦ ಲಕ್ಷ ಖರ್ಚು ಮಾಡಿದರೆ, ೫ ಲಕ್ಷ ಉತ್ಪಾದಕರ ಹಣ ಪೋಲಾಗುತ್ತಿದೆ. ಇದರಿಂದ ಡೇರಿ ನಷ್ಟ ಅನುಭವಿಸುತ್ತದೆ. ಈ ಬಗ್ಗೆ ಒಕ್ಕೂಟದಿಂದ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಚುನಾವಣೆಯಲ್ಲಿ ಸ್ಪರ್ಧಿಸುವವರೇ ಈ ಖರ್ಚನ್ನು ಭರಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದರು.ಬಮೂಲ್ ನಿರ್ದೇಶಕ ಬಿ.ಶ್ರೀನಿವಾಸ್ ಮಾತನಾಡಿ, ಹಾಲು ಉತ್ಪಾದಕರಿಗೆ ಬೇಸಿಗೆಯಲ್ಲಿ ಒಂದು ಲೀ. ಹಾಲಿಗೆ ೨ ರು. ಹೆಚ್ಚಿಗೆ ನೀಡಲಾಗುತ್ತದೆ. ನಂತರ ಕಡಿಮೆ ಮಾಡುತ್ತೇವೆ. ಒಕ್ಕೂಟದ ಸಭೆಯಲ್ಲೂ ೧.೫೦ ರು. ಕಡಿತಗೊಳಿಸಬೇಕು ಎನ್ನುವ ಪ್ರಸ್ತಾಪವಾಗಿದೆ. ಅವರ ಪ್ರಸ್ತಾಪವನ್ನು ನಾವು ವಿರೋಧಿಸಿದ್ದೇವೆ. ಈಗ ಹಾಲು ಉತ್ಪಾದನೆಯ ವೆಚ್ಚ ಜಾಸ್ತಿಯಾಗಿರುವ ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ, ಮನವರಿಕೆ ಮಾಡಿಕೊಡಲಾಗುತ್ತದೆ. ಒಂದು ವೇಳೆ ಸರ್ಕಾರದಿಂದ ಸ್ಪಂದನೆ ಸಿಗದಿದ್ದರೆ, ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಹಾಲು ಉತ್ಪಾದಕರೊಂದಿಗೆ ಹೋರಾಟ ಮಾಡಲಾಗುತ್ತದೆ ಎಂದರು.ಸಂಘಕ್ಕೆ ಹೆಚ್ಚು ಹಾಲು ಪೂರೈಕೆ ಮಾಡಿರುವ ರೈತರಿಗೆ ಹಾಲಿನ ಕ್ಯಾನ್ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳು ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಎಚ್.ಎಂ.ಅನಿಲ್ ಕುಮಾರ್, ವಿಶೇಷಾಧಿಕಾರಿ ಆರ್.ಚೇತನಾ, ಸಿಬ್ಬಂದಿ ಎನ್.ಸುಭ್ರಮಣ್ಯಶೆಟ್ಟಿ, ಪಿ.ನಾರಾಯಣಸ್ವಾಮಿ, ಎನ್.ಚಂದ್ರಶೇಖರ್, ಎಸ್.ಗಿರೀಶ್, ಹಾಲು ಉತ್ಪಾದಕರು ಇದ್ದರು.ವೆಟ್ ಕೇಕ್, ಬೀರ್ ವೇಸ್ಟ್ ಪಶು ಆಹಾರವಾಗಿ ಮಾರಾಟರೈತರನ್ನು ದಿಕ್ಕು ತಪ್ಪಿಸುವುದಕ್ಕಾಗಿ ಹೊರಗಿನಿಂದ ಸರಬರಾಜು ಮಾಡುತ್ತಿರುವ ವೆಟ್ ಕೇಕ್, ಬೀರ್ ವೇಸ್ಟ್‌ನ್ನು ಪಶು ಆಹಾರವನ್ನಾಗಿ ಮಾರಾಟ ಮಾಡುತ್ತಿದ್ದಾರೆ. ಕಡಿಮೆ ಬೆಲೆಗೆ ಸಿಗುತ್ತದೆ ಎನ್ನುವ ಕಾರಣಕ್ಕೆ ಇದರಿಂದ ಪಶುಗಳಿಗೆ ಯಾವುದೇ ಪ್ರಯೋಜನವಾಗಲ್ಲ. ಇದನ್ನು ನೀಡುವುದರಿಂದ ರಾಸುಗಳು ಗರ್ಭಧರಿಸದೇ ಇರಬಹುದು, ಹಾಲು ಉತ್ಪಾದನೆ ಕಡಿಮೆಯಾಗುತ್ತದೆ. ಹಲವಾರು ಆರೋಗ್ಯದ ಸಮಸ್ಯೆಗಳು ಉದ್ಭವವಾಗುತ್ತವೆ. ಆದ್ದರಿಂದ ರೈತರು ಎಚ್ಚೆತ್ತುಕೊಳ್ಳಬೇಕು. ರೈತರು ಡೇರಿಗೆ ಪೂರೈಕೆ ಮಾಡುವ ಹಾಲಿಗೆ ಗುಣಮಟ್ಟದ ಆಧಾರದಲ್ಲಿ ಬೆಲೆ ಸಿಗುತ್ತಿದೆ ಎಂದು ಬೆಂಗಳೂರು ಹಾಲು ಒಕ್ಕೂಟ ದೇವನಹಳ್ಳಿ ಶಿಬಿರದ ಉಪವ್ಯವಸ್ಥಾಪಕ ಡಾ.ಎಸ್.ರಾಜೇಶ್ ಹೇಳಿದರು.